ದೇವರಬೆಳಕೆರೆ ಪಿಕಪ್ ಡ್ಯಾಮ್ ಗೇಟ್ ಸಮಸ್ಯೆ ಪರಿಹರಿಸಲು ಸಕಾಲ : ರೈತರ ಒತ್ತಾಯ

ದೇವರಬೆಳಕೆರೆ ಪಿಕಪ್ ಡ್ಯಾಮ್ ಗೇಟ್  ಸಮಸ್ಯೆ ಪರಿಹರಿಸಲು ಸಕಾಲ : ರೈತರ ಒತ್ತಾಯ

ಮಲೇಬೆನ್ನೂರು, ಏ. 5-     ದೇವರಬೆಳಕೆರೆ ಪಿಕಪ್ ಜಲಾಶಯದ ಒಳ ಹರಿವು ಸ್ಥಗಿತವಾಗಿದ್ದು, ಗೇಟ್‌ ದುರಸ್ತಿ ಮಾಡಲು ಸಕಾಲವಾಗಿದ್ದು, ಕರ್ನಾಟಕ ನೀರಾವರಿ ನಿಗಮದ ಎಂಜಿನಿಯರ್‌ಗಳು ಗಮನ ಹರಿಸುವಂತೆ ದೇವರಬೆಳಕೆರೆ, ಬೂದಿಹಾಳ್, ಸಂಕ್ಲಿಪುರ, ಗುಳದಹಳ್ಳಿ ಮತ್ತಿತರೆ ಗ್ರಾಮಗಳ ರೈತರು ಒತ್ತಾಯಿಸಿದ್ದಾರೆ.

 ಹಿಂದಿನ ಸರ್ಕಾರದ ಅವಧಿಯಲ್ಲಿ ಗೇಟ್ ಬದಲಿಸಲು ಹಣ ಮಂಜೂರಾಗಿತ್ತು. ಆದರೆ ಈವರೆಗೂ ಟೆಂಡರ್ ಪ್ರಕ್ರಿಯೆ ಎಲ್ಲಿಗೆ ಬಂದಿದೆ ಎಂದು ತಿಳಿಯುತ್ತಿಲ್ಲ. ಎಸ್ಇ ಒಮ್ಮೆ ಭೇಟಿ ನೀಡಿದ್ದು ಬಿಟ್ಟರೆ ಯಾರೂ ಇತ್ತ ಸುಳಿದಿಲ್ಲ.

ಕಳೆದ ಮಳೆಗಾಲದಲ್ಲಿ ಪ್ರವಾಹದಿಂದ ಜಲಾಶಯದ  ಹಿನ್ನೀರು ನುಗ್ಗಿ ನೂರಾರು ಎಕರೆ ತೋಟ, ಭತ್ತದ
ಜಮೀನು, ರಸ್ತೆ ಮುಳುಗಿದಾಗ ಭೇಟಿ ನೀಡಿದ್ದ ಜಿ
ಲ್ಲಾಧಿಕಾರಿಗಳ, ಎಂಜಿನಿಯರುಗಳ ಭರವಸೆ, ಭರವಸೆ ಆಗಿಯೇ ಉಳಿದಿದೆ. ಹಾಗಾಗಿ ಅಧಿಕಾರಿಗಳ ಮಾತಿನಲ್ಲಿ ನಂಬಿಕೆ ಇಲ್ಲವಾಗಿದೆ ಎನ್ನುತ್ತಾರೆ ರೈತರಾದ ಪರಮೇಶ್ ಗೌಡ, ಚಂದ್ರು, ಹನುಮಂತು, ನಿಂಗಪ್ಪ, ಮಹಂತೇಶ್, ಗುಡ್ಡಪ್ಪ, ಬಸಪ್ಪ. 

ಯೋಜನೆಗೆ ಹಣ ಮಂಜೂರಾಗಿದೆ. ಆದರೆ ಕೆಲಸ ಪ್ರಾರಂಭವಾಗಿಲ್ಲ. ಹೊಸದಾಗಿ ಗೇಟ್ ಅಳವಡಿಸುವ ಬದಲು ಮೊದಲು ಜಲಸಸ್ಯ ತಡೆದು ನಿಲ್ಲುವುದನ್ನು ತಪ್ಪಿಸಲು ಹಾಲಿ ಇರುವ ಗೇಟ್ ತೆರವು ಮಾಡಿಕೊಟ್ಟರೆ ಸಾಕು ಎನ್ನುತ್ತಾರೆ ದೇವರಬೆಳೆಕೆರೆ ಗುಳದಹಳ್ಳಿ, ಸಂಕ್ಲೀಪುರ, ಬಲ್ಲೂರು, ಮುದಹದಡಿ, ಬೂದಿಹಾಳ್, ಶಿರಗಾನಹಳ್ಳಿ, ಜಡಗನಹಳ್ಳಿ, ವಡೇರಹಳ್ಳಿ ರೈತರು.

ನಮ್ಮ ಜಿಲ್ಲೆಯವರೇ ಈಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಅಣೆಕಟ್ಟೆಯಲ್ಲಿ ಮುಳಗಡೆಯಾದ ಬೂದಿಹಾಳು ಗ್ರಾಮದವರೇ ಆದ ಬಿ.ಪಿ. ಹರೀಶ್ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಭದ್ರಾ ನಾಲೆಯ ಬಸಿ ನೀರಿನ ಹರಿವು ಇಲ್ಲದಿರುವ ಕಾರಣ ಜಲಾಶಯದ ಕ್ರೆಸ್ಟ್ ಗೇಟ್ ಬದಲಿಸಲು ಅಥವಾ ದುರಸ್ತಿಗೆ ಸಕಾಲವಾಗಿದ್ದು ರಾಜ್ಯ ಸರ್ಕಾರದ ಮೇಲೆ ರಾಜಕಾರಣಿಗಳು ಪಕ್ಷಭೇದ ಮರೆತು ಒತ್ತಡ ಹಾಕಿ ಕೆಲಸ ಮಾಡಿಸುವಂತೆ ರೈತರು ಮನವಿ ಮಾಡಿದ್ದಾರೆ.

ಈ ಕುರಿತು ಮಾತನಾಡಿದ ಎಇಇ ಧನಂಜಯ ಅವರು, ಮೈಸೂರಿನ ತಜ್ಞರ ತಂಡ ಜಲ ಸಸ್ಯದ ಸಮಸ್ಯೆ, ಹಿನ್ನೀರು ಜಮೀನಿಗೆ ನುಗ್ಗುವುದನ್ನು ತಪ್ಪಿಸಲು ಗೇಟ್ ತೆರವು ಮಾಡುವ ಕುರಿತು  ಸರ್ವೆ ನಡೆಸಿ, ಸರ್ಕಾರಕ್ಕೆ ವರದಿ ನೀಡಿದ್ದಾರೆ. ವರದಿ ಹಿರಿಯ ಎಂಜಿನಿಯರ್‌ಗಳ ಮುಂದಿದೆ.  

ಗೋಡಬೋಲೆ ಗೇಟ್‌ ತೆರವಿಗೆ ಹಾಗೂ ಹೊಸದಾಗಿ ಅಳವಡಿಸಲು ಹೆಚ್ಚಿನ ಹಣ ಅಗತ್ಯ ಇದ್ದು, ಈ ಹಿಂದೆ ಬಿಡುಗಡೆ ಆಗಿರುವ ಹಣ ಕಡಿಮೆ ಆಗುತ್ತದೆ ಎಂದು ತಿಳಿಸಿದ್ದಾರೆ.

ಭದ್ರಾ ಜಲಾಶಯ ವ್ಯಾಪ್ತಿಯ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾ ಮಂಡಳದ ಅಧ್ಯಕ್ಷ ವೈ. ದ್ಯಾವಪ್ಪರೆಡ್ಡಿ ಅವರು  ಕೂಡಾ ಡಿ. ಬಿ. ಕೆರೆಯ ಗೇಟ್‌ ಬದಲಿಸಲು ಇದು ಸರಿಯಾದ ಸಮಯವಾಗಿದ್ದು, ಜಲಸಸ್ಯ ಸಮಸ್ಯೆ ಪರಿಹಾರಕ್ಕೆ ಜಿಲ್ಲಾಡಳಿತ ಹಾಗೂ ಕರ್ನಾಟಕ ನೀರಾವರಿ ನಿಗಮ ಕೂಡಲೇ ಮುಂದಾಗಬೇಕೆಂದು ಒತ್ತಾಯಿಸಿದ್ದಾರೆ.

ನೀರು ಬಿಡುಗಡೆ : ತೋಟದ ಬೆಳೆಗಳನ್ನು ಉಳಿಸಲು ದೇವರಬೆಳಕೆರೆ ಪಿಕಪ್ ಡ್ಯಾಮ್ ನಿಂದ ಕಳೆದ ಶುಕ್ರವಾರದಿಂದ ಬ್ಯಾಲದಹಳ್ಳಿ ಹಳ್ಳಕ್ಕೆ ನೀರು ಹರಿಸಲಾಗುತ್ತಿದ್ದು ನೀರು ಇನ್ನೂ ಬ್ಯಾಲದಹಳ್ಳಿ ಮುಟ್ಟಿಲ್ಲ ಎಂದು ಬ್ಯಾಲದಹಳ್ಳಿ, ಎಕ್ಕೆಗೊಂದಿ, ಭಾನುವಳ್ಳಿ, ರಾಮತೀರ್ಥ, ಬೆಳ್ಳೂಡಿ, ಹನಗವಾಡಿ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

error: Content is protected !!