ಹೊನ್ನಾಳಿ, ಏ. 12 – ಬಿರು ಬಿಸಿಲಿನ ತೀವ್ರತೆಗೆ ಹೈರಾಣಾಗಿದ್ದ ಹೊನ್ನಾಳಿ ಜನತೆಗೆ ಶುಕ್ರವಾರ ಸಂಜೆ ಗಂಟೆಗೂ ಹೆಚ್ಚು ಕಾಲ ಸುರಿದ ಮಳೆ ತಂಪೆರೆಯುವಂತೆ ಮಾಡಿತು. ಸಂಜೆ 4 ಗಂಟೆ ಸುಮಾರಿಗೆ ಜೋರಾಗಿ ಗಾಳಿ ಬೀಸಿ ಮಳೆ ಬರುವ ಮುನ್ಸೂಚನೆ ನೀಡಿತ್ತು.
ಹಿಂದೆಂದಿಗಿಂತಲೂ ದಾವಣಗೆರೆ ಜಿಲ್ಲಾದ್ಯಂತ ತಾಪಮಾನ ಹೆಚ್ಚಾಗಿದ್ದು, ಅಡಿಕೆ ಬೆಳೆ ಬೆಳೆದ ರೈತರು ತಮ್ಮ ಜಮೀನುಗಳಿಗೆ ತುಂಗಾ-ಭದ್ರಾ ನದಿ, ಕೆರೆಗಳಿಂದ ಟ್ಯಾಂಕರ್ ಮೂಲಕ ನೀರುಣಿಸಿ ತಮ್ಮ ತೋಟವನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಇನ್ನೂ ಜನಸಾಮಾನ್ಯರು ಉರಿದೆ ಬೆಂದೆ ಎನ್ನುವಂತೆ ಬಿಸಿಲಿನ ಬೇಗೆಗೆ ತತ್ತರಿಸಿ ಹೋಗಿದ್ದರು. ಶಾಲಾ-ಕಾಲೇಜುಗಳಿಗೆ ರಜೆ ಇರುವ ಹಿನ್ನೆಲೆಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಬಿಸಿಲಿನ ತಾಪಕ್ಕೆ ಹೆದರಿ ಹೊರಗೆ ಬಿಡದೇ ಮನೆಯಲ್ಲಿರಿಸಿಕೊಳ್ಳಲು ಹೈರಾಣಾಗಿ ಹೋಗಿದ್ದರು.