ಉಗ್ರ ದಾಳಿಗೆ ತೀವ್ರ ಪ್ರತಿಕ್ರಿಯೆ
ಮಾಸ್ಕೋ, ಏ. 4 – ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ನಡೆದ ಭೀಕರ ಉಗ್ರವಾದಿ ದಾಳಿ, ಆ ದೇಶಕ್ಕೆ ಇನ್ನಷ್ಟು ಕಠಿಣ ಆಡಳಿತ ತರುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಮಾಸ್ಕೋದ ಸಭಾಂಗಣದ ಮೇಲೆ ನಡೆದ ಉಗ್ರವಾದಿ ದಾಳಿಯಲ್ಲಿ 145 ಜನರು ಸಾವನ್ನಪ್ಪಿದ್ದರು. ಇದು ಎರಡು ದಶಕಗಳಲ್ಲೇ ನಡೆದ ಅತ್ಯಂತ ತೀವ್ರ ಸ್ವರೂಪದ ದಾಳಿಯಾಗಿದೆ. ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಈಗಾಗಲೇ ಕಠಿಣ ಆಡಳಿತ ವ್ಯವಸ್ಥೆ ಹೊಂದಿದ್ದಾರೆ. ಇತ್ತೀಚೆಗಷ್ಟೇ ಅವರು ಆರು ವರ್ಷಗಳ ಅವಧಿಗೆ ಪುನರಾಯ್ಕೆಯಾಗಿದ್ದರು.
ಮಾರ್ಚ್ 22ರಂದು ದಾಳಿ ನಡೆಸಿದವರ ಜೊತೆ ಉಕ್ರೇನ್ ಸಂಪರ್ಕ ಹೊಂದಿದೆ. ಈ ದಾಳಿಗೆ ಕಾರಣರಾದವರ ಸದೆಬಡಿಯುವುದಾಗಿ ಪುತಿನ್ ಹೇಳಿದ್ದಾರೆ. ಆದರೆ, ಉಕ್ರೇನ್ ಈ ಆರೋಪಗಳನ್ನು ತಳ್ಳಿ ಹಾಕಿದೆ.
ಉಕ್ರೇನ್ ಈ ದಾಳಿಯಲ್ಲಿ ಭಾಗಿಯಾಗಿರುವುದು ಸಾಬೀತಾದರೆ, ಉಕ್ರೇನ್ ನಾಯಕರ ಹೊಡೆದುರುಳಿಸಲು ಕ್ರಮ ತೆಗೆದುಕೊಳ್ಳುವುದಾಗಿ ರಷ್ಯಾದ ಭದ್ರತಾ ಮಂಡಳಿ ಉಪಾಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್ ಹೇಳಿದ್ದಾರೆ.
ಮಾಸ್ಕೋದಲ್ಲಿ ನಡೆಸಲಾದ ದಾಳಿ ಪ್ರಮುಖ ಭದ್ರತಾ ವೈಫಲ್ಯವಾಗಿದೆ. ದಾಳಿಯ ಬಗ್ಗೆ ಅಮೆರಿಕ ಮೊದಲೇ ಎಚ್ಚರಿಕೆ ನೀಡಿತ್ತು ಎನ್ನಲಾಗಿದೆ. ಆದರೆ, ಭದ್ರತಾ ಪಡೆಗಳು ಈ ಬಗ್ಗೆ ಗಮನ ಹರಿಸುವ ಬದಲು, ಸರ್ಕಾರದ ಟೀಕಾಕಾರರ ಬೆನ್ನು ಹತ್ತಿದ್ದವು ಎಂದು ಟೀಕಿಸಲಾಗುತ್ತಿದೆ.
ಈ ನಡುವೆ, ಭದ್ರತಾ ಪಡೆಗಳು ಉಕ್ರೇನ್ ಬಳಿಯಲ್ಲಿ ತಾಜಿಕಿಸ್ತಾನದ ನಾಲ್ವರನ್ನು ಬಂಧಿಸಿದ್ದು, ಇವರು ದಾಳಿಯಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿಸಿವೆ. ಈ ನಾಲ್ವರು ದಾಳಿಯಲ್ಲಿ ಭಾಗಿಯಾಗಿರುವುದಾಗಿ ತಪ್ಪೊಪ್ಪಿಗೆ ಹೇಳಿಕೆ ನೀಡಿರುವ ವಿಡಿಯೋಗಳನ್ನು ರಷ್ಯಾ ಸುದ್ದಿ ಸಂಸ್ಥೆಗಳು ಬಿಡುಗಡೆ ಮಾಡಿವೆ.
ಈ ನಡುವೆ, ಆರೋಪಿಗಳನ್ನು ತೀವ್ರ ಹಿಂಸೆಗೆ ಗುರಿಪಡಿ ಸಿರುವ ವಿಡಿಯೋಗಳೂ ಬೆಳಕಿಗೆ ಬಂದಿವೆ. ಆರೋಪಿಗಳನ್ನು ನ್ಯಾಯಾಲಯದ ಎದುರು ಹಾಜರು ಪಡಿಸಿದಾಗ ಅವರು ತೀವ್ರವಾಗಿ ಗಾಯಗೊಂಡಿದ್ದು ಕಂಡು ಬಂದಿದೆ.
ಈ ಹಿಂದೆ ಆರೋಪಿಗಳ ಮೇಲೆ ಹಿಂಸಾಚಾರ ನಡೆಸಿದ ಘಟನೆಗಳು ನಡೆದಾಗ, ಅಧಿಕಾರಿಗಳು ಖಂಡಿಸುತ್ತಿದ್ದರು. ಆದರೆ, ಈ ಬಾರಿ ಯಾವುದೇ ಖಂಡನೆಯ ಹೇಳಿಕೆ ನೀಡಿಲ್ಲ.
ದಾಳಿ ನಡೆಸಿದವರಿಗೆ ಸರಿಯಾದ ಶಾಸ್ತಿ ಮಾಡಲಾಗಿದೆ, ಅವರಿಗೆ ಸುಖ ಭೋಜನ ನೀಡಲಾಗದು ಎಂದು ರಷ್ಯಾ ಸರ್ಕಾರದ ಪರ ಇರುವ ಮಾಧ್ಯಮಗಳ ಮೂಲಕ ಹೇಳಿಕೆ ನೀಡಲಾಗುತ್ತಿದೆ. ಕಳೆದ ಶತಮಾನದಲ್ಲಿ ಉಕ್ರೇನ್ ರಾಷ್ಟ್ರೀಯವಾದಿಗಳಾದ ಯೆವ್ಹೆನ್ ಕೊನೊವಲಟ್ಸ್ ಹಾಗೂ ಸ್ಟೀಪನ್ ಬಂಡೆರಾ ಅವರನ್ನು ಹತ್ಯೆಗೈದ ರೀತಿಯಲ್ಲೇ, ಈ ಬಾರಿಯೂ ಉಕ್ರೇನ್ ನಾಯಕರನ್ನು ದಮನಿಸಬೇಕು ಎಂದು ಮೆಡ್ವೆಡೆವ್ ಪ್ರತಿಪಾದಿಸಿದ್ದಾರೆ.
ರಷ್ಯಾ ಯುರೋಪ್ ಮಂಡಳಿಗೆ ಸೇರಿದಾಗ 1996ರಲ್ಲಿ ಮರಣ ದಂಡನೆಯನ್ನು ರದ್ದುಗೊಳಿಸಲಾಗಿತ್ತು. ಈಗ ಮತ್ತೆ ಮರಣದಂಡನೆ ಜಾರಿಗೆ ತರುವ ಒತ್ತಾಯ ಕೇಳಿ ಬರುತ್ತಿದೆ. ಯುನೈಟೆಡ್ ರಷ್ಯಾದ ಸಂಸದೀಯ ಮಂಡಳಿ ಮುಖ್ಯಸ್ಥ ವ್ಲಾಡಿಮಿರ್ ವಸಿಲ್ಯೇವ್ ಅವರು ಈ ಬೇಡಿಕೆ ಬೆಂಬಲಿಸಿದ್ದಾರೆ.
ಆದರೆ, ಮರಣ ದಂಡನೆ ಮತ್ತೆ ಜಾರಿಗೆ ತರುವುದಕ್ಕೆ ರಾಜಕೀಯ ವಲಯದಲ್ಲಿ ವಿರೋಧಗಳೂ ವ್ಯಕ್ತವಾಗುತ್ತಿವೆ. ಪುತಿನ್ ಇಂತಹ ಕ್ರಮಕ್ಕೆ ಮುಂದಾಗುವುದಿಲ್ಲ ಎಂದು ರಷ್ಯಾದ ಸರ್ಕಾರಿ ಸುದ್ದಿ ವಾಹಿನಿಯ ವಿಶ್ಲೇಷಕ ಡಿಮಿಟ್ರಿ ಕಿಸೆಲ್ಯಾವ್ ಹೇಳಿದ್ದಾರೆ.
ಆರೋಪಿಗಳನ್ನು ತೀವ್ರ ಹಿಂಸಾಚಾರಕ್ಕೆ ಗುರಿಪಡಿಸಿರು ವುದು ಹಾಗೂ ರಷ್ಯಾದ ಶತ್ರುಗಳ ಹತ್ಯೆಗೆ ಕರೆ ನೀಡಿರುವುದನ್ನು ಗಮನಿಸಿದರೆ, ರಷ್ಯಾ ಇನ್ನಷ್ಟು ಕಠಿಣ ಆಡಳಿತಕ್ಕೆ ಒಳಗಾಗ ಬಹುದು ಎಂದು ಹಲವು ಪರಿಣಿತರು ಅಭಿಪ್ರಾಯ ಪಟ್ಟಿದ್ದಾರೆ.
ರಷ್ಯಾದಲ್ಲಿ ಈಗ ಮತ್ತಷ್ಟು ಭೀತಿಯ ಕಾಲ ಆರಂಭವಾಗಬಹುದು. 1930ರಲ್ಲಿ ರಷ್ಯಾದ ಸರ್ವಾಧಿಕಾರಿ ಜೋಸೆಫ್ ಸ್ಟಾಲಿನ್ ಇಂಥದೇ ಆಡಳಿತ ನಡೆಸಿದ್ದರು. ಪರಿಸ್ಥಿತಿ ವೇಗವಾಗಿ ಹದಗೆಡಬಹುದು ಎಂದು ರಷ್ಯಾದ ಅಭಿವ್ಯಕ್ತಿ ಸ್ವಾತಂತ್ರ್ಯ ಸಂಘಟನೆಯಾದ ನೆಟ್ ಫ್ರೀಡಮ್ಸ್ ಹೇಳಿದೆ.