ನೇಹಾ ಕೊಲೆ ಪ್ರಕರಣ : ಎಐಎಂಎಸ್‌ಎಸ್‌ ಖಂಡನೆ

ದಾವಣಗೆರೆ, ಏ. 21- ಹುಬ್ಬಳ್ಳಿಯ ಬಿವಿಬಿ ಕಾಲೇಜಿನ ವಿದ್ಯಾರ್ಥಿನಿ ನೇಹಾ ಹಿರೇಮಠರ ಭೀಕರ ಕೊಲೆ ಪ್ರಕರಣವನ್ನು ಎಐಎಂಎಸ್‌ಎಸ್‌ ತೀವ್ರವಾಗಿ ಖಂಡಿಸಿದೆ. ಹಾಡು ಹಾಗಲೇ ಕಾಲೇಜಿನ ಆವರಣದಲ್ಲಿ ಬಹಿರಂಗವಾಗಿ ಹಲವಾರು ಬಾರಿ ಚೂರಿಯಿಂದ ಇರಿದು ಕೊಂದಿರುವ ಈ ವಿಕೃತ ಘಟನೆ ಇಡೀ ಸಮಾಜವೇ ತಲೆ ತಗ್ಗಿಸುವಂತೆ ಮಾಡಿದೆ. ಮೃತ ವಿದ್ಯಾರ್ಥಿನಿಯ ಕುಟುಂಬಕ್ಕೆ ಸಂತಾಪ ಸೂಚಿಸಿದ ಎಐಎಂಎಸ್‌ಎಸ್‌ ಅಪರಾಧಿಗೆ ನಿದರ್ಶನೀಯ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದೆ.

ಸಮಾಜದಲ್ಲಿ ಹೆಚ್ಚುತ್ತಿರುವ ಸಾಂಸ್ಕೃತಿಕ ಅಧಃಪತನ, ಇಂತಹ ಘಟನೆಗಳಿಗೆ ಕಾರಣವಾಗಿದೆ. ವಿದ್ಯಾರ್ಥಿ-ಯುವಜನರ ಮುಂದೆ ಯಾವುದೇ ಆದರ್ಶಗಳಿಲ್ಲದೇ, ನವೋದಯ ಚಿಂತಕರಾದ ರಾಮ್‌ಮೋಹನ್ ರಾಯ್, ವಿದ್ಯಾಸಾಗರ್, ಟ್ಯಾಗೋರ್, ಶರತ್ ಚಂದ್ರ, ಸುಬ್ರಹ್ಮಣ್ಯ ಭಾರತಿ, ಕುವೆಂಪು ಹಾಗೂ ಭಗತ್ ಸಿಂಗ್, ನೇತಾಜಿ, ಪ್ರೀತಿ ಲತಾ ಮತ್ತಿತರರ ಆದರ್ಶ ವಿಚಾರಗಳಿಲ್ಲದೇ ದಿಕ್ಕು ತಪ್ಪಿದ್ದಾರೆ. ಹೀಗಾಗಿ ಸಕಾರಾತ್ಮಕ, ಸಾಮಾಜಿಕ ಮನೋಭಾವವು ಕುಂಠಿತಗೊಳ್ಳುತ್ತಿದ್ದು, ವಿದ್ಯಾರ್ಥಿ ಯುವಜನರ ಸರ್ವತೋಮುಖ ಬೆಳವಣಿಗೆೆಗೆ ಅಡ್ಡಿ ಉಂಟುಮಾಡಿದೆ.

ಈ ಘಟನೆ ಕುರಿತು ನಿಷ್ಪಕ್ಷಪಾತ ತನಿಖೆಯಾಗಬೇಕು. ಕಾರಣಗಳು ಏನೇ ಕಂಡು ಬಂದರೂ ಯಾವುದೇ ದುರುದ್ಧೇಶಪೂರಿತ ಹಿತಾಸಕ್ತಿಗೆ ಮಣಿ ಹಾಕದಂತೆ ಇಲ್ಲಿಯವರೆಗೆ ಹರಡಿರುವ ವದಂತಿಗಳಿಗೆ ತೆರೆ ಎಳೆಯಬೇಕೆಂದು ಒತ್ತಾಯಿಸಿದೆ.

error: Content is protected !!