ದೇಶದ ಎಲ್ಲಾ ಮಠಗಳಿಗಿಂತ ಸಿದ್ದಗಂಗಾ ಮಠ ವಿಭಿನ್ನ

ದೇಶದ ಎಲ್ಲಾ ಮಠಗಳಿಗಿಂತ ಸಿದ್ದಗಂಗಾ ಮಠ ವಿಭಿನ್ನ

ಹಿರೇಕೆರೂರಿನ ಶ್ರೀ ಶಿವಕುಮಾರ ಸ್ವಾಮೀಜಿ ಜಯಂತಿ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ.ಸಿ.ಪಾಟೀಲ್‌

ಹಿರೇಕೆರೂರು, ಏ.1-   ಇಡೀ ದೇಶದಲ್ಲಿ ಇರುವ ಎಲ್ಲಾ ಮಠಗಳಿಗಿಂತ ಸಿದ್ದಗಂಗಾ ಮಠ ವಿಭಿನ್ನವಾಗಿ ನಿಲ್ಲುತ್ತದೆ ಎಂದು ಮಾಜಿ ಕೃಷಿ ಸಚಿವ   ಬಿ. ಸಿ. ಪಾಟೀಲ್ ಮೆಚ್ಚುಗೆ ಸೂಚಿಸಿದರು.

ತಾಲ್ಲೂಕು ವಿದ್ಯಾವರ್ಧಕ ಸೌಹಾರ್ದ ಸಹಕಾರಿ ನಿಯಮಿತ ಆಶ್ರಯದ  ಶಾಲಾ-ಕಾಲೇಜುಗಳ  ವತಿಯಿಂದ  ಸರ್ವಜ್ಞ ಸಾಂಸ್ಕೃತಿಕ ಭವನದಲ್ಲಿ ಮೊನ್ನೆ ಹಮ್ಮಿಕೊಳ್ಳಲಾಗಿದ್ದ  ಲಿಂ.  ಶ್ರೀ ಶಿವಕುಮಾರ ಮಹಾಸ್ವಾಮಿಗಳವರ 117 ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ   ಮುಖ್ಯ ಅತಿಥಿಯಾಗಿ  ಪಾಲ್ಗೊಂಡು  ಅವರು ಮಾತನಾಡಿದರು. 

ತುಮಕೂರು ಸಿದ್ದಗಂಗಾ ಶ್ರೀಗಳು ಪ್ರತಿನಿತ್ಯ ಸಾವಿರಾರು ಮಕ್ಕಳಿಗೆ, ಸಂದರ್ಶಕರಿಗೆ ಹಾಗೂ ಯಾತ್ರಾರ್ಥಿಗಳಿಗೆ ತ್ರಿವಿಧ ದಾಸೋಹವನ್ನು ನಿರಂತರವಾಗಿ ನೀಡಿದರು. ಅಂತಹ ಮಹಾನ್  ಶ್ರೀಗಳವರಿಗೆ ಭಕ್ತಿ ನಮನ ಕಾರ್ಯಕ್ರಮವನ್ನು ಸಹಕಾರಿ ವಿದ್ಯಾಸಂಸ್ಥೆ ತುಂಬಾ ಅಚ್ಚುಕಟ್ಟಾಗಿ ನೆರವೇರಿಸಿರುವುದು ಪ್ರಶಂಸನೀಯ ಎಂದು  ಪಾಟೀಲರು ತಿಳಿಸಿದರು.

ಸಹಕಾರಿಯ ಗೌರವ ಕಾರ್ಯದರ್ಶಿ ಎಸ್. ಎಸ್. ಪಾಟೀಲರು ಮಾತನಾಡಿ, ಶ್ರೀಗಳು ನಮ್ಮ ನಾಡಿಗೆ ಸಿದ್ದಗಂಗಾ ಮಠದ ಮೂಲಕ ನೀಡಿದ ಸೇವೆ ಅಪಾರವಾದುದು. ಮಠದ ಭಕ್ತರ ಸಹಕಾರದಿಂದ ಇಷ್ಟು ವರ್ಷಗಳ ಕಾಲ ಹಚ್ಚಿದ ಒಲೆಯನ್ನು ಆರಿಸದೇ, ಜಾತಿ ಧರ್ಮಗಳ ಭೇದವಿಲ್ಲದೆ, ಎಲ್ಲಾ ಮಕ್ಕಳಿಗೆ ಶಿಕ್ಷಣ ಹಾಗೂ ಆಶ್ರಯ ನೀಡಿ ತ್ರಿವಿಧ ದಾಸೋಹಿ ಎಂದೆನಿಸಿಕೊಂಡವರು. ಕಾರಣ ಎಲ್ಲಾ ವಿದ್ಯಾರ್ಥಿಗಳು ಅವರನ್ನು ಭಕ್ತಿಪೂರ್ವಕವಾಗಿ ನಮಿಸುವುದರ ಮೂಲಕ ಅವರ ಆದರ್ಶಗಳನ್ನು ಪಾಲಿಸಬೇಕು ಎಂದು ತಿಳಿಸಿದರು. 

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಎಸ್.ಬಿ.ತಿಪ್ಪಣ್ಣ ಮಾತನಾಡಿ, ಲಕ್ಷಾಂತರ ವಿದ್ಯಾರ್ಥಿಗಳ, ದೀನ-ದಲಿತರ ಹಸಿವು ನೀಗಿಸಿದ ಶ್ರೀ ಶಿವಕುಮಾರ ಸ್ವಾಮೀಜಿಯವರು ಲಕ್ಷಾಂತರ ಜನರ ಬಾಳಿಗೆ ಬೆಳಕಾಗಿ, ನಡೆದಾಡುವ ದೇವರಂತೆ ಅನ್ನ, ಅಧ್ಯಾತ್ಮ, ಜ್ಞಾನವೆಂಬ ತ್ರಿವಿಧ ದಾಸೋಹದಿಂದ ಜಗತ್ತಿಗೇ ಮಾದರಿಯಾದ ಶತಮಾನದ ಸಂತರು. ನೂರಾ ಹನ್ನೊಂದು ವರ್ಷ ಬದುಕಿದರು.   ಅಂತಹ ಮಹಾತ್ಮರ ಶ್ರೀರಕ್ಷೆ ನಮ್ಮೆಲ್ಲರ ಮೇಲೆ ಇರಲಿ ಎಂಬುದೇ ನಮ್ಮ ಆಶಯ ಎಂದರು. 

ಕಾರ್ಯಕ್ರಮದಲ್ಲಿ ಏಕೇಶಣ್ಣ ಬಣಕಾರ, ಯು. ಎಸ್. ಕಳಗೊಂಡ, ಬಿ.ಜಿ. ಬಣಕಾರ ಮತ್ತು ಇತರರು ಹಾಜರಿದ್ದರು.

error: Content is protected !!