ಹರಿಹರ, ಏ.4- ನಾಡಿನಾದ್ಯಂತ ಮಳೆ-ಬೆಳೆ ಚೆನ್ನಾಗಿ ಆಗಿ, ಜನರು ಸುಶಿಕ್ಷಿತ ಜೀವನ ನಡೆಸು ವಂತಾಗಲೆಂದು ನಗರದ ಐತಿಹಾಸಿಕ ಪ್ರಸಿದ್ಧ ಶ್ರೀ ಹರಿಹರೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಇದೇ ದಿನಾಂಕ 9 ರಿಂದ 16 ರವರಿಗೆ ಪ್ರಸಿದ್ಧ 200ಕ್ಕೂ ಹೆಚ್ಚು ಅರ್ಚಕ ತಂಡದವರಿಂದ ಹಾಗೂ ಧರ್ಮ ಶಾಸ್ತ್ರದ ಪ್ರಕಾರ ಶ್ರೀ ಹರಿಹರೇಶ್ವರ ಸ್ವಾಮಿಗೆ ಅತಿರುದ್ರಾಭಿಷೇಕ, ಹೋಮ, ಹವನ ಮುಂತಾದ ಪೂಜಾ ಕಾರ್ಯಗಳನ್ನು ನಡೆಸಲಾಗುತ್ತದೆ ಎಂದು ಪಂಡಿತ ಡಾ. ನಾರಾಯಣ ಜೋಯಿಸರು ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಇದೇ ದಿನಾಂಕ 9 ರಂದು ಬೆಳಗ್ಗೆ 8 ಗಂಟೆಗೆ ದೇವರಿಗೆ ಫಲ ಸಮರ್ಪಣೆ, ಸಂಕಲ್ಪ, ಪಂಚಾಮೃತ ರುದ್ರಾಭಿಷೇಕ ನಡೆಯಲಿದೆ. ದಿ. 10 ರಂದು ಬೆಳಗ್ಗೆ 7 ಗಂಟೆಗೆ ಸ್ಥಳ ಶುದ್ಧಿ, ಗಣಪತಿ ಪೂಜೆ, ಅಭಿಷೇಕ ಸಂಕಲ್ಪ ಮತ್ತು ಕಲಾಭಿವೃದ್ದಿ ಹೋಮ, ಸಹಸ್ರ ಮೋದಕದಿಂದ ಗಣಪತಿ ಹೋಮ ಪೂರ್ಣಾಹುತಿ. ಸಂಜೆ 6-30 ಕ್ಕೆ ಅಘೋರಸ್ತ್ರ ಹೋಮ ಹಾಗೂ ಉದಕ ಶಾಂತಿ ಪೂಜೆ ನೆರವೇರಿಸಲಾಗುವುದು.
ದಿನಾಂಕ 11 ರಂದು ಬೆಳಗ್ಗೆ 6-30ಕ್ಕೆ ಮಹಾಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹ ವಾಚನ, ಮಾತೃಕಾ ಪೂಜೆ, ನಾಂದಿ ಸಮಾರಾಧನಾ, ಋತ್ವಿಕವರಣ, ಮಧುಪರ್ಕ, ಕೌತುಕ ಬಂಧನ, ಅಂಕುರಾಪರ್ಣ ಪ್ರಧಾನ ದೇವತೆಗಳ ಕಲಶ ಸ್ಥಾಪನೆ, ಶ್ರೀ ಹರಿಹರೇಶ್ವರ ಸ್ವಾಮಿಗೆ ಮಹಾನ್ಯಾಸ ಪೂರ್ವಕ ಅತಿರುದ್ರಾಭಿಷೇಕ, ಬಿಲ್ವಾರ್ಚನೆ ಮಹಾ ರುದ್ರಸ್ವಾಹಾಕಾರ, ಮೂಲಮಂತ್ರ ಹೋಮ, ಋಗ್ವೇದ ಹಾಗೂ ಯಜುರ್ವೇದ ಸಂಹಿತಾ ಸ್ವಾಹಾಕಾರ, ಚಂಡಿಕಾ ಸಪ್ತಶತಿ ಪಾರಾಯಣ ನವಗ್ರಹ ಮತ್ತು ಮೃತ್ಯುಂಜಯ ಹೋಮ ನಡೆಯಲಿದ್ದು, ಯಾಗ ಮಂಟಪದ ಉದ್ಘಾಟನೆಯನ್ನು ನಾರಾಯಣ ಆಶ್ರಮದ ಶ್ರೀ ಸದ್ಗುರು ಪ್ರಭುದತ್ತ ಮಹಾರಾಜರು ಮಾಡುವರು. ಸಂಜೆ 6-30 ರಿಂದ ರುದ್ರಕ್ರಮಾರ್ಚನೆ ಸಾಂಸ್ಕೃತಿಕ ಕಾರ್ಯಕ್ರಮ, ಮಹಾಮಂಗಳಾರತಿ ನಡೆಯಲಿದೆ.
ದಿನಾಂಕ 12 ರಂದು ಬೆಳಗ್ಗೆ 7 ರಿಂದ ಮಹಾನ್ಯಾಸ ಪೂರ್ವಕ ಅತಿರುದ್ರಾಭಿಷೇಕ ಬಿಲ್ವಾರ್ಚನೆ ಮಹಾಮಂಗ ಳಾರತಿ ಸೇರಿದಂತೆ, ವಿವಿಧ ಪೂಜೆಗಳು ನಡೆಯಲಿವೆ.
ದಿನಾಂಕ 13 ರಂದು ಬೆಳಗ್ಗೆ 7 ರಿಂದ ರುದ್ರಾಭಿಷೇಕ, ವಿವಿಧ ಬಗೆಯ ಹೋಮ, ಹವನ ನಂತರ ಮಹಾಮಂಗ ಳಾರತಿ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ದಿನಾಂಕ 14 ರಂದು ಬೆಳಗ್ಗೆ 7ಕ್ಕೆ ಅತಿ ರುದ್ರಾಭಿಷೇಕ, ವಿವಿಧ ಬಗೆಯ ಹೋಮ ಹವನಗಳನ್ನು ಶೃಂಗೇರಿ ಮಹಾಸಂಸ್ಥಾನ ಮಠ, ಬೆಂಗಳೂರು ಶ್ರೀಮದ್ ಜಗದ್ಗುರು ಶ್ರೀ ವಿದ್ಯಾವಿಶ್ವೇಶ್ವರ ಭಾರತಿ ಸ್ವಾಮಿಗಳವ ರಿಂದ ಸಂಜೆ ಗಿರಿಜಾ ಕಲ್ಯಾಣೋತ್ಸವ ನಡೆಯಲಿದೆ.
ದಿನಾಂಕ 15 ರಂದು ಬೆಳಗ್ಗೆ 6-30 ಕ್ಕೆ ಅಭಿಷೇಕ ವಿವಿಧ ಬಗೆಯ ಹೋಮ, ಹವನಗಳು ನಡೆಯಲಿವೆ. ಸಂಜೆ ಅಲಂಕೃತ ಪಲ್ಲಕ್ಕಿ ಮೆರವಣಿಗೆ ಅಷ್ಟಾವಧಾನ ಸೇವೆ ಕಾರ್ಯಕ್ರಮಗಳು ನಡೆಯಲಿವೆ.
ದಿನಾಂಕ 16 ರಂದು ಬೆಳಗ್ಗೆ 6-30 ಕ್ಕೆ ಮಹಾನ್ಯಾಸ ಪೂರ್ವಕ ಅತಿರುದ್ರಾಭಿಷೇಕ ಬಿಲ್ವಾರ್ಚನೆ ಸೇರಿದಂತೆ, ಹಲವು ಬಗೆಯ ಪೂಜೆಗಳು ನಡೆಯುತ್ತವೆ. ಶ್ರೀ ಮಹಾರುದ್ರ ಹೋಮ ಹವನಾದಿಗಳ ಸಾಂಗತಾ ರ್ಥವಾಗಿ ಧಾರವಾಡ, ಶ್ರೀ ರಾಜೇಶ್ವರಿ ಶಾಸ್ತ್ರಿ , ಡಾ. ವೇಣಿ ಮಾಧವ ಶಾಸ್ತ್ರಿಗಳ ಉಪಸ್ಥಿತಿಯಲ್ಲಿ ಪೂರ್ಣಾಹುತಿ ಕಾರ್ಯಕ್ರಮಗಳು ನಡೆಯಲಿವೆ. ನಂತರ ಶ್ರೀ ವಿದ್ಯಾವಿಶ್ವೇಶ್ವರ ಭಾರತಿ ಸ್ವಾಮಿಗಳಿಂದ ಅನುಗ್ರಹ ಭಾಷಣ ಆಶೀರ್ವಾದ.
ಈ ಎಲ್ಲಾ ಕಾರ್ಯಕ್ರಮಗಳಲ್ಲಿ ನಾಡಿನಾದ್ಯಂತ ಅನೇಕ ವಿದ್ವಾಂಸರು, ಧಾರ್ಮಿಕ ಮುಖಂಡರು, ಮಹಾಸ್ವಾಮಿಗಳು ಆಗಮಿಸಲಿದ್ದಾರೆ. ಸುಮಾರು 30 ಲಕ್ಷಕ್ಕೂ ಹೆಚ್ಚು ಹಣವನ್ನು ಖರ್ಚು ಮಾಡಿ ಪೂಜೆಯನ್ನು ಮಾಡಿಸಲಾಗುತ್ತಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹೋಮ, ಹವನ, ಪೂಜಾ ಕಾರ್ಯಗಳನ್ನು ಯಶಸ್ವಿಗೊಳಿಸುವಂತೆ ವಿನಂತಿಸಿದರು.
ಈ ಸಂದರ್ಭದಲ್ಲಿ ಡಾ ಹರಿಶಂಕರ್ ಜೋಯಿಸರು, ಶ್ರೀಧರಮೂರ್ತಿ ಎಸ್.ಕೆ, ಅನಂತ್ ನಾಯ್ಕ್, ಕೆ. ವಿಶ್ವನಾಥ್ ಶಾಸ್ತ್ರಿ ಇತರರು ಹಾಜರಿದ್ದರು.