ರಾಣೇಬೆನ್ನೂರು, ಏ. 28 – ಈಗಾಗಲೇ ಬಿಜೆಪಿ ಒಂದು ಸ್ಥಾನ ಪಡೆದಿದೆ. ಇನ್ನು 399 ಸ್ಥಾನ ಗೆಲ್ಲುವ ಪ್ರಯತ್ನ ನಮ್ಮದು. ನಿನ್ನೆ ನಡೆದ ರಾಜ್ಯದ 14 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ. ಮೇ 7 ರಂದು ನಡೆಯುವ 14 ಸ್ಥಾನಗಳು ಬಿಜೆಪಿ ಪಾಲಾಗಲಿವೆ. ಪರಿಸ್ಥಿತಿ ಹೀಗಿದ್ದು, ಕಾಂಗ್ರೆಸ್ ಸರ್ಕಾರ ರಚಿಸುವುದಾಗಲೀ, ಗ್ಯಾರಂಟಿ ಕೊಡುವುದಾಗಲೀ ಅಸಾಧ್ಯ ಎಂದು ಮಾಜಿ ಸಚಿವ ಭೈರತಿ ಬಸವರಾಜ ಹೇಳಿದರು.
ರಾಣೇಬೆನ್ನೂರು ಕುರುಬಗೇರಿಯ ಸೊಪ್ಪಿನ ಪೇಟೆ ಹಾಗೂ ಮೆಡ್ಲೇರಿ ಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ತಾವು ಅಧಿಕಾರದಲ್ಲಿದ್ದಾಗ ರಾಣೇಬೆ ನ್ನೂರು ನಗರಕ್ಕೆ 24×7 ಕುಡಿಯುವ ನೀರು ಸರಬರಾಜಿಗೆ ಅಂದಿನ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಆಣತಿ ಯಂತೆ 120 ಕೋಟಿ ಹಣ ಬಿಡುಗಡೆ ಮಾಡಿದ್ದು ಸೇರಿದಂತೆ, ಅಂದಿನ ಶಾಸಕ ಅರುಣ ಕುಮಾರ ಪೂಜಾರ ಅವರ ಪ್ರಯತ್ನಕ್ಕೆ ಸಹಕಾರ ನೀಡಿ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು ಎಂದು ಬೈರತಿ ಬಸವರಾಜ ವಿವರಿಸಿದರು.
ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರು ಎಸ್ಟಿ ಮೀಸಲಾತಿಗಾಗಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿ ಸರ್ವ ಸಮಾಜದವರನ್ನು ಸಮ ನಾಗಿ ಕಂಡವರು. ರಾಣೇಬೆನ್ನೂರು ಹಾಗೂ ಜಿಲ್ಲೆಯಾದ್ಯಂತ ಅಭಿವೃದ್ಧಿ ಕಾಮಗಾರಿ ಗಳನ್ನು ಕೈಗೊಂಡು ಅಭಿವೃದ್ಧಿಯ ಹರಿಕಾರರಾಗಿದ್ದರು ಎಂದು ಮಾಜಿ ಶಾಸಕ ಅರುಣ ಪೂಜಾರ ಹೇಳಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡ್ರನ್ನು ಶಿವಣ್ಣನವರ ಮಾತನಾಡಿ, ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಬಿಜೆಪಿ ಗೆಲ್ಲಿಸಬೇಕು ಎಂದರು.
ವೇದಿಕೆಯಲ್ಲಿ ಮುಖಂಡರಾದ ಭಾರತಿ ಜಂಬಗಿ, ಸಂತೋಷ ಪಾಟೀಲ, ಚಂದ್ರಶೇಖರ, ಪ್ರಕಾಶ ಪೂಜಾರ, ಕರಬಸಪ್ಪ ಮಾಕನೂರ ಮತ್ತಿತರರಿದ್ದರು.
ಕುರುಬರಿಗೆ ಭೈರತಿ ವಿಶೇಷ : ನನ್ನ ಸಮಾಜದ ಬಂಧುಗಳು ಯಾವುದೇ ಅಪಪ್ರಚಾರಕ್ಕೆ ಕಿವಿಗೊಡದೆ ಎಲ್ಲರನ್ನೂ ಸಮನಾಗಿ ಕಾಣುವ ಬಿಜೆಪಿ ಪಕ್ಷಕ್ಕೆ ಮತ ನೀಡಲೇಬೇಕು ಎಂದು ತಮ್ಮಲ್ಲಿ ವಿಶೇಷವಾಗಿ ಕೇಳಿಕೊಳ್ಳುತ್ತೇನೆ ಎಂದು ರಾಣೇಬೆನ್ನೂರು ನಗರ ಹಾಗೂ ಮೆಡ್ಲೇರಿ ಗ್ರಾಮದಲ್ಲಿ ಬಹಿರಂಗ ಭಾಷಣ ಮಾಡಿದ ಮಾಜಿ ಸಚಿವ ಭೈರತಿ ಬಸವರಾಜ ಅವರು ಕುರುಬ ಸಮಾಜವನ್ನು ಉದ್ದೇಶಿಸಿ ಮನವಿ ಮಾಡಿದರು.