ಬ್ಯಾಂಕಿನ ಅಧ್ಯಕ್ಷ ಸಂಗಮೇಶ್ವರಗೌಡ್ರು, ಉಪಾಧ್ಯಕ್ಷ ಚಂದ್ರಶೇಖರ್ ಹರ್ಷ
ದಾವಣಗೆರೆ, ಏ. 3 – ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಬ್ಯಾಂಕುಗಳಲ್ಲೊಂದಾದ ನಗರದ ಶಿವ ಸಹಕಾರಿ ಬ್ಯಾಂಕ್ 2024, ಮಾರ್ಚ್ ಅಂತ್ಯಕ್ಕೆ 6.88 ಕೋಟಿ ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಎಂ.ಬಿ ಸಂಗಮೇಶ್ವರಗೌಡರು ಮತ್ತು ಉಪಾಧ್ಯಕ್ಷರೂ ಆಗಿರುವ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಐಗೂರು ಸಿ. ಚಂದ್ರಶೇಖರ್ ಸಂತಸ ವ್ಯಕ್ತಪಡಿಸಿದರು.
2023-24ನೇ ಸಾಲಿನ ಅಂತ್ಯಕ್ಕೆ ಬ್ಯಾಂಕು 331.21 ಕೋಟಿ ಠೇವಣಿ ಸಂಗ್ರಹಿಸಿದ್ದು, ಸದಸ್ಯರ ಅಭಿವೃದ್ಧಿಗೆ ಪೂರಕವಾಗುವಂತೆ ವಿವಿಧ ಉದ್ದೇಶಗಳಿಗೆ 210.32 ಕೋಟಿ ಸಾಲ ನೀಡಿರುತ್ತದೆ. ಇದರಲ್ಲಿ ಅನುತ್ಪಾದಕ ಸಾಲದ ಪ್ರಮಾಣ ಕನಿಷ್ಟ ಮಟ್ಟದಲ್ಲಿದೆ ಮತ್ತು ಸದರಿ ಸಾಲಿನಲ್ಲಿ 5.97 ಕೋಟಿ ಷೇರು ಬಂಡವಾಳ, 38.41 ಕೋಟಿ ಕಾಯ್ದಿರಿಸಿದ ನಿಧಿಗಳನ್ನು ಹೊಂದಿರುತ್ತದೆ ಹಾಗೂ 380.79 ಕೋಟಿ ದುಡಿಯುವ ಬಂಡವಾಳ ಹೊಂದಿದೆ ಎಂದು ತಿಳಿಸಿದರು.
ಸದರಿ ಸಾಲಿನಲ್ಲಿ ಗಳಿಸಿರುವ 6.88 ಕೋಟಿ ಲಾಭದಲ್ಲಿ ಆದಾಯ ತೆರಿಗೆ 1.55 ಕೋಟಿ ಮತ್ತು ಇತರೆ ಅವಕಾಶಗಳನ್ನು ಕಾಯ್ದಿರಿಸಿದ ನಂತರ 3.27 ಕೋಟಿ ಲಾಭ ಗಳಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಬ್ಯಾಂಕಿನ ಪ್ರಧಾನ ಕಛೇರಿ ಮತ್ತು ಎ.ಪಿ.ಎಂ.ಸಿ. ಶಾಖೆಯ ಕಟ್ಟಡದ ಮೇಲೆ ಸೌರ ವಿದ್ಯುತ್ ಅಳವಡಿಸಿ, ವಿದ್ಯುತ್ ವೆಚ್ಚವನ್ನು ಕಡಿಮೆಗೊಳಿಸುವುದರ ಮೂಲಕ ಪರಿಸರ ಸ್ನೇಹಿಯಾಗಿದೆ. 2024ರ ಆಗಸ್ಟ್ ವೇಳೆಗೆ ಬ್ಯಾಂಕ್ ಸ್ಥಾಪನೆಯಾಗಿ 50 ವರ್ಷ ತುಂಬಲಿದ್ದು, ಬ್ಯಾಂಕು ಸುವರ್ಣ ಮಹೋತ್ಸವ ಆಚರಿಸಿಕೊಳ್ಳಲಿದೆ ಇದರ ಸವಿನೆನಪಿಗಾಗಿ ಬ್ಯಾಂಕಿನ ಅನುಭವ ಮಂಟಪ ಶಾಖೆಗೆ ಸ್ವಂತ ಕಟ್ಟಡ ಹೊಂದಲು ನಿವೇಶನವನ್ನು ಖರೀದಿಸಿದ್ದು, ಶೀಘ್ರದಲ್ಲಿಯೇ ಆಧುನಿಕ ವಾಗಿ ಕಟ್ಟಡ ನಿರ್ಮಿಸಲಾಗುವುದು ಎಂದು ತಿಳಿಸಿದರು.
ಬ್ಯಾಂಕಿನ ಸದಸ್ಯರ ಮತ್ತು ಗ್ರಾಹಕರ ಅನುಕೂಲಕ್ಕಾಗಿ ಬ್ಯಾಂಕಿನ ವ್ಯವಹಾರವನ್ನು ಡಿಜಿಟಲೀಕರಣಗೊಳಿಸುವ ಉದ್ದೇಶದಿಂದ ಎ.ಟಿ.ಎಂ. ಕಾರ್ಡ್, ಐ.ಎಂ.ಪಿ.ಎಸ್. & ಇ-ಕಾಮರ್ಸ್ ಅನುಷ್ಠಾನಗೊಳಿಸುವುದರ ಮುಖಾಂತರ ಡಿಜಿಟಲ್ ವ್ಯವಹಾರ ಚಾಲ್ತಿಯಲ್ಲಿರುತ್ತದೆ. ಮುಂದೆ ಶೀಘ್ರದಲ್ಲಿ ಮೊಬೈಲ್ ಆಪ್ ಅಳವಡಿಸಿಕೊಳ್ಳಲು ಸಾಪ್ಟವೇರ್ನ್ನು ಅಭಿವೃದ್ಧಿಗೊಳಿಸಿ ಅತೀ ಶೀಘ್ರದಲ್ಲಿ ನಮ್ಮ ಗ್ರಾಹಕರುಗಳಿಗೆ ಗುಣಮಟ್ಟದ ಸೇವೆಯ ಅವಕಾಶ ಕಲ್ಪಿಸಿ, ಗ್ರಾಹಕ ಸ್ನೇಹಿ ಬ್ಯಾಂಕ್ ಆಗಿ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದರು.
ಬ್ಯಾಂಕಿನ ಮೇಲೆ ವಿಶ್ವಾಸವಿಟ್ಟು ಠೇವಣಿ ಮಾಡಿದ ಠೇವಣಿದಾರರು ಮತ್ತು ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿಸುವ ಸಾಲಗಾರರಿಗೂ, ಸರ್ವ ಸದಸ್ಯರಿಗೂ, ನಮ್ಮ ಬ್ಯಾಂಕಿನಲ್ಲಿ ವ್ಯವಹರಿಸುವ ಎಲ್ಲಾ ಗ್ರಾಹಕರಿಗೂ ಹಾಗೂ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಿ, ಅಭಿವೃದ್ಧಿಗೆ ಸಹಕರಿಸಿದ ಸಿಬ್ಬಂದಿ ವರ್ಗದವರಿಗೂ ಧನ್ಯವಾದ ಅರ್ಪಿಸಿದರು.
ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕರಾದ ದೊಗ್ಗಳ್ಳಿ ಎಂ. ಬಸವರಾಜ್, ಬಿ.ಎಸ್. ಪ್ರಕಾಶ್, ಡಿ.ಹೆಚ್. ಪ್ರಭು, ಕೆ.ಪಿ. ಪ್ರದೀಪ್, ಜಿ. ಸಿದ್ದಪ್ಪ, ಜಿ.ಪಿ. ವಾಗೀಶ್ ಬಾಬು, ಜೆ.ಎಸ್. ಸಿದ್ದಪ್ಪ, ಶ್ರೀಮತಿ ಎನ್. ವಸಂತ. ಶ್ರೀಮತಿ ಡಿ. ನಿರ್ಮಲ, ವೃತ್ತಿಪರ ನಿರ್ದೇಶಕರಾದ ಈ. ಚಂದ್ರಣ್ಣ, ಡಾ|| ಹೆಚ್.ಎಸ್. ಮಂಜುನಾಥ ಮತ್ತು ವ್ಯವಸ್ಥಾಪನಾ ಮಂಡಳಿಯ ಅಧ್ಯಕ್ಷರಾದ ಐಗೂರು ಸಿ. ಚಂದ್ರಶೇಖರ್ ಮತ್ತು ಸದಸ್ಯರುಗಳಾದ ಬಿ.ಎಸ್. ಪ್ರಕಾಶ್, ಎಂ.ಜಿ. ರಾಜಶೇಖರಯ್ಯ, ಚಾರ್ಟಡ್ ಅಕೌಂಟೆಂಟ್ ಜಿ. ನಂಜನಗೌಡ ಮತ್ತು ನಿವೃತ್ತ ಜಂಟಿ ನಿಬಂಧಕ ಬಿ. ಕುಬೇರಪ್ಪ ಹಾಗೂ ಪ್ರಧಾನ ವ್ಯವಸ್ಥಾಪಕರು ಉಪಸ್ಥಿತರಿದ್ದರು.