ದಾವಣಗೆರೆ, ಏ. 10- ರಾಜ್ಯದ ಹಿರಿಯ ಪತ್ರಕರ್ತ ಹಳೇಬೀಡು ಕೃಷ್ಣಮೂರ್ತಿ ಅವರ ಪತ್ನಿ ಶ್ರೀಮತಿ ಜಯಲಕ್ಷ್ಮಿ ಕೃಷ್ಣಮೂರ್ತಿ (85) ಅವರು ಬೆಂಗಳೂರಿನ ತಮ್ಮ ಮಗನ ಮನೆಯಲ್ಲಿ ಮೊನ್ನೆ ರಾತ್ರಿ ವಯೋಸಹಜ ಅನಾರೋಗ್ಯದಿಂದ ನಿಧನರಾದರು.
ಸಾಹಿತ್ಯ, ಸಂಗೀತ, ಸಾಮಾಜಿಕ ಕಾರ್ಯಚಟುವಟಿಕೆಗಳಲ್ಲಿ ಆಸಕ್ತರಾಗಿದ್ದ ಜಯಲಕ್ಷ್ಮಿಯವರು ಎಂಬತ್ತರ ದಶಕದಲ್ಲಿ ತಮ್ಮ ಜನಪರ ವಿಚಾರಗಳ ಅನುಷ್ಠಾನಕ್ಕಾಗಿ ದಾವಣಗೆರೆ ನಗರಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಅಲ್ಪ ಮತಗಳ ಅಂತರದಿಂದ ಪರಾಜಿತರಾಗಿದ್ದರು.
ಕೃಷ್ಣಮೂರ್ತಿ ಅವರು ನಗರದ ನಗರವಾಣಿ ಪತ್ರಿಕೆ, ಹಾಸನದಲ್ಲಿ ಜನಮಿತ್ರ, ಇಂಡಿಯನ್ ಎಕ್ಸ್ಪ್ರೆಸ್, ಸಂಯುಕ್ತ ಕರ್ನಾಟಕ ಪತ್ರಿಕೆಯ ವರದಿಗಾರರಾಗಿ, ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಶ್ರೀಮತಿ ಜಯಲಕ್ಷ್ಮಿ ಅವರು ಸಾಥ್ ನೀಡಿದ್ದರು. ಶ್ರೀಮತಿ ಜಯಲಕ್ಷ್ಮಿ ಮತ್ತು ಕೃಷ್ಣಮೂರ್ತಿ ದಂಪತಿ ಇತ್ತೀಚೆಗಷ್ಟೇ 64ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು.
ಪತಿ , ಇಬ್ಬರು ಪುತ್ರರು, ಐವರು ಪುತ್ರಿಯರು ಹಾಗೂ ಅಪಾರ ಬಂಧು – ಮಿತ್ರರನ್ನಗಲಿರುವ ಮೃತರ ಅಂತ್ಯಸಂಸ್ಕಾರವನ್ನು ಯುಗಾದಿ ದಿನವೇ ಚಾಮರಾಜನಗರಪೇಟೆ ಹಿಂದೂ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು.
ಸಂತಾಪ : ಶ್ರೀಮತಿ ಜಯಲಕ್ಷ್ಮಿ ಕೃಷ್ಣಮೂರ್ತಿಯವರ ನಿಧನಕ್ಕೆ ಮಾಜಿ ಸಚಿವ ಹೆಚ್. ಆಂಜನೇಯ, ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ, ದಾವಣಗೆರೆ ಮತ್ತು ಹಾಸನ ಮಾಧ್ಯಮ ಸ್ನೇಹಿತರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರುಗಳು ಸಂತಾಪ ಸೂಚಿಸಿದ್ದಾರೆ.