ಸಾಹಿತ್ಯ ಇಲ್ಲದೇ ಯಾವ ಕ್ಷೇತ್ರವೂ ಮುಂದುವರಿಯಲಾರದು

ಸಾಹಿತ್ಯ ಇಲ್ಲದೇ ಯಾವ ಕ್ಷೇತ್ರವೂ ಮುಂದುವರಿಯಲಾರದು

ಹರಿಹರದಲ್ಲಿನ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಯುವ ಕವಿಗೋಷ್ಠಿಯಲ್ಲಿ ಎಸ್. ಸಿದ್ದೇಶ್ ಕುರ್ಕಿ

ಹರಿಹರ, ಮಾ. 22- ಸಾಹಿತ್ಯ ಇಲ್ಲದೇ  ಯಾವ ಕ್ಷೇತ್ರವೂ ಮುಂದುವರಿಯಲಾರದು. ವಿಜ್ಞಾನವಿರಲಿ, ತಂತ್ರಜ್ಞಾನವಿರಲಿ, ಅಭಿವ್ಯಕ್ತಿ ವಿಚಾರವಿರಲಿ ಎಲ್ಲವೂ ವ್ಯಕ್ತವಾಗುವುದು ಸಾಹಿತ್ಯದ ಬರಹದ ಮೂಲಕವೇ ಅರ್ಥವಾಗುವುದು. ಅದಕ್ಕೆ ಸಾಹಿತ್ಯ ಅತ್ಯಗತ್ಯ ಎಂದು ಕವಿ ಮತ್ತು ಸಾಹಿತಿ ಎಸ್. ಸಿದ್ದೇಶ್ ಕುರ್ಕಿ ಯುವ ಕವಿಗಳಿಗೆ ಕಿವಿಮಾತು ಹೇಳಿದರು.

ನಿನ್ನೆ ಇಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಏರ್ಪಾಡಾಗಿದ್ದ ಯುವ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಥೆ ಬರೆಯುವವರನ್ನು ಕತೆಗಾರ, ಕಾದಂಬರಿ ಬರೆಯುವವರು ಕಾದಂಬರಿಕಾರ, ಇತಿಹಾಸ ಬರಹಗಾರನನ್ನು ಇತಿಹಾಸಕಾರ, ಪ್ರವಾಸದ ಅನುಭವ ತಿಳಿಸುವವನು ಪ್ರವಾಸ ಕಥನಕಾರ, ಲೇಖನ ಬರೆಯುವವ ಲೇಖಕ, ಸಾಹಿತ್ಯ ಬರೆಯುವವ ಸಾಹಿತಿಯ ಹಾಗೆಯೇ ಕವನಗಳನ್ನು ಬರೆಯುವವರು ಕವಿಯಾಗುತ್ತಾನೆ. ರವಿ ಕಾಣದ್ದನ್ನು ಕವಿ ಕಂಡ, ಕವಿ ಕಾಣದ್ದನ್ನು ಓದು ಕಂಡ, ಕವಿ ಚಿಂತನೆಗಿಂತ ಓದುಗನ ಚಿಂತೆ ವಿಚಿತ್ರವಾಗಿರುತ್ತದೆ. ಅದಕ್ಕೆ ಕವಿಯಾದವನು ಓದುಗ ಅಭಿಪ್ರಾಯ ಗಮನದಲ್ಲಿಟ್ಟುಕೊಂಡು ಸಮಾಜ ತಿದ್ದುವ ನಿಟ್ಟಿನಲ್ಲಿ ಕಾವ್ಯ ರಚಿಸಬೇಕೆಂದರು. ಸಾಹಿತಿ, ಕವಿ ಎನಿಸಿಕೊಳ್ಳುವುದು ಸುಲಭದ ಮಾತಲ್ಲ. ಅದಕ್ಕೆ ನಮ್ಮ ಯುವ ಕವಿಗಳಇಗೆ ಸಾಹಿತ್ಯದ ಅಧ್ಯಯನ ಅತ್ಯವಶ್ಯಕ. ಅದಕ್ಕೆ ನಮ್ಮ ಹಿರಿಯ ಕವಿಗಳ ಕಾವ್ಯಗಳನ್ನು ಅಭ್ಯಸಿಸಿ, ಮತ್ತೆ ಮತ್ತೆ ಓದುವುದು ಮತ್ತೆ ಮತ್ತೆ ಬರೆಯುವುದು ಎಂಬುದಿದೆಯಲ್ಲ ಅದು ಖಂಡಿತ ಕವಿಯನ್ನು ನಿಧಾನಕ್ಕೆ ಪಳಗಿಸುತ್ತದೆ. ಕ್ರಮೇಣ ಒಗ್ಗುತ್ತದೆ. ನಂತರ ಒಲಿಯುತ್ತದೆ. ಅಲ್ಲಿಯವೆರಗೂ ಬರವಣಿಗೆಯನ್ನು ಕಾದುಕೊಂಡವನೇ ನಿಜವಾದ ಕವಿಯಾಗುತ್ತಾನೆ. ನಿರಂತರವಾಗಿ ಬರೆಯುತ್ತಲೇ ಇರುವುದರಿಂದ  ಬರವಣಿಗೆ ನಮ್ಮಲ್ಲಿ ಒಳ್ಳೆಯ ಅಭಿಪ್ರಾಯ ಮೂಡಿಸುತ್ತದೆ. ಒಳ್ಳೆಯ ವಿಚಾರಗಳತ್ತ ಪ್ರಚೋದಿಸುತ್ತದೆ. ಸಾಂಸ್ಕೃತಿಕವಾಗಿ ಬೆಳೆಯಲು ಪ್ರೇರೇಪಿಸುತ್ತದೆ. ಅದಕ್ಕೆ ಮತ್ತೆ ಮತ್ತೆ ಓದುವುದು ಬರೆಯುವುದು ಒಳ್ಳೆಯದು ಎಂದು ತಿಳಿಸಿದರು.

ಸಾಹಿತ್ಯ ಲೋಕವನ್ನೇ ವೃತ್ತಿ ಮಾಡಿಕೊಂಡರೆ ಬದುಕು ಕಷ್ಟವಾಗುತ್ತದೆ. ಅದಕ್ಕೆ ಜೀವನಕ್ಕೊಂದು ವೃತ್ತಿ ಮಾಡಿಕೊಂಡು, ಸಾಹಿತ್ಯವನ್ನು ಪ್ರವೃತ್ತಿಯನ್ನಾಗಿ ಮಾಡಿಕೊಂಡು ಮುಂದುವರಿದರೆ ನಿಮ್ಮ ಸಾಹಿತ್ಯಕ್ಕೂ ಮತ್ತು ತಮ್ಮ ವ್ಯಕ್ತಿತ್ವಕ್ಕೂ ಬೆಲೆ ಸಿಗುತ್ತದೆ. ಸಾಹಿತ್ಯ ಬರೆಯುವುದು ಒಂದು ಸವಾಲಾದರೆ, ಬರೆದುದನ್ನು ಮುದ್ರಿಸಿ ಪ್ರಕಟಿಸುವುದು ಇನ್ನೊಂದು ಸವಾಲು. ಪ್ರಕಟಿಸಿದರೆ ಬಿಡುಗಡೆ ಮಾಡುವುದು ದೊಡ್ಡ ಸವಾಲಾಗಿದೆ. ಸಾಹಿತ್ಯಕ್ಕೆ ಮುನ್ನಡಿ, ಬೆನ್ನುಡಿ ಬರೆಸಲು ಹಿರಿಯ ಸಾಹಿತಿಗಳಿಗೆ ಕೇಳಿದರೆ, ಉದಾಸೀನದ ಮಾತು. ಒಪ್ಪಿದರೂ ಆರೇಳು ತಿಂಗಳು ಅಡ್ಡಾಡಿಸಿ ಸಮಯವಿಲ್ಲವೆಂದು ಪ್ರತಿಗಳನ್ನು ವಾಪಾಸ್ಸು ನೀಡುತ್ತಾರೆ. ಮುನ್ನುಡಿ, ಬೆನ್ನುಡಿ ನೋಡದೆ ಸಾಹಿತ್ಯ ಪುಸ್ತಕಗಳನ್ನು ನೋಡುವುದೇ ಇಲ್ಲ ನಮ್ಮ ಓದುಗ.

ಪುಸ್ತಕ ಬಿಡುಗಡೆ ಮಾಡಲು ಅತಿಥಿಗಳನ್ನು ಕೇಳಲು ಹೋದರೆ ಸ್ಥಳ ಎಲ್ಲಿ? ಅಧ್ಯಕ್ಷತೆ ಯಾರು? ಅತಿಥಿಗಳು ಯಾರು? ಯಾವ ಯಾವ ಪತ್ರಿಕೆ ಯವರು ಸುದ್ದಿ ಮಾಡಲು ಬರುತ್ತಾರೆ? ಎಂದು ಕೇಳಿ, ಕವಿ, ಲೇಖಕರ ಉತ್ಸಾಹವನ್ನು ಕಳೆದು ಬಿಡುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಯುವ ಕವಿಗೋಷ್ಠಿಯಲ್ಲಿ ಇಪ್ಪತ್ತು ಕವಿಗಳು ಕವನ ವಾಚಿಸಿದರು. ಪಂಚಾಕ್ಷರಿ ಆಶಯ ವ್ಯಕ್ತಪಡಿಸಿದರು. ಸಾಹಿತ್ಯ ಸಮ್ಮೇಳನದ ಸರ್ವ ಅಧ್ಯಕ್ಷರಾದ ಸಿ.ವಿ. ಪಾಟೀಲ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ ಉಪಸ್ಥಿತರಿದ್ದರು.

error: Content is protected !!