ಜೈನ ಸನ್ಯಾಸ ದೀಕ್ಷೆ ಪಡೆದ ಮಯಾಂಕ್‌ ಸಂಘವಿ

ಜೈನ ಸನ್ಯಾಸ ದೀಕ್ಷೆ ಪಡೆದ ಮಯಾಂಕ್‌ ಸಂಘವಿ

ರತ್ನ ನಿಧಾನ ವಿಜಯಜೀ ಎಂದು ನಾಮಕರಣ

ದಾವಣಗೆರೆ, ಏ. 2 – ನಗರದ ವಕೀಲರೂ ಆಗಿರುವ ಉದ್ಯಮಿ ಮಹಾವೀರ ಜೈನ್ ಅವರ ಪುತ್ರ ಮಯಾಂಕ್ ಸಂಘವಿ ಅವರ ಜೈನ ಸನ್ಯಾಸ ದೀಕ್ಷೆ ಸ್ವೀಕಾರ ಸಮಾರಂಭವು ಶ್ರೀ ಅಭಿನವ ರೇಣುಕ ಮಂದಿರ ದಲ್ಲಿ ಐದು ದಿನಗಳ ಕಾಲ ಯಶಸ್ವಿಯಾಗಿ ಜರುಗಿತು. 

ದೀಕ್ಷೆ ನೀಡುವ ಮುನ್ನ ಧರ್ಮ ಬೋಧನೆ ನಡೆಯಿತು. ಕೇಶಾವಲೋಚನಾ ಪ್ರಕ್ರಿಯೆ ಬಳಿಕ ಶ್ವೇತವಸ್ತ್ರಧಾರಿಯಾಗಿ ಆಗಮಿಸಿದ ಮಯಾಂಕ್ ಅವರಿಗೆ ಸಂತರ ಜೀವನಕ್ಕೆ ಅವಶ್ಯವಿರುವ ವಸ್ತುಗಳನ್ನು (ವಸ್ತ್ರ ಮುಪ್ಪತ್ತಿ) ನೀಡಲಾಯಿತು. ನಂತರ ಮಯಾಂಕ್ ಅವರ ಹೆಸರನ್ನು `ರತ್ನ ನಿಧಾನ ವಿಜಯಜಿ’ ಎಂದು ನಾಮಕರಣ ಮಾಡಲಾಯಿತು. ಈ ಪ್ರಕ್ರಿಯೆಯ ಬೆನ್ನಲ್ಲೇ ರತ್ನ ನಿಧಾನ ವಿಜಯಜೀ ಅವರ ಸಂತ ಜೀವನ ಆರಂಭಗೊಂಡಿತು.

ದೀಕ್ಷೆ ಸ್ವೀಕಾರ ಸಮಾರಂಭ ಮುಗಿದ ಬಳಿಕ ರತ್ನ ನಿಧಾನ ವಿಜಯಜೀಯವರು ದಾದವಾಡಿ ದೇವಸ್ಥಾನಕ್ಕೆ ತೆರಳಿದರು. ನಿನ್ನೆ ರಾತ್ರಿ ಅಲ್ಲಿಯೇ ತಂಗಿದ್ದ ಅವರು ಇಂದು   ಬೆಳಿಗ್ಗೆ ಹರಿಹರ ಮಾರ್ಗವಾಗಿ ಮುಂಬೈಗೆ ಕಾಲ್ನಡಿಗೆ ಮೂಲಕ ತೆರಳಲಿದರು.

ಪೂರ್ವಾಶ್ರಮದ ನಂಟು ಕಳೆದುಕೊಂಡಿರುವ ಸಂತರು ಮೋಕ್ಷ ಸಾಧನೆ ಗಾಗಿ ಜೀವನವಿಡೀ ಒಂದೆಡೆ ನೆಲೆ ನಿಲ್ಲದೇ ಸಂಚರಿಸುತ್ತಾರೆ. ಮಳೆಗಾಲದ 4 ತಿಂಗಳು (ಚಾತುರ್ಮಾಸ) ಮಾತ್ರ ಒಂದೆಡೆ ನೆಲೆ ನಿಂತು ಧರ್ಮ ಬೋಧನೆ ಯಲ್ಲಿ ತೊಡಗುತ್ತಾರೆ ಎಂದು ಜಯಚಂದ್ ಜೈನ್ ಮಾಹಿತಿ ನೀಡಿದರು.

18 ವರ್ಷದ ಮಯಾಂಕ್ ಎಸ್ಸೆಸ್ಸೆಲ್ಸಿ ಓದಿದ್ದಾರೆ. ತಂದೆ ಮಹಾವೀರ ಜೈನ್ ಅವರಿಗೆ ಮಯಾಂಕ್ ಸೇರಿದಂತೆ ಮೂವರು ಪುತ್ರರಿದ್ದಾರೆ.

ಆಚಾರ್ಯ ವಿಜಯಕುಮುದಚಂದ್ರ ಸುರೀಶ್ವರಜೀ, ಆಚಾರ್ಯ ವಿಜಯ ತೀರ್ಥಭದ್ರಸುರೀಶ್ವರಜೀ, ಆಚಾರ್ಯ ಮಹಾ ಸೇನ ಸುರೇಶ್ವರಜೀ ಸಾನ್ನಿಧ್ಯ ವಹಿಸಿದ್ದರು. ತೀರ್ಥರು ವಿಜಯಜಿ, ತೀರ್ಥರುಚಿ ವಿಜಯಜಿ, ಪುಣ್ಯ ನಿಧಾನ ವಿಜಯಜಿ ಹಾಗೂ ಇನ್ನಿತರ 110 ಗುರುಗಳು ಉಪಸ್ಥಿತರಿದ್ದರು.

error: Content is protected !!