ಹೊನ್ನಾಳಿ ಹಿರೇಕಲ್ಮಠದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಡಿ.ಜಿ. ಶಾಂತನಗೌಡ
ಹೊನ್ನಾಳಿ, ಮಾ. 21 – ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಹಾಗೂ ಭಕ್ತರಿಗೆ ಅನ್ನ, ಅಕ್ಷರ ಹಾಗೂ ನ್ಯಾಯದಾನಗಳಂತಹ ತ್ರಿವಿಧ ದಾಸೋಹ ನೀಡುತ್ತಾ ಬಂದಿರುವ ಹಿರೇಕಲ್ಮಠದ ಲಿಂಗೈಕ ಗುರುಗಳ ಪುಣ್ಯಾರಾಧನೆ ಪ್ರಯುಕ್ತ ನಡೆಯುವ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸತಿ ಪತಿಗಳಾಗುತ್ತಿರುವವರು ನಿಜಕ್ಕೂ ಪುಣ್ಯವಂತರು ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.
ಇಲ್ಲಿನ ಹಿರೇಕಲ್ಮಠದಲ್ಲಿ ಗುರುವಾರ ಆಯೋಜಿಸಲಾಗಿದ್ದ ಲಿಂಗೈಕ್ಯ ಮತ್ಯುಂಜಯ ಶಿವಾಚಾರ್ಯ ಸ್ವಾಮೀಜಿಯವರ
54ನೇ ವಾರ್ಷಿಕ ಪುಣ್ಯಾರಾಧನೆ ಹಾಗೂ ಲಿಂಗೈಕ್ಯ
ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರ 9ನೇ ವಾರ್ಷಿಕ ಸಂಸ್ಮರಣೆ ಕಾರ್ಯಕ್ರಮ ಹಾಗೂ ಸಾಮೂಹಿಕ ವಿವಾಹ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕುಟುಂಬ ಎಂದರೆ ಕೇವಲ ಗಂಡ-ಹೆಂಡತಿ-ಮಕ್ಕಳು ಮಾತ್ರವಲ್ಲ ಬದಲಿಗೆ ಅಪ್ಪ, ಅಮ್ಮ, ಅಣ್ಣ, ತಮ್ಮ, ಅತ್ತಿಗೆ, ಮೈದುನ, ಚಿಕ್ಕಪ್ಪ, ಚಿಕ್ಕಮ್ಮ ಹೀಗೆ ಹತ್ತು ಹಲವು ಸಂಬಂಧಗಳ ವ್ಯಕ್ತಿಗಳು ಒಂದು ಸೂರಿನಡಿ ಬದುಕು ಸಾಗಿಸುವುದೇ ನಿಜವಾದ ಕುಟುಂಬ ಎನಿಸಿಕೊಳ್ಳುತ್ತದೆ. ಅದರೆ ಪ್ರಸ್ತುತ ದಿನಗಳಲ್ಲಿ ಮೈಕ್ರೋ ಕುಟುಂಬಗಳೇ ಅಂದರೆ ಕೇವಲ ಗಂಡ-ಹೆಂಡತಿ ಅವರ ಮಕ್ಕಳು ಇಷ್ಟೇ ಕುಟುಂಬ ಎನ್ನುವಂತಾಗಿದೆ ಎಂದು ಹೇಳಿದರು
ಸಂಬಂಧಗಳು ಸಂಪೂರ್ಣ ಸಂಕೀರ್ಣವಾಗುತ್ತಿದ್ದು, ವೃದ್ಧಾಶ್ರಮಗಳಲ್ಲಿ ನೋಡಿದರೆ ಇಲ್ಲಿ ಯಾವುದೇ ಒಬ್ಬ ಬಿಪಿಲ್ ಕಾರ್ಡ್ ಕುಟುಂಬದಿಂದ ಬಂದ ಹಿರಿಯರು ನೋಡ ಸಿಗುವುದಿಲ್ಲ, ಬದಲಿಗೆ ದೊಡ್ಡ ದೊಡ್ಡ ಅಧಿಕಾರಿಗಳ, ವಿದ್ಯಾಂತರ ಹಾಗೂ ಶ್ರೀಮಂತರ ಕುಟುಂಬಗಳಿಂದ ಬಂದ ಹಿರಿಯರಷ್ಠೇ ವೃದ್ಧಾಶ್ರಮಗಳಲ್ಲಿ ಕಾಣಲು ಸಿಗುತ್ತಾರೆ ಇದು ಇಂದಿನ ಸಾಮಾಜಿಕ ವ್ಯವಸ್ಥೆ ಎಂದರು.
ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಸುಮಾರು 123 ವರ್ಷಗಳ ಇತಿಹಾಸದಲ್ಲಿ ಬಾರದಂತಹ ಬರಗಾಲ ಈ ಬಾರಿ ಬಂದಿದೆ.
ಎಲ್ಲಾ ಹರ-ಗುರು-ಚರ ಮೂರ್ತಿಗಳ ಆಶೀರ್ವಾದದಿಂದ ಮುಂದಿನ ಬಾರಿ ಉತ್ತಮ ಮಳೆ-ಬೆಳೆಯಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಸಂಸದ ಜಿ.ಎಂ.ಸಿದ್ದೇಶ್ವರ ಅವರು ನೂತನ ವಧುವರರಿಗೆ ಶುಭ ಕೋರಿ, ಪುಣ್ಯ ಕ್ಷೇತ್ರದಲ್ಲಿ ಸತಿಪತಿಗಳಾಗಿದ್ದೀರಿ ಎಲ್ಲಾ ಗುರುಗಳ, ಹಿರಿಯ ಆಶೀರ್ವಾದದಿಂದ ಭವಿಷ್ಯದಲ್ಲಿ ಉತ್ತಮ ಜೀವನ ನಡೆಸಿ ಎಂದು ಹಾರೈಸಿದರು.
ಶ್ರೀಮಠದ ವಿದ್ಯಾಸಂಸ್ಥೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿರುವ ಎಚ್.ಆರ್. ಬಸವರಾಪ್ಪ ಅವರಿಗೆ ಚಂದ್ರಶೇಖರ ಶಿವಾಚಾರ್ಯ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮುಷ್ಟೂರು ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮಿಜಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮನುಷ್ಯನಲ್ಲಿ ಧಾರ್ಮಿಕ ನಂಬಿಕೆಗಳು ಕಡಿಯಾಗುತ್ತಿದ್ದು, ಇದು ಎಲ್ಲಾ ರೀತಿಯ ದುಃಖಗಳಿಗೆ ಕಾರಣವಾಗಿದೆ ಎಂದು ಹೇಳಿದರು.
ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಕಡೆನಂದಿಹಳ್ಳಿ ರೇವಣಸಿದ್ದ ಶಿವಾಚಾರ್ಯ ಸ್ವಾಮಿಜಿ, ರಾಂಪುರದ ಶಿವಕುಮಾರ ಹಾಲಸ್ವಾಮೀಜಿ, ಗೋವಿನಕೋವಿ ಮಠದ ವಿಶ್ವಾರಾಧ್ಯ ಮಹಾಲಿಂಗ ಹಾಲಸ್ವಾಮಿಜಿ ಸೇರಿದಂತೆ ಇತರರು ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮುಖಂಡರಾದ ಎಚ್.ಎ. ಉಮಾಪತಿ, ಮುಂತಾದವರು ಮಾತನಾಡಿದರು. ಎಚ್.ಎ. ಗದ್ದಿಗೇಶ್, ದೀಪುಕುಮಾರ ಸೇರಿದಂತೆ ಇತರರು ಭಾಗವಹಿಸಿದ್ದರು. ಚನ್ನಯ್ಯ ಬೆನ್ನೂರುಮಠ ಸ್ವಾಗತಿಸಿದರು. ವಿಜಯಾನಂದ ಸ್ವಾಮಿ ನಿರೂಪಿಸಿದರು.