ಐರಣಿ ಮನಿ ಮಠದ ಕಾರ್ಯಕ್ರಮದಲ್ಲಿ ಐಮಂಗಲ ವಿರಕ್ತ ಮಠದ ಶ್ರೀ ಹರಳಯ್ಯ ಸ್ವಾಮೀಜಿ
ರಾಣೇಬೆನ್ನೂರು, ಏ.24- ಮನುಷ್ಯರು, ಮೂಲಭೂತವಾದಿ ಗಳಿಂದ ದೇವರು-ಧರ್ಮಗಳ ಹೆಸರಿನಲ್ಲಿ ಗುಲಾಮತನಕ್ಕೆ ಸಿಲುಕುತ್ತಾರೆ ಎಂದು ಐಮಂಗಲ ವಿರಕ್ತ ಮಠದ ಶ್ರೀ ಹರಳಯ್ಯ ಸ್ವಾಮೀಜಿ ನುಡಿದರು.
ಐರಣಿ ಮನಿ ಮಠದ ಗಜದಂಡ ಶ್ರೀಗಳ ಪಟ್ಟಾಭಿಷೇಕ, ವಾರ್ಷಿಕೋ ತ್ಸವ ಹಾಗೂ ಮುಪ್ಪಿನಪ್ಪಜ್ಜನ ನೂತನ ರಥೋತ್ಸವದಲ್ಲಿ ಶ್ರೀಗಳು ಉಪದೇಶ ನೀಡಿದರು.
ದೇವರಿಂದ ಮನುಷ್ಯನಿಗೆ ಸಂಸ್ಕಾರ ಸಿಗದು. ಗುರುಗಳು ಹಾಗೂ ಮಠಗಳು ಸಂಸ್ಕಾರ ಕಲಿಸುವ ಪ್ರಯತ್ನ ಮಾಡುತ್ತವೆ ಎಂದು ಹೇಳಿದರು.
ಸಂಸ್ಕಾರ ಇಲ್ಲದವ ದೇವರು, ಧರ್ಮದ ಮತ್ತಿನಲ್ಲಿ ಕೊಲೆ, ಸುಲಿಗೆಯ ಚಟುವಟಿಕೆಯಲ್ಲಿ ತೊಡಗುತ್ತಾನೆ. ಜಗತ್ತಿನಲ್ಲಿ ಇಂತಹ ಮತ್ತಿನಲ್ಲಿಯೇ ಅನೇಕ ಮಹಾ ಯುದ್ಧಗಳು ನಡೆದಿವೆ. ಆದ್ದರಿಂದ ಜನರು ಆಷಾಢಭೂತಿಗಳಾಗದೆ ಉತ್ತಮ ಬದುಕು ಕಟ್ಟಿಕೊಳ್ಳಿ ಎಂದು ಬೋಧಿಸಿದರು.
ಮನಿಮಠದ ಗಜದಂಡ ಶ್ರೀಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಶ್ರೀಗಳು ಹೊಳೆಮಠದಿಂದ ತಮ್ಮನ್ನು ಹೊರಹಾಕಿದ ಸಂದರ್ಭ ನೆನೆಪಿಸಿಕೊಂಡು ವೈಭವದತ್ತ ಸಾಗುತ್ತಿರುವ ಈಗಿನ ಮಠದ ಅಭಿವೃದ್ಧಿಗೆ ಭಕ್ತರು ನೀಡುತ್ತಿರುವ ಸಹಾಯ,ಸಹಕಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಮುಪ್ಪಿನಪ್ಪಜ್ಜನ ಆತ್ಮದ ಬೆಳಕು ಮಠದ ಅಭಿವೃದ್ಧಿಗೆ ಪೂರಕವಾಗಿದೆ ಎಂದರು.
ರಥೋತ್ಸವದಲ್ಲಿ ಶಾಸಕ ಪ್ರಕಾಶ ಕೋಳಿವಾಡ ಮತ್ತು ಮಾಜಿ ಶಾಸಕ ಅರುಣ ಕುಮಾರ್ ಪೂಜಾರ ಭಾಗವಹಿಸಿದ್ದರು.
ಗಜದಂಡ ಶ್ರೀಗಳ 31ನೇ ಪಟ್ಟಾಭಿಷೇಕ ವಾರ್ಷಿಕೋತ್ಸವದ ಸ್ಮರಣೆಗೆ ಬೇಲೂರಿನ ಹನುಮಂತಪ್ಪ ಚಳಗೇರಿ ಶ್ರೀಗಳ ತುಲಾಭಾರ ನೆರವೇರಿಸಿದರು ಮತ್ತು ಐದು ಜೊತೆ ನೂತನ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದರು.
ಡಾ. ರವಿಶಂಕರ್ ಸ್ವಾಮೀಜಿ, ಶ್ರೀ ಜಯದೇವಿ ತಾಯಿ, ದಾವಣಗೆರೆಯ ಹನುಮಂತಪ್ಪ ಕ್ಷೀರಸಾಗರ, ಸಿದ್ದಾರೂಢ ಟ್ರಸ್ಟ್, ಸಿದ್ದನಗೌಡ ಹಿರೇಬಿದರಿ ಇದ್ದರು.
ಬಸವರಾಜ ಹೊನ್ನಾಳಿ ಸ್ವಾಗತಿಸಿದರು. ಕೊಟ್ರಪ್ಪ ನಿರೂಪಿಸಿದರು.