ಮೋದಿ ಕೊಟ್ಟಿರುವ ಆದ್ಯತೆ : ಅಭಿವೃದ್ಧಿಗೆ ಪೂರಕವಾಗುತ್ತಿರುವ ಸಹಕಾರ ಬ್ಯಾಂಕುಗಳು

ಮೋದಿ ಕೊಟ್ಟಿರುವ ಆದ್ಯತೆ : ಅಭಿವೃದ್ಧಿಗೆ ಪೂರಕವಾಗುತ್ತಿರುವ ಸಹಕಾರ ಬ್ಯಾಂಕುಗಳು

ದಾವಣಗೆರೆ, ಏ. 18 – ದೇಶದ ಅಭ್ಯುದಯದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಲ್ಲಿಸುತ್ತಿರುವ ಸೇವೆ ಅನನ್ಯ. ಸಹಕಾರ ಕ್ಷೇತ್ರಕ್ಕೂ ಅವರು ನೀಡಿರುವ ಕೊಡುಗೆ ಅಪಾರ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.

ಸ್ಥಳೀಯ ವಿನೋಬನಗರದಲ್ಲಿರುವ ದಾವಣಗೆರೆ -ಹರಿಹರ ಅರ್ಬನ್ ಸಹಕಾರ ಬ್ಯಾಂಕ್ ಸಮುದಾಯ ಭವನದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ನಿನ್ನೆ ಏರ್ಪಾ ಡಾಗಿದ್ದ ಜಿಲ್ಲಾ ಸಹಕಾರಿಗಳ ಸಮ್ಮಿಲನ ಕಾರ್ಯ ಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಧಾನಿ ಮೋದಿ ಕೊಟ್ಟಿರುವ ಆದ್ಯತೆಯ ಹಿನ್ನೆಲೆಯಲ್ಲಿ ಸಹಕಾರ  ಬ್ಯಾಂಕುಗಳು ಇದ್ದು, ರಾಷ್ಟ್ರೀ ಕೃತ ಬ್ಯಾಂಕುಗಳಿಗೆ ಸರಿಸಮಾನವಾಗಿ ಬೆಳೆಯುತ್ತಿವೆ ಎಂದು ಉದಾಹರಣೆಯೊಂದಿಗೆ ಅವರು ತಿಳಿಸಿದರು.

ಸಹಕಾರ ಕ್ಷೇತ್ರದ ಬೆಳವಣಿಗೆಗಾಗಿ ಕೇಂದ್ರದ ಬಿಜೆಪಿ ಸರ್ಕಾರವು ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸಿತ್ತು. ಸಹಕಾರ ಕ್ಷೇತ್ರದ ಧುರೀಣ ಅಮಿತ್ ಷಾ ಮೊದಲ ಸಹಕಾರ ಖಾತೆ ಸಚಿವರಾದರು. ಅವರ ದೂರ ದೃಷ್ಟಿಯಿಂದ ಹೊಸ ಕಾಯ್ದೆ ಕೂಡಾ ಜಾರಿಗೆ ಬಂತು. ಇದರಿಂದಾಗಿ ಸಹಕಾರ ಬ್ಯಾಂಕುಗಳು ದೊಡ್ಡ ಪ್ರಮಾಣದಲ್ಲಿ ರೈತರು, ಜನ ಸಾಮಾನ್ಯರು, ವ್ಯವಹಾರಸ್ಥರುಗಳಿಗೆ ಹಣಕಾಸಿನ ನೆರವು ನೀಡಲು ಸಹಕಾರಿಯಾಗುತ್ತಿವೆ. ಈ ಬ್ಯಾಂಕುಗಳು ರಾಜ್ಯದ ಅಭಿವೃದ್ಧಿ ಮತ್ತು ಎಲ್ಲಾ ಸಮುದಾಯಗಳ ಬೆಳವಣಿಗೆಗೆ ಇನ್ನಷ್ಟು ಉತ್ತಮ ಕೆಲಸ ನಿರ್ವಹಿಸುವಂತಾಗಲಿ ಎಂದು ಯಡಿಯೂರಪ್ಪ ಆಶಯ ವ್ಯಕ್ತಪಡಿಸಿದರು.

ಲೋಕಸಭಾ ಚುನಾವಣೆಯನ್ನು ಪ್ರಸ್ತಾಪಿಸಿ ಮಾತನಾಡಿದ ಯಡಿಯೂರಪ್ಪ, ಮೈಸೂರಿನ ಸಮಾವೇಶದಲ್ಲಿ ನರೇಂದ್ರ ಮೋದಿ ಮತ್ತು ಹೆಚ್.ಡಿ. ದೇವೇಗೌಡರು ಒಂದೇ ವೇದಿಕೆಯಲ್ಲಿ ಅನ್ಯೋನ್ಯತೆ ಯಿಂದ ಮಾತನಾಡಿದ್ದನ್ನು ಮೆಲುಕು ಹಾಕುತ್ತಾ, ಬಿಜೆಪಿ-ಜೆಡಿಎಸ್ ಹಾಲು-ಜೇನಿನಂತೆ ಹೊಂದಿಕೊಂಡು ಕೆಲಸ ಮಾಡುತ್ತಿವೆ ಎಂದು ಶ್ಲ್ಯಾಘಿಸಿದರು.

ಕಿಡಿಕಾರಿದ ಸಂಸದರು  : ಜಿಲ್ಲೆಯಲ್ಲಿ ಕಾಂಗ್ರೆಸ್ ನವರ ಹಾವಳಿ ಹೆಚ್ಚಾಗಿದ್ದು, ಹಣದ ಆಮಿಷದಿಂದ ಬಿಜೆಪಿಯ ಪಾಲಿಕೆ ಸದಸ್ಯರನ್ನು ಸೆಳೆಯುತ್ತಿದ್ದಾರೆ ಎಂದು ಲೋಕಸಭಾ ಸದಸ್ಯ ಜಿ.ಎಂ. ಸಿದ್ದೇಶ್ವರ ಅವರು ಕಿಡಿಕಾರಿದರು.

ತನ್ನ ಆರೋಗ್ಯದ ವ್ಯಂಗ್ಯವಾಡಿದ್ದ ಕಾಂಗ್ರೆಸ್ ನಾಯಕರು ತಮ್ಮ ಬಗ್ಗೆ ಇಲ್ಲ-ಸಲ್ಲದ ಆಪಾದನೆಗಳು ಸೇರಿದಂತೆ ಹಲವಾರು ವಿಚಾರಗಳಲ್ಲಿ ಷಡ್ಯಂತ್ರ ಮಾಡಿದರು ಎಂದು ಸಿದ್ದೇಶ್ವರ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಮಾಜಿ ಸಚಿವ ಮುರುಗೇಶ್ ನಿರಾಣಿ, ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್, ದಾವಣಗೆರೆ-ಹರಿಹರ ಅರ್ಬನ್ ಸಹಕಾರ ಬ್ಯಾಂಕ್ ಅಧ್ಯಕ್ಷ ಎನ್.ಎ. ಮುರುಗೇಶ್, ಸೌಹಾರ್ದ ಸಹಕಾರ ಒಕ್ಕೂಟದ ಅಧ್ಯಕ್ಷ ನಂಜನಗೌಡ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಮಾಜಿ ಅಧ್ಯಕ್ಷ ವೇಣುಗೋಪಾಲ ರೆಡ್ಡಿ, ಮುಖಂಡರುಗಳಾದ ದೇವರಮನೆ ಶಿವಕುಮಾರ್, ಯಶವಂತರಾವ್ ಜಾಧವ್, ಬಿ.ಜೆ. ಅಜಯ್ ಕುಮಾರ್, ರಾಜನಹಳ್ಳಿ ಶಿವಕುಮಾರ್, ಲೋಕಿಕೆರೆ ನಾಗರಾಜ್, ಶ್ರೀ ಮುರುಘರಾಜೇಂದ್ರ ಬ್ಯಾಂಕ್ ಉಪಾಧ್ಯಕ್ಷ ಎಸ್. ಓಂಕಾರಪ್ಪ, ಕವಿರತ್ನ ಕಾಳಿದಾಸ ಸೊಸೈಟಿಯ ಹೇಮಂತ್ ಕುಮಾರ್, ಡಿಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಚನ್ನಗಿರಿಯ ಸ್ವಾಮಿ, ಮಾಜಿ ಅಧ್ಯಕ್ಷರುಗಳಾದ ಹರಿಹರದ ಹಾಲೇಶಪ್ಪ,  ಬಿ.ಜಿ. ಬಣಕಾರ್, ನಿರ್ದೇಶಕ ಮಳಲ್ಕೆರೆ ಶೇಖರಪ್ಪ, ಜಿ.ಎಂ. ರುದ್ರೇಗೌಡ, ಹೆಚ್.ಎಂ. ನಾಗರಾಜ್ ಮತ್ತಿತರರು ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

error: Content is protected !!