ಡಾ. ಸ್ಯಾಮುಯಲ್ ಹಾನಿಮನ್‌ ಹೋಮಿಯೋಪತಿ ವೈದ್ಯಕೀಯ ಪದ್ಧತಿಯ ಪಿತಾಮಹ

ಡಾ. ಸ್ಯಾಮುಯಲ್ ಹಾನಿಮನ್‌ ಹೋಮಿಯೋಪತಿ ವೈದ್ಯಕೀಯ ಪದ್ಧತಿಯ ಪಿತಾಮಹ

ಹಾನಿಮನ್‌ರ 269 ನೇ ಜನ್ಮ ದಿನಾಚರಣೆ ಪ್ರಯುಕ್ತ ನಾಳೆ ರಾಷ್ಟ್ರಮಟ್ಟದ ವೈದ್ಯಕೀಯ ವಿಚಾರ ಸಂಕಿರಣ

ಸರಿಸುಮಾರು 230 ವರ್ಷಗಳಿಗಿಂತಲೂ ಹೆಚ್ಚು ಕಾಲದ ಇತಿಹಾಸವಿರುವ ಹೋಮಿಯೋಪಥಿ ವೈದ್ಯಕೀಯ ಪದ್ದತಿ, ಜರ್ಮನಿ ಮೂಲದ ಒಬ್ಬ ಅತ್ಯಂತ ಮೇಧಾವಿ ಹಾಗೂ ರೋಗಿಗಳ ಬಗೆಗಿನ ಅಪಾರ ಕಾಳಜಿ ಹೊಂದಿದ್ದ ಡಾ. ಸ್ಯಾಮುಯಲ್ ಹಾನಿಮನ್‌ರ ಸತತ ಸಂಶೋಧನೆ ಹಾಗೂ ಅವಿರತ ಪರಿಶ್ರಮಗಳ ಫಲವೇ ಇದು ಎಂದರೆ ಉತ್ಪ್ರೇಕ್ಷೆಯೇನಲ್ಲ.

1755 ಏಪ್ರಿಲ್ 10 ರಂದು ಜರ್ಮನ್ನ ಮೆಯಿಸನ್ ಎನ್ನುವ ಊರಿನಲ್ಲಿ ಗೋಟಿಫ್ರಿಎಡ್ ಬಡ ದಂಪತಿ ಮಗನಾಗಿ ಜನಿಸಿದ ಹಾನಿಮನ್ ರಿಗೆ ವಿದ್ಯಾರ್ಥಿ ದೆಸೆಯಿಂದಲೂ ಅತ್ಯಂತ ಮೇಧಾವಿಯಾಗಿದ್ದರು. ಅಲೋಪಥಿ ವೈದ್ಯಕೀಯ ವೃತ್ತಿಯನ್ನು 21ನೇ ವಯಸ್ಸಿನಲ್ಲಿಯೇ ಮುಗಿಸಿದ್ದರು. ರಾಸಾಯನಿಕ  ಶಾಸ್ತ್ರ, ವೈದ್ಯಕೀಯ  ಶಾಸ್ತ್ರ ಅತ್ಯಂತ ಆಳವಾಗಿ ಅಭ್ಯಸಿಸಿದ್ದರು. ಅಲ್ಲದೇ, ಸುಮಾರು 12 ಭಾಷೆಗಳ ಪಾಂಡಿತ್ಯವೂ  ಇವರಿಗಿದ್ದಿದು ವಿಶೇಷ. ವೈದ್ಯನಾಗಿ ತಾನು ನಿಜವಾಗಲೂ ಆಗ ಬಳಕೆಯಲ್ಲಿರುವ ಪದ್ಧತಿಯಿಂದ ಏನೂ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ಪಾಪ ಪ್ರಜ್ಞೆ ಅವರನ್ನು ಕಾಡಿತ್ತು. ಆದ್ದರಿಂದ ವೈದ್ಯ ವೃತ್ತಿಯನ್ನು ತೊರೆದು ತಮ್ಮಲ್ಲಿರುವ ಭಾಷಾ ಜ್ಞಾನದಿಂದ ದೊಡ್ಡ ದೊಡ್ಡ ವೈದ್ಯಕೀಯ ಹಾಗೂ ಇತರ ಇಂಗ್ಲಿಷ್ ಗ್ರಂಥಗಳನ್ನು  ಜರ್ಮನ್ ಭಾಷೆಗೆ  ತರ್ಜುಮೆ ಮಾಡುವ ಕೆಲಸಕ್ಕೆ ಕೈ ಹಾಕಿದರು.

ಇಂತಹ ಕೆಲಸದಲ್ಲಿ ತೊಡಗಿರುವಾಗಲೇ cullen’s materia medica ಅನ್ನುವ ಗ್ರಂಥದಲ್ಲಿ ದೊರೆತ ಮಾಹಿತಿಯಂತೆ’ ಯಾವ ವಸ್ತುವು ಆರೋಗ್ಯವಂತ ಮನುಷ್ಯನಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದಾಗ ಯಾವ ಗುಣ ಲಕ್ಷಣಗಳನ್ನು ಉತ್ಪತ್ತಿ ಮಾಡುವುದೋ ಅದೇ ವಸ್ತುವನ್ನು ಅತ್ಯಂತ ಸಣ್ಣ ಪ್ರಮಾಣದಲ್ಲಿ ಇದೇ ಗುಣ ಲಕ್ಷಣವಿರುವ ಕಾಯಿಲೆಗಳಿಗೆ ಔಷಧಿ ರೂಪ ದಲ್ಲಿ ರೋಗಿಗೆ ನೀಡಿದಲ್ಲಿ ಇದು ಆ ರೋಗಿಯನ್ನು ಸಂಪೂರ್ಣವಾಗಿ ಗುಣ ಪಡಿಸುವುದು ಎಂಬ ಸಿದ್ಧಾಂತ ಅರಿತು ಕೊಂಡರು. ಈ ಸಿದ್ದಾಂತವನ್ನು `ಸೀಮಿಲಿಯ ಸೀಮಿಲಿಬಿಸ್ ಕ್ಯೂರೆಂತರ್‌’ ಎಂದು ಕರೆಯುತ್ತಾರೆ. ಈ ಸಿದ್ದಾಂತದ ಮೇಲೆ ಸತತ ಪ್ರಯೋಗಗಳು, ಆಳವಾದ ಅಧ್ಯಯನ ಹಾಗೂ ಗಹನ ಚಿಂತನೆಯನ್ನು ನಡೆಸಿ 7 ದೃಢ ಹಾಗೂ ಚಿರ ಸಿದ್ದಾತಗಳನ್ನು ರೂಪಿಸಿ ಹೊಸ ವೈದ್ಯಕೀಯ ಪದ್ದತಿ ಹೋಮಿಯೋಪತಿಗೆ 1796 ರಲ್ಲಿ ನಾಂದಿ ಹಾಡಿದರು. ಈ ಸಿದ್ದಾಂತಗಳೂ ಈಗಲೂ ಬಳಕೆಯಲ್ಲಿವೆ. (7 cardinal principles)  ಈ ಸಿದ್ದಾಂತ ವನ್ನು ತಳಹದಿಯನ್ನಾಗಿ ಇಟ್ಟುಕೊಂಡು ರೋಗಿಗಳ ಚಿಕಿತ್ಸೆ ಆರಂಭ ಮಾಡಿದರು. ಇದಕ್ಕೆ ಪೂರಕವಾದ ಪ್ರಬಂಧಗಳನ್ನು ಮಂಡಿಸಿದರು. ಪುಸ್ತಕಗಳನ್ನು ಬರೆದು ಪ್ರಕಟಿಸಿದರು. ಆಗಿನ ಕಾಲದಲ್ಲಿ ಪ್ರಚಲಿತವಿದ್ದ ಅಲೋಪತಿ ವೈದ್ಯಕೀಯ ಪದ್ಧತಿಯ ಔಷಧ ಕಂಪನಿಗಳು, ವೈದ್ಯರುಗಳಿಂದ ಅತ್ಯಂತ ತೀವ್ರ ವಿರೋಧ ವ್ಯಕ್ತ ವಾದರೂ, ಇಂಗ್ಲೆಂಡ್ ಫ್ರಾನ್ಸ್ ಹಾಗೂ ಜರ್ಮನ್ ಹೀಗೆ ಬೇರೆ ಬೇರೆ ರಾಷ್ಟ್ರಗಳ, ಸತ್ಯ ಮಾರ್ಗದಲ್ಲಿ ನಡೆದು ನಿಜವಾಗಿಯೂ ರೋಗಿಗಳ ಬಗ್ಗೆ ಕಳಕಳಿ ಹಾಗೂ ರೋಗಿಯ ನೊಂದ ಜೀವಕ್ಕೆ ಶಾಶ್ವತ ಪರಿಹಾರ ನೀಡಲೇ ಬೇಕೆಂದಿದ್ದ ವೈದ್ಯರುಗಳ ಬೆಂಬಲದಿಂದ ಹಾನಿಮನ್ ಪ್ರಾರಂಭಿಸಿದ ಈ ಹೋಮಿಯೋಪಥಿ ಪದ್ದತಿ ಇವತ್ತಿನವರೆಗೂ ಜೀವಂತ ವಾಗಿದೆ. ಕೋಟ್ಯಂತರ ಜನರ ಮನೆ ಮನಗಳಲ್ಲಿ ನೆಲೆಸಿ ಅವರ ಆರೋಗ್ಯ ಕಾಯುವಲ್ಲಿ ಯಶಸ್ವಿಯಾಗಿದೆ ಎಂದರೆ ತಪ್ಪಾಗಲಾರದು.

ಹಾನಿಮನ್ ರ 269 ನೇ ಜನ್ಮದಿನ ಏಪ್ರಿಲ್ 10 ವಿಶ್ವದೆಲ್ಲೆಡೆ ಆಚರಿಸಲ್ಪಡುತ್ತಿದೆ. ಇಂದಿನ ಪ್ರಸ್ತುತ ವೈದ್ಯಕೀಯ ಜಗತ್ತಿನಲ್ಲಿ, ದಿನ ದಿನ ಹೊಸ ಹೊಸ ಕಾಯಿಲೆಗಳು ಉಗಮ ವಾಗುತ್ತಿರುವ ಈ ಕಾಲದಲ್ಲಿ, ಸಾಂಕ್ರಾಮಿಕ ಹಾಗೂ ಸಾಂಕ್ರಾಮಿಕ ವಲ್ಲದ (communicabe and non communicabe diseases) ಪತ್ತೆ ಹಚ್ಚಿ ಹೊಸ ಖಾಯಿಲೆ ನಾಮಕರಣವಾದರೂ ಸರಿಯಾದ ಚಿಕಿತ್ಸೆ ನೀಡುವಲ್ಲಿ, ಕೊನೆಗೂ ಔಷಧಿಗಳು ಸಂಶೋಧನೆಯಾಗದೆ, ಆಧುನಿಕ ವೈದ್ಯಕೀಯ ಪದ್ದತಿಯು ಕೆಲವೊಮ್ಮೆ ಹಿಂದೆ ಸರಿದಾಗ, ಚಿಹ್ನೆಗಳ ಆಧಾರದ ಮೇಲೆ ನೀಡಲ್ಪಡುವ ಹೋಮಿಯೋಪಥಿ ಔಷಧಿ ಚಿಕಿತ್ಸೆ ಎಷ್ಟೊಂದು ಬಾರಿ ಸಂಜೆವಿನಿಯಂತೆ ಜನ ಸಮೂಹದ ಜೀವ ಹಾಗೂ ಜೀವನ ಉಳಿಸಿದ ಉದಾಹರಣೆಗಳನ್ನು ಜನರ ಬಾಯಲ್ಲಿ ಕೇಳಿದಾಗ ಈ ವೈದ್ಯಕೀಯ ವೃತ್ತಿಗೆ ಒಂದು ಸಾರ್ಥಕತೆಯ ಮೆರಗು ನೀಡಿದೆ ಎಂದರೆ ಅತಿಶಯೋಕ್ತಿಯಲ್ಲ. 

ಒಟ್ಟಾರೆ `dare to be wise’ ಅನ್ನುವ ಮಹಾಮಂತ್ರ ಅಂದರೆ `ನಿನ್ನ ಜಾಣತನ ವನ್ನು ತೋರಿಸಲು ಎಂದೂ ಹಿಂಜರಿಯಬೇಡ, ನಿನ್ನ ಮನಸ್ಸಿಗೆ ಹಾಗೂ ಹೃದಯಕ್ಕೆ ಒಪ್ಪದ ಕೆಲಸವನ್ನು ಎಂದಿಗೂ ಮಾಡಬೇಡ ಎಂಬುವುದು ಹೋಮಿಯೋಪಥಿ ವೈದ್ಯರುಗಳಿಗೆ ಡಾಕ್ಟರ್ ಹಾನಿಮನ್ ಬಿಟ್ಟು ಹೋದ ಒಂದು ದಿವ್ಯ ಸಂದೇಶವಾಗಿದೆ.  ಯಾವ ಕಾಲಕ್ಕೂ ಬದಲಾಗದ ತತ್ವ ಸಿದ್ಧಾಂತವನ್ನು ಹೊಂದಿರುವ ಈ ವೈದ್ಯಕೀಯ ಪದ್ದತಿ ಜನರ ಜೀವನದಲ್ಲಿ ಅಜರಾಮರವಾಗಲಿ ಎಂದು ಹಾರೈಸೋಣ. 

ಹಾನಿಮನ್‌ರ ಜನ್ಮ ದಿನ ಆಚರಣೆಯನ್ನು ದಾವಣಗೆರೆ ಜಿಲ್ಲೆಯ ಹೋಮಿಯೋಪತಿ ವೈದ್ಯಕೀಯ ಸಂಘ ದಿನಾಂಕ ಏ. 14 2024 ರಂದು  ರಾಷ್ಟ್ರ ಮಟ್ಟದ  ವೈದ್ಯಕೀಯ ವಿಚಾರ ಸಂಕೀರಣ ಮಾಡುವ ಮೂಲಕ ವಿಶಿಷ್ಟವಾಗಿ ಆಚರಿಸಿ ಕೊಳ್ಳುತ್ತಿದೆ. ಈ ವಿಚಾರಣಾ ಸಂಕಿರಣದಲ್ಲ ಸರಕಾರಿ ಹೋಮಿಯೋಪತಿ ವೈದ್ಯಕೀಯ ಮಹಾ ವೈದ್ಯಾಲಯ ಬೆಂಗಳೂರಿನಲ್ಲಿ ಪ್ರಾಧ್ಯಾಪಕ ರಾಗಿರುವ ಡಾ. ವಿಜಯ ಕೃಷ್ಣ ವಿ. ಇವರು ತಮ್ಮ ವೈಜ್ಞಾನಿಕ ಪ್ರಬಂಧಗಳನ್ನು ಮಂಡಿಸಲಿದ್ದಾರೆ. ರಾಷ್ಟ್ರದ ವಿವಿಧ ರಾಜ್ಯಗಳಿಂದ ಹೋಮಿಯೋಪತಿ ವೈದ್ಯರುಗಳು, ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಒಟ್ಟಾರೆ ಹೋಮಿಯೋಪಥಿ ವೈದ್ಯಕಿಯ  ಪಿತಾಮಹರ ಜನ್ಮ ದಿನಾಚರಣೆಯ ಪ್ರಯುಕ್ತ ಅಚರಿಸಲ್ಪಡುತ್ತಿರುವ ಈ ಕಾರ್ಯಕ್ರಮ ಯಶಸ್ವಿಯಾಗಲೆಂದು ಈ ಮೂಲಕ ಹಾರೈಸೋಣ


– ಡಾ. ಆರತಿ ಸುಂದರೇಶ್, ಹೋಮಿಯೋಪತಿ ವೈದ್ಯರು, ಸುರಭಿ ಹೋಮಿಯೋಪತಿಕ್ ಹೀಲಿಂಗ್ ಸೆಂಟರ್, ದಾವಣಗೆರೆ.

error: Content is protected !!