ಯುವ ಜನಾಂಗದಲ್ಲಿ ಧರ್ಮ, ರಾಷ್ಟ್ರ ಪ್ರಜ್ಞೆ ಜಾಗೃತಗೊಳ್ಳಲಿ

ಯುವ ಜನಾಂಗದಲ್ಲಿ ಧರ್ಮ, ರಾಷ್ಟ್ರ ಪ್ರಜ್ಞೆ ಜಾಗೃತಗೊಳ್ಳಲಿ

ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವದಲ್ಲಿ ರಂಭಾಪುರಿ ಜಗದ್ಗುರುಗಳು

ಬಾಳೆಹೊನ್ನೂರು, ಮಾ. 24 – ಬೆಳೆಯುತ್ತಿರುವ ಯುವ ಜನಾಂಗ ಈ ದೇಶದ ಅಮೂಲ್ಯ ಆಸ್ತಿ. ಅವರಿಗೆ ಯೋಗ್ಯ ಸಂಸ್ಕಾರ ಮತ್ತು ಆದರ್ಶಗಳನ್ನು ಕಲಿಸಿಕೊಡುವ ಅಗತ್ಯವಿದೆ. ಯುವ ಜನಾಂಗದಲ್ಲಿ ಧರ್ಮ ಪ್ರಜ್ಞೆ ಮತ್ತು ರಾಷ್ಟ್ರ ಪ್ರಜ್ಞೆ ಜಾಗೃತಗೊಳ್ಳಬೇಕೆಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗ ಮಾನೋತ್ಸವ ಹಾಗೂ ಕ್ಷೇತ್ರನಾಥ ವೀರಭದ್ರಸ್ವಾಮಿ ಮಹಾರಥೋ ತ್ಸವದ ಅಂಗವಾಗಿ ಶನಿವಾರ ಶ್ರೀ ಪೀಠದಲ್ಲಿ ಜರುಗಿದ ಯುವ ಜನಾಂಗದಲ್ಲಿ ಧರ್ಮ-ಪ್ರಜ್ಞೆ, ರಾಷ್ಟ್ರ-ಪ್ರಜ್ಞೆ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಸಮಾಜದಲ್ಲಿ ಗೌರವ, ಘನತೆ, ಪ್ರಾಪ್ತವಾದ ದಿನಗಳಲ್ಲಿ ನಡೆದು ಬಂದ ದಾರಿಯನ್ನು ಮರೆಯ ಬಾರದು. ಕಾಲಿಗೆ ಆದ ಗಾಯ ಹೇಗೆ ಬದುಕ ಬೇಕೆಂಬುದನ್ನು ಕಲಿಸುತ್ತದೆ. ಶ್ವಾಸ ಇದ್ದರೆ ಬದುಕು, ಶ್ವಾಸ ಇಲ್ಲದಿದ್ದರೆ ಜೀವನ ಮುಗಿಯು ತ್ತದೆ. ವಿಶ್ವಾಸವಿದ್ದರೆ ಸಂಬಂಧ, ಇಲ್ಲದಿದ್ದರೆ ಸಂ ಬಂಧಗಳು ನಾಶಗೊಳ್ಳುತ್ತವೆ. ಆದ್ದರಿಂದ ಯುವ ಜನಾಂಗ ಜಾಗೃತಗೊಂಡು ಧರ್ಮ ಸಂಸ್ಕೃತಿ, ಪರಂಪರೆ, ದೇಶಭಕ್ತಿ ಮೈಗೂಡಿಸಿಕೊಂಡು ಬದುಕಬೇಕು ಎಂದು ಶ್ರೀಗಳು ಕರೆ ನೀಡಿದರು.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ವೀರಶೈವರೆಂದರೆ ಭಕ್ತಿಯಲ್ಲಿಯೂ ವೀರರು. ಬದುಕಿನಲ್ಲಿಯೂ ವೀರರು. ಸರಳ ಬದುಕನ್ನು ನಾವಿಂದು ಕ್ಲಿಷ್ಟ ಮಾಡಿಕೊಂಡಿದ್ದೇವೆ. ಜೀವನದಲ್ಲಿ ಮುಗ್ಧತೆಯನ್ನು ಕಾಪಾಡಿಕೊಂಡು ಬರುವುದು ಆತ್ಮಸಾಕ್ಷಿಯಂತೆ ನಡೆದುಕೊಳ್ಳುವುದ ಬಲು ಕಷ್ಟದ ಕೆಲಸ. ತಮ್ಮ  ಅಧಿಕಾರಾವಧಿಯಲ್ಲಿ ಶ್ರೀ ಜಗದ್ಗುರು ರೇಣುಕಾ ಚಾರ್ಯ ಜಯಂತಿಯನ್ನು ಸರ್ಕಾರದಿಂದ ನಡೆ ಸುವಂತೆ ಆದೇಶ ಮಾಡಿದ್ದನ್ನು ನೆನಪಿಸಿಕೊಂಡರು. ಶ್ರೀ ಜಗದ್ಗುರು ರೇಣುಕಾಚಾರ್ಯರ ಮೌಲ್ಯಾಧಾರಿತ ಧಾರ್ಮಿಕ ಚಿಂತನಗಳು ನಮ್ಮೆಲ್ಲರ ಬಾಳಿಗೆ ಆಶಾಕಿರಣವೆಂದರು. 

 ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಸೂಡಿ ಜುಕ್ತಿ ಹಿರೇಮಠದ ಡಾ|| ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನಾಗರಿಕ ಸಮಾಜದಲ್ಲಿ ಕೆಲವು ಅನಾಗರಿಕ ವರ್ತನೆಗಳು ನಡೆಯುತ್ತಿರುವುದು ಒಳ್ಳೆಯದಲ್ಲ. ಬೆಳೆಯುವ ಜನಾಂಗದಲ್ಲಿ ಸಂಸ್ಕಾರ, ಸಂಸ್ಕೃತಿ, ದೇಶ, ಧರ್ಮ, ಇವುಗಳ ಬಗ್ಗೆ ಸ್ವಾಭಿಮಾನ ಬೆಳೆದು ಕೊಂಡು ಬರುವ ಅವಶ್ಯಕತೆ ಇದೆಯೆಂದರು.

ಹರಪನಹಳ್ಳಿ ತೆಗ್ಗಿನಮಠ ಸಂಸ್ಥಾನದ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಪ್ರಾಸ್ತಾವಿಕ ನುಡಿದರು. ಮೈಸೂರಿನ ಹಿರಿಯ ಪತ್ರಕರ್ತ ಎ.ಆರ್. ರಘುರಾಮ ಮಾತನಾಡಿದರು.

ದುಗ್ಲಿ-ಕಡೇನಂದಿಹಳ್ಳಿ ಕ್ಷೇತ್ರದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು, ಕಾರ್ಜುವಳ್ಳಿ ಸದಾಶಿವ ಶಿವಾಚಾರ್ಯ ಸ್ವಾಮಿಗಳು, ಹುಬ್ಬಳ್ಳಿಯ ಬಸಯ್ಯ ಕಾಡಯ್ಯ ಹಿರೇಮಠ, ಸಿದ್ಧಾಪುರದ ಬಸನಗೌಡ ಮಾಲಿ ಪಾಟೀಲ, ಬೆಂಗಳೂರಿನ ಬಾಳಯ್ಯ ಇಂಡಿಮಠ ಇವರಿಗೆ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು.

ಚಿಕ್ಕಮಗಳೂರಿನ ಡಾ|| ಕೆ.ಆರ್. ಭೂಮಿಕಾ ಭರತ ನಾಟ್ಯ ಪ್ರದರ್ಶಿಸಿದರು. ಕೊಡ್ಲಿಪೇಟೆ ರಾಜೇಶ್ವರಿ ನಾಗರಾಜ್ ಸ್ವಾಗತಿಸಿದರು.  ಚಿಕ್ಕಮ ಗಳೂರಿನ ಪಾರ್ವತಿ ಮಹಿಳಾ ಬಳಗದವರಿಂದ ಸಂಗೀತ ಜರುಗಿತು. ಸವಣೂರಿನ ಡಾ. ಗುರುಪಾದಯ್ಯ ಸಾಲಿಮಠ ನಿರೂಪಿಸಿದರು.

error: Content is protected !!