ಹರಪನಹಳ್ಳಿ ತಾಲ್ಲೂಕಿನ ಸಭೆಯಲ್ಲಿ ಕಿಡಿ ಕಾರಿದ ಜಿ.ಬಿ. ವಿನಯ್ಕುಮಾರ್
ಹರಪನಹಳ್ಳಿ, ಏ. 3 – ದಾವಣಗೆರೆ ಲೋಕಸಭಾ ಕ್ಷೇತ್ರ ಕೇವಲ ಎರಡು ಕುಟುಂಬಗಳ ಸ್ವತ್ತಾಗಿದೆ. ಇಲ್ಲಿ ಹಿಂದುಳಿದ ವರ್ಗದ ಜನರ ಧ್ವನಿಗೆ ಬೆಲೆ ಇಲ್ಲದಂತಾಗಿದೆ. ಹಾಗಾಗಿ ಇದರ ವಿರುದ್ಧ ನಾನು ಸ್ವಾಭಿಮಾನದ ಹೋರಾಟಕ್ಕೆ ಮುಂದಾಗಿದ್ದೇನೆ ಎಂದು ಕಾಂಗ್ರೆಸ್ ಟಿಕೆಟ್ ವಂಚಿತ ಜಿ.ಬಿ. ವಿನಯ್ಕುಮಾರ್ ಹೇಳಿದರು.
ತಾಲ್ಲೂಕಿನ ಹಲವಾಗಲು, ಅರಸನಾಳು, ತೊಗರಿಕಟ್ಟೆ, ಅರೇಮಜ್ಜಿಗೇರಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಬುಧವಾರ ಭೇಟಿ ನೀಡಿ, ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯ ರ್ಥಿಯಾಗಿ ಸ್ಪರ್ಧಿಸುವ ಬಗ್ಗೆ ಮತದಾರರ ಅಭಿ ಪ್ರಾಯ ಸಂಗ್ರಹಿಸಿ ಅವರು ಮಾತನಾಡಿದರು.
ದಾವಣಗೆರೆ ಜಿಲ್ಲೆಯಲ್ಲಿ ಎರಡು ಪ್ರಬಲ ಕುಟುಂಬಗಳ ಸರ್ವಾಧಿಕಾರದ ಧೋರಣೆಗಳಿಂದ ಇತರೆ ಸಮುದಾಯದ ಜನರಿಗೆ ಆವಕಾಶಗಳು ಸಿಗುತ್ತಿಲ್ಲ. ಆದ್ದರಿಂದ ಸಾಮಾಜಿಕ ಕಳಕಳಿ ಇರುವ ನನ್ನಂತಹ ಯುವ ನಾಯಕರ ಅವಶ್ಯಕತೆ ಈ ಕ್ಷೇತ್ರಕ್ಕೆ ಬೇಕಿದೆ. ಆದರೆ, ರಾಜಕೀಯ ವ್ಯವಸ್ಥೆಯಲ್ಲಿ ನಮ್ಮಂತ ಶೋಷಿತ ಹಿಂದುಳಿದ ಸಮುದಾಯಗಳ ನಾಯಕರು ಆವಕಾಶದಿಂದ ವಂಚಿತರಾಗು ತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ನಾವು ಸ್ವಾಭಿಮಾನಿಗಳು ಇನ್ನೊಬ್ಬರಿಗೆ ಹೆದರಿ ಜೀವನ ಮಾಡುವುದು ಬದುಕಿದ್ದೂ ಸತ್ತಂತೆ. ಆದ್ದರಿಂದ ನಮ್ಮ ಸ್ವಾಭಿಮಾನಕ್ಕೆ ಎಂದೂ ಕೂಡ ಧಕ್ಕೆ ಬಾರದ ರೀತಿಯಲ್ಲಿ ನಡೆದುಕೊಳ್ಳಬೇಕು. ಹಾಗಾಗಿ ನಾನು ಸ್ವಾಭಿಮಾನದ ಹೋರಾಟ ಮಾಡಲು ಮುಂದಾಗಿದ್ದೇನೆ, ನನಗೆ ಕೈ ಜೋಡಿಸಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಹಲವಾಗಲು ನಾಗರಾಜ, ಬೀರಪ್ಪ, ಸುನೀಲ್, ಮಜ್ಜಿಗೇರಿ ಗುಡ್ಡಪ್ಪ, ಕರಿಯಪ್ಪ, ಹಾಲೇಶ, ಬಸವರಾಜ, ಹನುಮಂತಪ್ಪ, ಕರಿಯಲ್ಲಪ್ಪ, ರಾಮಪ್ಪ, ದಿಳ್ಯೆಪ್ಪ, ಶರತ್ಕುಮಾರ್, ರಿಯಾಜ್ ಅಹ್ಮದ್, ಚನ್ನವೀರ, ನೀಲಪ್ಪ ರಂಗಸ್ವಾಮಿ ಸೇರಿದಂತೆ ಇತರರು ಇದ್ದರು.