ಮಲೇಬೆನ್ನೂರಿನಲ್ಲಿ ಮಕ್ಕಳ ಮೇಲೆ ಬೀದಿ ನಾಯಿ ದಾಳಿ ; ಮಗುವಿಗೆ ಗಾಯ

ಮಲೇಬೆನ್ನೂರು, ಮಾ.25- ಮನೆ ಬಳಿ ಆಟವಾಡುತ್ತಿದ್ದ ಆರು ಮಕ್ಕಳ ಮೇಲೆ ಬೀದಿ ನಾಯಿ ದಾಳಿ ಮಾಡಿದ್ದು, ಓರ್ವ ಮಗು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶನಿವಾರ ಸಂಜೆ ಮಲೇಬೆನ್ನೂರಿನಲ್ಲಿ ನಡೆದಿದೆ.

ಪಟ್ಟಣದ ನಂದೀಶ್ವರ ಬಡಾವಣೆಯಲ್ಲಿ ಆಟವಾಡುತ್ತಿದ್ದ 3 ವರ್ಷದ ಅರ್ಚನಾಳಿಗೆ ತಲೆ ಮತ್ತು ಕಣ್ಣಿಗೆ ಕಚ್ಚಿ ತೀವ್ರವಾಗಿ ಗಾಯಗೊಳಿಸಿದ ನಾಯಿ, ನಂತರ ಅಲ್ಲಿಂದ ಶಾದಿಮಹಲ್ ಬಳಿ ಇರುವ ಮನೆಗಳ ಮುಂದೆ ಆಟವಾಡುತ್ತಿದ್ದ 2 ವರ್ಷದ ಸೈಯ್ಯದ್ ಆಜಾನ್, 3 ವರ್ಷದ ಫೈಜಾನ್, 5 ವರ್ಷದ ರಜಾಕ್, 8 ವರ್ಷದ ಮಲ್ಲಿಕ್ ರೆಹಾನ್ ಇವರನ್ನು ಸ್ವಲ್ಪ ಪ್ರಮಾಣದಲ್ಲಿ ಕಚ್ಚಿದೆ. ಇದರಿಂದ ರೊಚ್ಚಿಗೆದ್ದ ನಾಗರಿಕರು ಆ ನಾಯಿಯನ್ನು ಹುಡುಕಿ ಹೊಡೆದು ಸಾಯಿಸಿದ್ದಾರೆ ಎನ್ನಲಾಗಿದೆ. 

ತೀವ್ರವಾಗಿ ಗಾಯಗೊಂಡಿದ್ದ ಅರ್ಚನಾಳನ್ನು ತಕ್ಷಣ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದ ಪೋಷಕರು, ಪ್ರಥಮ ಚಿಕಿತ್ಸೆಗಾಗಿ ದಾವಣಗೆರೆಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅಲ್ಲಿ ಮಗುವಿನ ತೆಲೆಗೆ 8 ಹೊಲಿಗೆ ಹಾಕಿದ್ದು, ಒಂದು ವಾರ ಬಿಟ್ಟು ಕಣ್ಣಿನ ಶಸ್ತ್ರಚಿಕಿತ್ಸೆ ಮಾಡುವುದಾಗಿ ವೈದ್ಯರು ತಿಳಿಸಿದ್ದಾರೆಂದು ಮಗುವಿನ ಪೋಷಕ ಹನುಮೇಶ್ ಮಾಹಿತಿ ನೀಡಿದರು.

ಸಿಓ ಮನವಿ : ಈ ಘಟನೆ ಕುರಿತು ಹೇಳಿಕೆ ನೀಡಿದ ಪುರಸಭೆ ಮುಖ್ಯಾಧಿಕಾರಿ ಎ.ಸುರೇಶ್ ಅವರು, ಸಾರ್ವಜನಿಕರು ಮಾಂಸಾಹಾರಿ ತ್ಯಾಜ್ಯವನ್ನು ಚರಂಡಿಗಳಲ್ಲಿ ಹಾಕದೇ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಮಕ್ಕಳು ಮನೆಯ ಹೊರಗಡೆೆ ಆಟವಾಡುವಾಗ ಅಲ್ಲಿ ಬೀದಿನಾಯಿ ಅಥವಾ ಹಂದಿಗಳಿದ್ದರೆ ನಿಗಾವಹಿಸಬೇಕೆಂದು ಪೋಷಕರಲ್ಲಿ ಮನವಿ ಮಾಡಿದ್ದಾರೆ.

error: Content is protected !!