ಹೊನ್ನಾಳಿ ತಾಲ್ಲೂಕಿನಲ್ಲಿ ಚೆಕ್ಪೋಸ್ಟ್ ಪರಿಶೀಲಿಸಿದ ಜಿಲ್ಲಾಧಿಕಾರಿ ಡಾ. ಎಂ.ವಿ.ವೆಂಕಟೇಶ್
ಹೊನ್ನಾಳಿ, ಮಾ.29- ಚುನಾವಣೆಯಲ್ಲಿ ಕಾನೂನು ನಿಯಮ ಪಾಲಿಸುವಂತೆ ಮತ್ತು ಕರ್ತವ್ಯ ಲೋಪವಾಗದಂತೆ ಕಾರ್ಯ ನಿರ್ವಹಿ ಸಲು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಡಾ. ಎಂ.ವಿ ವೆಂಕಟೇಶ್ ಸೂಚನೆ ನೀಡಿದರು.
ಗೊಲ್ಲರಹಳ್ಳಿ ಮತ್ತು ಹೊಳೆಹರಳಹಳ್ಳಿ ಚೆಕ್ ಪೋಸ್ಟ್ಗಳನ್ನು ಪರಿಶೀಲನೆ ನಡೆಸಿದ ವೇಳೆ ಅವರು ಮಾತನಾಡಿದರು.
ಮತದಾರರಿಗೆ ಆಮಿಷ ಒಡ್ಡಲು ವಾಹನಗಳಲ್ಲಿ ಹಣ, ಸೀರೆ, ಮದ್ಯ ಮತ್ತಿತರೆ ವಸ್ತುಗಳು ಸಾಗಣೆಯಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಆದ್ದರಿಂದ ಚೆಕ್ ಪೋಸ್ಟ್ಗಳಲ್ಲಿ ಎಲ್ಲಾ ವಾಹನಗಳನ್ನು ಕಡ್ಡಾಯವಾಗಿ ತಪಾಸಣೆ ನಡೆಸಿ, ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ಜಾಗೃತಿ ವಹಿಸಬೇಕು ಎಂದರು.
ವಾಹನ ತಪಾಸಣೆಗೊಳಿಸದೇ ನಿರ್ಲಕ್ಷ್ಯ ತೋರಿದರೆ, ಚೆಕ್ ಪೋಸ್ಟ್ನಲ್ಲಿ ಕಾರ್ಯ ನಿರ್ವಹಿಸುವವರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ನಂತರ ಪಟ್ಟಣದ ಗಂಗಮ್ಮ ವೀರಭದ್ರ ಶಾಸ್ತ್ರಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿರುವ ಇವಿಎಂ ಸ್ಟ್ರಾಂಗ್ ರೂಂಗಳಿಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಸಹಾಯಕ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಚುನಾವಣೆಗೆ ಸಂಬಂಧಿಸಿದ ಮಾಹಿತಿ ತಿಳಿಸುವ ಜತೆಗೆ ಪ್ಲಾಸ್ಟಿಕ್ ರಹಿತ ಚುನಾವಣೆ ನಡೆಸುವ ಬಗ್ಗೆ ಮಾಹಿತಿ ನೀಡಿದರು.
ಸಹಾಯಕ ಚುನಾವಣಾಧಿಕಾರಿ ಅಭಿಷೇಕ್, ತಹಶೀಲ್ದಾರ್ ಪುರಂದರ ಹೆಗ್ಡೆ, ನ್ಯಾಮತಿ ತಹಶೀಲ್ದಾರ್ ಫಿರೋಜ್ ಷಾ ಸೋಮನಕಟ್ಟಿ, ಎಸ್.ಎಸ್.ಟಿ. ತಂಡದ ಉಪನ್ಯಾಸಕ
ಎಚ್.ದೊಡ್ಡಸ್ವಾಮಿ, ರಾಜಸ್ವ ನಿರೀಕ್ಷಕರಾದ ಎಸ್. ಜಯಪ್ರಕಾಶ್, ದಿನೇಶ್ ಬಾಬು, ಬಿ.ಎಂ. ರಮೇಶ್, ಗೊಲ್ಲರಹಳ್ಳಿ ಸಂತೋಷ್ ಮತ್ತಿತರರಿದ್ದರು.