ಹೊನ್ನಾಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತ ಪ್ರಚಾರ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ
ಹೊನ್ನಾಳಿ, ಏ.17- ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲಾ ಬರ ತಾಂಡವವಾಡು ತ್ತದೆ. ಅದೇ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಮಳೆ, ಬೆಳೆ ಸಮೃದ್ಧಿಯಾಗುತ್ತದೆ. ಕಾಂಗ್ರೆಸ್ ಪಕ್ಷ ಈ ದೇಶಕ್ಕೆ ಶಾಪವಿದ್ದಂತೆ, ಕಳೆಯಿದ್ದಂತೆ. ಅದನ್ನು ಬುಡ ಸಮೇತ ಕಿತ್ತು ಹಾಕಬೇಕು ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಕರೆ ನೀಡಿದರು.
ಹೊನ್ನಾಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುಂಬಳೂರು, ಕುಂದೂರು, ಯಕ್ಕನಹಳ್ಳಿ, ತಿಮ್ಲಾಪುರ ಗ್ರಾಮಗಳಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ಮತ ಯಾಚಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದರೆ ಜನ ನೆಮ್ಮಯಿಂದ ಜೀವನ ನಡೆಸುವುದು ಕಷ್ಟ. ಈ ನಿಟ್ಟಿನಲ್ಲಿ ಮತದಾರರು ಯೋಚಿಸಿ ಮತ ನೀಡಬೇಕು. ನೀವು ನೀಡುವ ಒಂದೊಂದು ಮತವೂ ನಿಮ್ಮನ್ನು ಸಮೃದ್ಧಿಯತ್ತ ಕೊಂಡೊಯ್ಯುತ್ತದೆ. ದೇಶವನ್ನು ಸುರಕ್ಷಿತವಾಗಿಡಲಿದೆ. ದೇಶ ಎಲ್ಲ ದೃಷ್ಟಿಯಿಂದ ಸಮೃದ್ಧವಾಗಿರಬೇಕು ಅಂದರೆ ನೀವು ನಿಮ್ಮ ಅಮೂಲ್ಯ ಮತಗಳನ್ನು ಕಮಲದ ಗುರುತಿಗೆ ನೀಡುವ ಮೂಲಕ ನನಗೆ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.
ಸಂಸದ ಜಿ.ಎಂ.ಸಿದ್ದೇಶ್ವರ ಹಾಗೂ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಜೊತೆ ಯಾಗಿ ಹೊನ್ನಾಳಿ ಕ್ಷೇತ್ರದಲ್ಲಿ ಸಾಕಷ್ಟು ಅಭಿ ವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. 27 ಕೋಟಿ ರೂ. ವೆಚ್ಚದಲ್ಲಿ ಗ್ರಾಮ ಸಡಕ್ ಯೋಜನೆಯಲ್ಲಿ ರಸ್ತೆಗಳ ನಿರ್ಮಾಣ, ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ 18 ಗ್ರಾಮಗಳ ಅಭಿ ವೃದ್ಧಿ ಮಾಡಲಾಗಿದೆ. ಫಸಲ್ ಬಿಮಾ ಯೋಜನೆ ಅಡಿ ಪ್ರಸಕ್ತ ಸಾಲಿನಲ್ಲಿ ಹೊನ್ನಾಳಿ ತಾಲೂಕಿನ ರೈತರಿಗೆ 15 ಕೋಟಿ ವಿಮೆ ಹಣ ಬಂದಿದೆ. ಲೋಕೋಪಯೋಗಿ ಇಲಾಖೆಗಳಿಂದ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಪ್ರತಿಯೊಂದು ಗ್ರಾಮಗಳಲ್ಲಿ ಸಮುದಾಯ ಭವನ, ಅಂಗನವಾಡಿ ಕಟ್ಟಡ, ರಂಗಮಂದಿರ, ಶಾಲಾ ಕೊಠಡಿ, ಪ್ರಯಾಣಿಕರ ತಂಗುದಾಣ, ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ, ಶುದ್ಧ ಕುಡಿವ ನೀರಿನ ಘಟಕಗಳಿಗೆ ಅನುದಾನ ನೀಡಿದ್ದಾರೆ ಎಂದರು.
ಸಿದ್ದೇಶಣ್ಣ ಬೇರೆಯಲ್ಲ, ನಾನು ಬೇರೆಯಲ್ಲ : ರೇಣುಕಾಚಾರ್ಯ
ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪರ ಹೊನ್ನಾಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಮತ ಯಾಚಿಸಿದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಸಿದ್ದೇಶಣ್ಣ ಬೇರೆಯಲ್ಲ, ನಾನು ಬೇರೆಯಲ್ಲ, ಇಬ್ಬರೂ ಒಂದೇ ಎಂದರು.
ಹೊನ್ನಾಳಿ ತಾಲ್ಲೂಕಿನ ಸಮಗ್ರ ಅಭಿವೃದ್ಧಿಯಲ್ಲಿ ಸಿದ್ದೇಶಣ್ಣನ ಕೊಡುಗೆ ಅಪಾರ. ತಾಲ್ಲೂಕಿನ ಅಭಿವೃದ್ಧಿ ವಿಚಾರವಾಗಿ ಹೋಗಿ ಯಾವಾಗ ಏನೇ ಕೇಳಿದ್ರೂ ಸಿದ್ದೇಶಣ್ಣ ಮಾಡಿಕೊಟ್ಟಿದ್ದಾರೆ. ಇಂದು ಅನೇಕ ಗ್ರಾಮಗಳಲ್ಲಿ ಸಿಸಿ ರಸ್ತೆ, ಶಾಲಾ ಕಟ್ಟಡ, ಶುದ್ಧ ಕುಡಿಯುವ ನೀರು ಸೇರಿದಂತೆ ಗ್ರಾಮಾಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿದ್ದಾರೆ. ಕೇಂದ್ರ ಸರ್ಕಾರದಿಂದ ಆಗಬೇಕಿದ್ದ ಕೆಲಸಗಳನ್ನು ಮುಂದೆ ನಿಂತು ಮಾಡಿಸಿಕೊಟ್ಟಿದ್ದಾರೆ. ನೀವು ಗಾಯತ್ರಿ ಸಿದ್ದೇಶ್ವರ್ ಅವರಿಗೆ ಹಾಕುವ ಒಂದೊಂದು ಮತವೂ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಹಾಕಿದಂತೆ, ಒಂದೊಂದು ಮತವೂ ನನಗೆ ಹಾಕಿದಂತೆ ಎಂದು ಮನವಿ ಮಾಡಿದರು.
ಕಂಬಳಿ ಹೊದಿಸಿದ ಗ್ರಾಮಸ್ಥರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತ ಯಾಚನೆಗೆ ಆಗಮಿಸಿದ್ದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರಿಗೆ ಕುಂಬಳೂರು ಗ್ರಾಮದಲ್ಲಿ ಕುರುಬ ಸಮುದಾಯದ ಮುಖಂಡರು ಕಂಬಳಿ ಹೊದಿಸಿ ಸ್ವಾಗತ ಕೋರಿ, ನಾವು ನಿಮ್ಮ ಜೊತೆ ಇದ್ದೇವೆ. ನಿಮ್ಮ ಗೆಲುವು ಖಚಿತ ಎಂದು ಭವಿಷ್ಯ ನುಡಿದರು.
ಬರಗಾಲದಿಂದ ರೈತರು ಜಾನುವಾರುಗಳಿಗೆ ಮೇವು ಒದಗಿಸುವುದು ಕಷ್ಟವಾಗಿದೆ. ರಾಜ್ಯ ಸರ್ಕಾರ ಹಾಲು ಉತ್ಪಾದಕರಿಗೆ ಸುಮಾರು 652 ಕೋಟಿ ಹಣ ನೀಡಬೇಕಿದೆ. ಹಾಲು ಉತ್ಪಾದಕರಿಗೆ ನೀಡಬೇಕಾದ ಪ್ರೋತ್ಸಾಹ ಧನ ನೀಡಲು ರಾಜ್ಯ ಸರ್ಕಾರದ ಬಳಿ ಹಣವಿಲ್ಲ. ಕಾಂಗ್ರೆಸ್ ಗ್ಯಾರಂಟಿ ಹೆಸರಿನಲ್ಲಿ ರಾಜ್ಯವನ್ನು ದಿವಾಳಿ ಮಾಡುತ್ತಿದೆ.
– ಗಾಯತ್ರಿ ಸಿದ್ದೇಶ್ವರ, ಬಿಜೆಪಿ ಅಭ್ಯರ್ಥಿ
ದೇಶಕ್ಕೆ ಮೋದಿ ಜೀ ಗ್ಯಾರಂಟಿಗಳು ಮಾತ್ರ ನಿಜವಾದ ಗ್ಯಾರಂಟಿಗಳು. ಮೋದಿ ಜೀ ನುಡಿದಂತೆ ನಡೆದಿದ್ದಾರೆ. 60 ವರ್ಷಗಳಿಂದ ದೇಶವನ್ನಾಳಿದ ಕಾಂಗ್ರೆಸ್ಸಿಗರು ಈಗ ಜನರ ಬಳಿ ಬಂದು ರಸ್ತೆ ಮಾಡಿಸುತ್ತೇವೆ, ಕುಡಿಯುವ ನೀರು ಕೊಡುತ್ತೇವೆ ಎಂದು ಹೇಳುತ್ತಾರೆ. ಇಷ್ಟು ವರ್ಷಗಳ ಕಾಲ ಇವರು ಮಾಡಿದ್ದಾದರು ಏನು…? ಜನರ ಹಣವನ್ನು ಲೂಟಿ ಮಾಡುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.
ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಈ ಭೂಮಿ ಮೇಲೆ ಸೂರ್ಯ, ಚಂದ್ರ ಇರುವುದು ಎಷ್ಟು ಸತ್ಯವೋ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿ ಆಗುವುದು, ಗಾಯತ್ರಿ ಅವರು ದಾವಣಗೆರೆ ಸಂಸದರಾಗುವುದು ಅಷ್ಟೇ ಸತ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನೀವೆಲ್ಲ ಹೇಗೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮನೆ ಮನೆಗೂ ತೆರಳಿ ಮತ ಕೇಳುತ್ತೀರೋ ಅದೇ ರೀತಿ ಈಗಲೂ ಮನೆ ಮನೆಗೆ ಹೋಗಿ ಗಾಯತ್ರಿ ಸಿದ್ಧೇಶ್ವರ ಅವರ ಪರ ಮತ ಕೇಳಬೇಕು. ನಮ್ಮ ವಿರೋಧಿಗಳ ಬಳಿ ಹೋಗಿ ಇದು ದೇಶದ ಚುನಾವಣೆ, ರಾಷ್ಟ್ರ ರಕ್ಷಣೆಯ ಚುನಾವಣೆ ಎಂದು ಹೇಳುವ ಮೂಲಕ, ಮೋದಿ ಅವರ ಸಾಧನೆಗಳನ್ನು ಮನವರಿಕೆ ಮಾಡಿಕೊಟ್ಟು ಮತಗಳ ಪರಿವರ್ತನೆ ಮಾಡಿ ಗಾಯತ್ರಿ ಸಿದ್ದೇಶ್ವರ ಅವರ ಕಮಲದ ಗುರುತಿಗೆ ಮತ ಹಾಕಿಸಬೇಕು ಎಂದು ರೇಣುಕಾಚಾರ್ಯ ಕರೆ ನೀಡಿದರು.
ಬಿಜೆಪಿ ತಾಲ್ಲೂಕು ಅಧ್ಯಕ್ಷ ಜೆ.ಕೆ.ಸುರೇಶ್, ಯುವ ಮುಖಂಡ ಜಿ.ಎಸ್.ಅನಿತ್ ಕುಮಾರ್, ಕುಬೇರಪ್ಪ, ಹನುಮಂತಪ್ಪ, ಅರಕೆರೆ ನಾಗರಾಜ್, ರಂಗನಾಥ್, ಸುರೇಂದ್ರ, ಮಾರುತಿ, ಮುರುಗೇಂದ್ರಪ್ಪ, ಯೋಗೇಶ್, ವಿರೂಪಾಕ್ಷಪ್ಪ, ಸೇರಿದಂತೆ ಸಾವಿರಾರು ಕಾರ್ಯಕರ್ತರು ಸಾಥ್ ನೀಡಿದರು.