ಹರಪನಹಳ್ಳಿ, ಮಾ.29- ಸಚಿವ ಶಿವರಾಜ್ ತಂಗಡಗಿ ಅವರು ಪ್ರಧಾನಿ ಮೋದಿಯವರ ಬಗ್ಗೆ ನೀಡಿದ್ದ ಹೇಳಿಕೆ ಸತ್ಯವಾಗಿದ್ದು, ಅದನ್ನು ಹಿಂಪಡೆಯುವ ಪ್ರಮೇಯವೇ ಇಲ್ಲ ಎಂದು ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಸಮರ್ಥನೆ ಮಾಡಿಕೊಂಡಿದ್ದಾರೆ.
ಪಟ್ಟಣದ ಸಮತಾ ರೆಸಾರ್ಟ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರಟಗಿಯಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಸಚಿವ ಶಿವರಾಜ್ ತಂಗಡಗಿ ಅವರು ಪ್ರಧಾನಿಯವರು ನೀಡಿದ್ದ ನಿರುದ್ಯೋಗ ನಿರ್ಮೂಲನಾ ಭರವಸೆ ಈಡೇರಿಸುವಲ್ಲಿ ವಿಫಲರಾಗಿದ್ದಾರೆ. ಆದರೂ ಯುವಕರು ಅವರನ್ನೇ ಜಪ ಮಾಡುತ್ತಿದ್ದಾರೆ. ಅಂಥವರಿಗೆ ಕಪಾಳಕ್ಕೆ ಹೊಡೆಯಬೇಕು ಎಂದು ಸಂಬೋಧಿಸಿರುವುದು ನಿಜವಾಗಿದೆ ಎಂದರು.
ಇನ್ನೂ ನಿರುದ್ಯೋಗ ಸಮಸ್ಯೆ ಉಲ್ಬಣವಾಗಿದೆಯೇ ಹೊರತು ಪರಿಹಾರ ಸಿಕ್ಕಿಲ್ಲ. ಆದ್ದರಿಂದ ಅವರ ಮಾತು ಅಕ್ಷರಷಃ ಸತ್ಯವಾಗಿದೆ. ತಂಗಡಿಗಿಯವರ ಬೆನ್ನಿಗೆ ರಾಜ್ಯದ ಎಲ್ಲ ಭೋವಿ ಸಮುದಾಯವಷ್ಟೇ ಅಲ್ಲ, ಕಾಂಗ್ರೆಸ್ ಪಕ್ಷವೂ ಇದೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಮಾತನಾಡಿ, ದಾವಣಗೆರೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಪಟ್ಟಣಕ್ಕೆ ನಾಳೆ ದಿನಾಂಕ 30ರ ಶನಿವಾರ ಭೇಟಿ ನೀಡಲಿದ್ದು, ಹೊಸಪೇಟೆ ರಸ್ತೆಯ ತರಳಬಾಳು ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ 11 ಗಂಟೆಗೆ ಮತಯಾಚನೆ ಪ್ರಚಾರ ಕೈಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಸುರೇಶ್, ಪುರಸಭೆ ಸದಸ್ಯರುಗಳಾದ ಗೊಂಗಡಿ ನಾಗ ರಾಜ್, ಡಿ. ರೆಹಮಾನ್, ವಕೀಲ ವೆಂಕಟೇಶ್, ಪೈಲ್ವಾನ್ ಗಣೇಶ್, ಎಲ್.ಎಂ.ನಾಯ್ಕ್ ಮತ್ತು ಇತರರಿದ್ದರು.