ಅಭ್ಯರ್ಥಿ ಬದಲಿಸಿ, ವಿನಯ್‌ಗೆ ಟಿಕೆಟ್ ನೀಡಿ

ದಾವಣಗೆರೆ, ಮಾ.25- ಇಲ್ಲಿನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯನ್ನು ಬದಲಿಸಿ, ಅಹಿಂದ ವರ್ಗದ ಪ್ರತಿನಿಧಿ ಜಿ.ಬಿ. ವಿನಯ್‌ ಕುಮಾರ್‌ ಅವರಿಗೆ ಅವಕಾಶ ಕಲ್ಪಿಸಬೇಕೆಂದು ಅಹಿಂದ ಚೇತನದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಬಿ. ಮೌರ್ಯ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಲೋಕಸಭಾ ಚುನಾವಣಾ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಶೇ.80ರಷ್ಟು ಅಹಿಂದ ಮತಗಳಿದ್ದರೂ ನಮ್ಮನ್ನು ಕರಪತ್ರ ವಿತರಿಸಲು, ಪೋಸ್ಟರ್ ಅಂಟಿಸಲು ಬಳಸುತ್ತಿದ್ದಾರೆಯೇ ಹೊರತು ಅಹಿಂದ ನಾಯಕರಿಗೆ ಅವಕಾಶ ಒದಗಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇನ್‌ಸೈಟ್ ಸಂಸ್ಥಾಪಕ ವಿನಯ್‌ ಅವರು ಜಿಲ್ಲೆಯಲ್ಲಿ ವಿನಯ ನಡಿಗೆ ಮೂಲಕ ಬಿರುಸಿನ ಪ್ರಚಾರ ನಡೆಸಿ ಅನೇಕ ಯುವಕರನ್ನು ತಲುಪಿ ದ್ದಾರೆ. ಆಕಾಂಕ್ಷಿಯ ಗೆಲುವು ಖಚಿತವಾಗಿದ್ದರೂ, ಕಾಂಗ್ರೆಸ್ ಹೈಕಮಾಂಡ್ ಮತ್ತು ಕೆಪಿಸಿಸಿ ರಾಜ್ಯಾಧ್ಯಕ್ಷರು ಟಿಕೆಟ್ ನೀಡದೇ ಇರುವುದರಿಂದ ಅಹಿಂದವರಿಗೆ ಸಂಸದರಾಗಲು ಯೋಗ್ಯತೆ ಇಲ್ಲವೇ? ಎಂಬ ಪ್ರಶ್ನೆ ಕಾಡುತ್ತಿವೆ ಎಂದರು.

ಅಹಿಂದ ವರ್ಗದವರ ಸ್ವಾಭಿಮಾನ ಮತ್ತು ಹಕ್ಕುಗಳಿಗಾಗಿ ಪಕ್ಷದ ಹೈಕಮಾಂಡ್, ಕೆಪಿಸಿಸಿ, ಮುಖ್ಯಮಂತ್ರಿ ಮತ್ತು ಉಸ್ತುವಾರಿಗಳು ಈಗಿನ ಅಭ್ಯರ್ಥಿ  ಬದಲಾಯಿಸಿ, ಅಹಿಂದ ನಾಯಕ ವಿನಯ್ ಅವರಿಗೆ ಅವಕಾಶ ನೀಡಬೇಕು. ಇಲ್ಲದಿದ್ದರೆ, ಸ್ವಾಭಿಮಾನಿ ಅಭ್ಯರ್ಥಿಯಾಗಿ ಚುನಾವಣೆಗೆ ನಿಲ್ಲಿಸುವುದು ಶತಾಯಗತಾಯ ಎಂದು ಹೇಳಿದರು.

ವಿನಯ್ ಅವರು ಸ್ವಾಭಿಮಾನಿ ಅಭ್ಯರ್ಥಿಯಾಗಿ ನಿಲ್ಲಲು ಒಪ್ಪದಿದ್ದರೆ ಎಂಬ ಸುದ್ದಿಗಾರರ ಪ್ರಶ್ನೆಗೆ, ಅಹಿಂದ ನಾಯಕರಾದ ಯಾರಾದರೊಬ್ಬರನ್ನು  ಕಣಕ್ಕಿಳಿಸಲಿದ್ದೇವೆ  ಎಂದು ಉತ್ತರಿಸಿದರು.

ಕಾಂಗ್ರೆಸ್‌ನ ಹಿರಿಯ ಮುಖಂಡ ಹನುಮಂತಪ್ಪ ತುಪ್ಪದಹಳ್ಳಿ ಮಾತನಾಡಿ, ಜಗಳೂರಿನಲ್ಲಿ ನಾನು ಕಾಂಗ್ರೆಸ್ ಅಭ್ಯರ್ಥಿಯಾಗಲು ಪ್ರಯತ್ನಿಸಿದಾಗ ನನಗೂ ಪಕ್ಷ ಮೋಸ ಮಾಡಿದೆ ಎಂದು ಅಳಲು ತೋಡಿದರು.

ಯುವಕರ ಬೆಂಬಲ ಹೊಂದಿರುವ ವಿನಯ್ ಅವರಿಗೆ ಟಿಕೆಟ್ ಘೋಷಣೆ ಮಾಡಿ, ಬಿ ಫಾರಂ ನೀಡಬೇಕೆಂದು ಎಐಸಿಸಿಗೆ ಒತ್ತಾಯಿಸಿದರು.

ಭೋವಿ ಸಮಾಜದ ಮುಖಂಡ ವಿ. ಲಕ್ಷ್ಮಣ್, ಅಹಿಂದ ಮುಖಂಡರಾದ ಎಸ್. ಮುರುಗೇಶ್, ಆರ್.ಬಿ. ಪರಮೇಶ್, ಕುರುಬ ಸಮಾಜದ ಮುಖಂಡ ಜಿ.ಷಣ್ಮುಖಪ್ಪ, ಬಸವ ಬುದ್ಧ ಅಂಬೇಡ್ಕರ್ ಸಂಘದ ಅಧ್ಯಕ್ಷ ರಂಗನಾಥ್, ಗಿರೀಶ್ ಸುದ್ದಿಗೋಷ್ಠಿಯಲ್ಲಿದ್ದರು.

error: Content is protected !!