ಹರಿಹರ : ಸ್ವಂತ ಖರ್ಚಿನಲ್ಲಿ ನೀರು ಸರಬರಾಜು

ಹರಿಹರ : ಸ್ವಂತ ಖರ್ಚಿನಲ್ಲಿ ನೀರು ಸರಬರಾಜು

ಹರಿಹರ, ಮಾ.24- ನಗರದ ತುಂಗಭದ್ರಾ ನದಿಯಲ್ಲಿ ನೀರಿಲ್ಲದೆ ಜಲಸಿರಿ ಇಲಾಖೆ ಕಳೆದ ಒಂದು ವಾರದಿಂದ ಜನತೆಗೆ ನೀರು ಸರಬರಾಜು ಮಾಡುವುದನ್ನು ಸ್ಥಗಿತಗೊಳಿಸಿದ್ದರಿಂದ ನಗರಸಭೆ ಸದಸ್ಯ ಆರ್.ಸಿ. ಜಾವೀದ್  ತಮ್ಮ ವಾರ್ಡಿನ ಜನತೆಗೆ ತಮ್ಮ ಸ್ವಂತ ಟ್ಯಾಂಕರ್ ಗಳ ಮೂಲಕ ನೀರು ಸರಬರಾಜು ಮಾಡಲಿಕ್ಕೆ ಮುಂದಾಗಿದ್ದಾರೆ. ಆದರೆ ಆ ಟ್ಯಾಂಕರ್ ಗೆ ಸಮರ್ಪಕವಾಗಿ ನೀರು ಕೊಡದೇ ಇರೋದಕ್ಕೆ ನಗರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಮಾತನಾಡಿದ ಅವರು, ನಮ್ಮ ವಾರ್ಡಿನಲ್ಲಿ ಕನಿಷ್ಠ 4 ಸಾವಿರ ಜನಸಂಖ್ಯೆ ಇದೆ. ಆ ದೃಷ್ಟಿಯಿಂದ ಜಲಸಿರಿ ಮತ್ತು ನಗರಸಭೆ ಅಧಿಕಾರಿ ಗಳಿಗೆ ಪದೇ ಪದೇ ನೀರು ಸರಬರಾಜು ಮಾಡಿ ಎಂದು ಕೇಳುವುದರ ಬದಲಿಗೆ, ವಾರ್ಡಿನಲ್ಲಿ ಇದ್ದ ಒಂದು ಬೋರ್‌ವೆಲ್‌ಗೆ  ಸುಮಾರು 1.5 ಲಕ್ಷ ರೂ.  ವೆಚ್ಚದಲ್ಲಿ ನಾವೇ ಸ್ವಂತ ಹಣದಿಂದ ವಾರ್ಡಿನಲ್ಲಿ ಪೈಪ್ ಲೈನ್ ಹಾಕಿಸಿಕೊಂಡು ವಾರ್ಡಿನಲ್ಲಿ ನೀರು ಸರಬರಾಜು ಮಾಡುತ್ತಿದ್ದೇವೆ ಎಂದರು.

ಒಂದು ನೀರಿನ ಟ್ಯಾಂಕರ್ ಗೆ ನಮ್ಮದೇ ಡ್ರೈವರ್, ನಮ್ಮದೇ ಡೀಸೆಲ್‌ ಹಾಕಿ ಮತ್ತು ಟ್ಯಾಂಕರ್ ನೀರಿಗೆ 150 ರೂಪಾಯಿ ಕೊಡುವ ಮೂಲಕ ವಾರ್ಡಿನಲ್ಲಿ ನೀರಿನ ಕೊರತೆ ನೀಗಿಸಲು ಮುಂದಾಗಿದ್ದು. ಆದರೆ ನಮ್ಮ ಟ್ಯಾಂಕರ್ ಗೆ ನಗರದ ವಾಟರ್ ವರ್ಕರ್‌ ಹತ್ತಿರ ಇರುವ ಬೋರವೆಲ್ ನಲ್ಲಿ ಇರುವ ನೀರನ್ನು ಸಮರ್ಪಕವಾಗಿ ಕೊಡದ ಕಾರಣ, ವಾರ್ಡಿನ ಜನರಿಗೆ ನೀರು ಸರಬರಾಜು ಮಾಡಲು ಆಗುತ್ತಿಲ್ಲ. ಬೋರವೆಲ್ ನಿಂದ ನೀರು ಕೊಡಿ ಎಂದು ಕೇಳಿದಾಗ ನಮ್ಮ ನಗರಸಭೆಯ ಮೂರು ಟ್ಯಾಂಕರ್ ಗಳಿಗೆ ನೀರು ಕೊಟ್ಟು ತದನಂತರ ನಿಮಗೆ ಕೊಡುವು ದಾಗಿ ಅಧಿಕಾರಿಗಳು ಹೇಳುತ್ತಾರೆ. 

ನಗರಸಭೆ ಸದಸ್ಯ ಎಂ.ಎಸ್. ಬಾಬುಲಾಲ್ ಮಾತನಾಡಿ, ನಮ್ಮ ವಾರ್ಡಿನಲ್ಲಿ ಒಂದು ಬೋರ್‌ವೆಲ್ 3 ಇಂಚು ನೀರು ಬರುತ್ತಿದೆ. ಅದಕ್ಕೆ ಒಂದು ಪೈಪ್ ಅಳವಡಿಸಿದರೆ ನಮ್ಮ ವಾರ್ಡಿನ ಜನತೆಗೆ ಅಲ್ಲಿಂದಲೇ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬಹುದು. ಮತ್ತು ಅಕ್ಕ ಪಕ್ಕದ ವಾರ್ಡಿನ ಜನತೆಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬಹುದು. ಆದರೆ, ನಗರಸಭೆ ಅಧಿಕಾರಿಗಳು ಆ ಒಂದು ಪೈಪ್ ಹಾಕಲು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಹೇಳಿದರು.

ಎಇಇ ತಿಪ್ಪೇಸ್ವಾಮಿ ಮಾತನಾಡಿ, ಜಿಲ್ಲಾಧಿಕಾರಿಗಳು ಟ್ಯಾಂಕರ್ ಬಾಡಿಗೆ ಪಡೆದುಕೊಂಡು ನೀರು ಸರಬರಾಜು ಮಾಡಿ ಎಂದು ನಿರ್ದೇಶನ ನೀಡಿದ್ದಾರೆ. ಆದರೆ ಟ್ಯಾಂಕರ್ ಮಾಲೀಕರು ನಮಗೆ ಅಂದಿನ ಹಣವನ್ನು  ಅಂದೇ ಪಾವತಿ ಮಾಡುವಂತೆ ಕೇಳುತ್ತಿದ್ದಾರೆ. ಅವರಿಗೆ ವಾರಕ್ಕೊಮ್ಮೆ  ಹಣ ನೀಡುವುದಾಗಿ ಬನ್ನಿ ಎಂದು ಹೇಳಿದರೂ ಸಹ ಯಾರೂ ನೀರು ಸರಬರಾಜು ಮಾಡಲಿಕ್ಕೆ ಮುಂದೆ ಬರದೇ ಇರೋದರಿಂದ ನಮ್ಮ ನಗರಸಭೆಯ ಮೂರು ಟ್ಯಾಂಕರ್ ನಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ. 

ಜಗಳೂರು ಭಾಗದಲ್ಲಿ ನದಿಯಲ್ಲಿ ಮುದ್ದೆ ಬೋರ್‌ವೆಲ್ ಕೊರೆಸಿ ಆ ಮೂಲಕ ನೀರು ಸರಬರಾಜು ಮಾಡುವಂತಹ ವ್ಯವಸ್ಥೆ ಇದ್ದು, ಅದನ್ನು ಇಲ್ಲಿನ ತುಂಗಭದ್ರಾ ನದಿಯ ಹತ್ತಿರ ಮುದ್ದೆ ಬೋರ್‌ವೆಲ್ ವ್ಯವಸ್ಥೆ ಮಾಡಲು ಪೌರಾಯುಕ್ತ ಐಗೂರು ಬಸವರಾಜ್ ಬಳಿ ಚರ್ಚೆ ಮಾಡಿ ಈ ವಿಚಾರವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಹೇಳಿದರು. 

ಈ ಸಂದರ್ಭದಲ್ಲಿ ನಾಮನಿರ್ದೇಶನ ಸದಸ್ಯ ಸಂತೋಷ ದೊಡ್ಡಮನಿ, ಆರೋಗ್ಯ ಇಲಾಖೆಯ ರವಿಪ್ರಕಾಶ್, ಬಸವರಾಜ್ ಇತರರು ಹಾಜರಿದ್ದರು. 

error: Content is protected !!