ವರಿಷ್ಠರು ಆಕಾಂಕ್ಷಿಗಳಿಗೆ ಮನವೊಲಿಸಬೇಕು

ದಾವಣಗೆರೆ, ಏ.3- ಎಲ್ಲ ಟಿಕೆಟ್ ಆಕಾಂಕ್ಷಿಗಳನ್ನು ಒಗ್ಗೂಡಿಸಿ ಪಕ್ಷದ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಹಾಗೂ ನಿಷ್ಠಾವಂತ ಕಾರ್ಯಕರ್ತರ ಮನವೊಲಿಸಿ ಪಕ್ಷ ಸಂಘಟಿಸುವಂತೆ ಕರೆ ನೀಡಿದರೆ ದೇಶದಾದ್ಯಂತ ಕಾಂಗ್ರೆಸ್ ಅಧಿಕಾರಕ್ಕೆ ಬರುವುದರಲ್ಲಿ ಸಂಶಯವಿಲ್ಲ ಎಂದು ಕೆಪಿಸಿಸಿ ಸದಸ್ಯ ಎಚ್. ದುಗ್ಗಪ್ಪ ಅಭಿಪ್ರಾಯ ಪಟ್ಟಿದ್ದಾರೆ.

ಹಾಲಿ ಶಾಸಕರೇ ಮತ ಹಾಕಿಸಿ ಪಕ್ಷ ಗೆಲ್ಲಿಸುವುದಿಲ್ಲ. ಆದ್ದರಿಂದ ಪಕ್ಷದ ವರಿಷ್ಠರು, ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು, ಟಿಕೆಟ್ ಆಕಾಂಕ್ಷಿಗಳನ್ನು ಮತ್ತು ಕಾರ್ಯಕರ್ತರನ್ನು ಮನವೊಲಿಸುವ ಮೂಲಕ ಪಕ್ಷದ ಗೆಲುವು ಕಾಯ್ದುಕೊಳ್ಳಬೇಕು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ  ಎಚ್. ದುಗ್ಗಪ್ಪ, ಆನಂದಪ್ಪ, ಡಿ. ಬಸವರಾಜು, ಬಿ. ಎಚ್. ವೀರಭದ್ರಪ್ಪ, ರಾಘವೇಂದ್ರ ನಾಯ್ಕ್, ಜಯದೇವನಾಯ್ಕ್, ಸವಿತಾಬಾಯಿ, ಎಸ್‌. ರಾಮಪ್ಪ, ಕೃಷ್ಣಸಾ ಭೂತೆ, ಮಹೇಶ್ವರಯ್ಯ ಸೇರಿದಂತೆ ಸಾಕಷ್ಟು ಜನ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಆದರೆ ಶಾಸಕರು ಮತ್ತು ಸಚಿವರು ಸೂಚಿಸಿದ ವ್ಯಕ್ತಿಗೆ ಟಿಕೆಟ್ ನೀಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಾಲಿ ಶಾಸಕರು ಮತ್ತು ಮುಖಂಡರು ಹೇಳಿದ ಮಾತ್ರಕ್ಕೆ ಜನ ಮತ ನೀಡುವ ಕಾಲವಲ್ಲ, ಅಂತಹ ಪರಿಸ್ಥಿತಿಯೂ ಸಹ ಕಾಂಗ್ರೆಸ್‌ನಲ್ಲಿಲ್ಲ. ಆದ್ದರಿಂದ ಪಕ್ಷದ ವರಿಷ್ಠರು, ಸಚಿವರು ಎಲ್ಲ ಕ್ಷೇತ್ರಗಳ ಟಿಕೆಟ್ ಆಕಾಂಕ್ಷಿಗಳಾಗಿದ್ದವರನ್ನು ಕರೆದು ಅವರಿಗೆ ಸಮಾಧಾನ ಪಡಿಸಿ ಪಕ್ಷ ಸಂಘಟನೆಗೆ ಹುರಿದುಂಬಿಸಿ ಚುನಾವಣೆಯಲ್ಲಿ ಅಭ್ಯರ್ಥಿಗಳ ಪರ ಗೆಲುವಿಗೆ ಶ್ರಮಿಸುವಂತೆ ಕರೆ ಕೊಡಲು  ಸಲಹೆ ನೀಡಿದ್ದಾರೆ.

error: Content is protected !!