ಎಂ. ಚಿದಾನಂದ ಕಂಚಿಕೇರಿ
ಹರಿಹರ, ಮಾ.20- ನಗರದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಕುಡಿಯುವ ನೀರಿನ ಸರಬರಾಜು ಇಲ್ಲದೇ, ಸಾರ್ವಜನಿಕರು ನೀರಿಗಾಗಿ ಪರದಾಡುವಂತಾಗಿದೆ.
ಹೊಸಭರಂಪುರ ಬಡಾವಣೆ, ತಗ್ಗಿನಕೇರಿ, ದೊಡ್ಡಿಬೀದಿ, ಕೋಟೆ ಬಡಾವಣೆ, ಹಳ್ಳದಕೇರಿ, ಕೈಲಾಸ ನಗರ, ತುಂಗಭದ್ರಾ ಬಡಾವಣೆ, ಹೈಸ್ಕೂಲ್ ಬಡಾವಣೆ, ವಿದ್ಯಾನಗರ, ಇಂದ್ರಾ ನಗರ, ಕಾಳಿದಾಸ ನಗರ, ಬೆಂಕಿ ನಗರ, ರಾಜರಾಮ್ ಕಾಲೋನಿ, ವಾಗೀಶ್ ನಗರ, ಗಾಂಧಿ ನಗರ, ಹಳೇಹರ್ಲಾಪುರ, ವಿಜಯನಗರ ಬಡಾವಣೆ, ಎ.ಕೆ. ಕಾಲೋನಿ, ಗುತ್ತೂರು ಸೇರಿದಂತೆ ಹಲವಾರು ಬಡಾವಣೆಯಲ್ಲಿ ನೀರು ಸರಬರಾಜಾಗಿಲ್ಲ.
ನಗರದ ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಸಂಪೂರ್ಣವಾಗಿ ನಿಂತಿದೆ. ಕವಲೆತ್ತು ಬಳಿ ಇರುವ ಜಾಕ್‌ವೆಲ್ ಹತ್ತಿರ ನೀರಿನ ಹರಿವಿಲ್ಲದ ಕಾರಣ, ನಗರಕ್ಕೆ ನೀರು ಪೂರೈಕೆ ನಿಲ್ಲಿಸಲಾಗಿದೆ. ಬಹುತೇಕ ಎಲ್ಲ ಬಡಾವಣೆಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ.
ಮಳೆ ಕೊರತೆಯಿಂದಾಗಿ ಅಂತರ್ಜಲ ಕಡಿಮೆಯಾಗಿದೆ. ಇದರಿಂದ ನಗರಸಭೆ ಬೋರ್‌ವೆಲ್‌ಗಳ ಮೂಲಕವೂ ನೀರು ಸರಬರಾಜು ಮಾಡುವುದು ಕಷ್ಟಕರವಾಗಿದೆ.
ಹೊಸಭರಂಪುರ ಬಡಾವಣೆ ಸೇರಿದಂತೆ ಹಲವಾರು ಬಡಾವಣೆಗಳಲ್ಲಿ ಪೈಪ್‌ಲೈನ್‌ಗಳು ಒಡೆದಿವೆ. ಇವುಗಳ ದುರಸ್ತಿ ಆಗದೇ ಮನೆಗಳಿಗೆ ನೀರು ತಲುಪುತ್ತಿಲ್ಲ. ಸಾರ್ವಜನಿಕರಿಗೆ ಕುಡಿಯುವ ನೀರಿಗೆ ಆಗುತ್ತಿರುವ ಸಮಸ್ಯೆ ಬಗೆಹರಿಸಲು ನಗರಸಭೆ ಮತ್ತು ಜಲಸಿರಿ ನೀರು ಸರಬರಾಜು ಯೋಜನೆಗಳ ಅಧಿಕಾರಿಗಳು ಎಚ್ಚರ ವಹಿಸಬೇಕಿದೆ.
ಟ್ಯಾಂಕರ್‌ಗೆ ಪ್ರಸ್ತಾವನೆ : 24×7 ನೀರು ಸರಬರಾಜು ಯೋಜನೆ ಅಧಿಕಾರಿಗಳು ನೀರು ಶೇಖರಣಾ ಘಟಕ ಸ್ಥಾಪಿಸಿ, ನಂತರ ಉಳಿದ ಕಾಮಗಾರಿ ಆರಂಭಿಸಿದ್ದರೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುತ್ತಿರಲಿಲ್ಲ.
ಕಳೆದ ನಾಲ್ಕು ದಿನಗಳಿಂದ ನಗರಸಭೆ ವತಿಯಿಂದ ಮೂರು ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಪ್ರತಿ ವಾರ್ಡ್‌ಗೆ ಒಂದರಂತೆ ಬಾಡಿಗೆ ನೀರಿನ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೆಲವು ಕಡೆಗಳಲ್ಲಿ ಪೈಪ್ ಲೈನ್ ಹಾಳಾಗಿದ್ದು, ಅವುಗಳನ್ನು ಆದಷ್ಟು ಬೇಗನೇ ದುರಸ್ತಿ ಪಡಿಸಲಾಗುವುದು ಎಂದು ಪೌರಾಯುಕ್ತ ಐಗೂರು ಬಸವರಾಜ್ ಹೇಳಿದರು.
ಶೇಖರಣಾ ಘಟಕ ಸ್ಥಾಪಿಸಿ : ನಗರದ ಪಕ್ಕದಲ್ಲೇ ತುಂಗಭದ್ರಾ ನದಿ ಹರಿದರೂ, ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾಗುತ್ತಿದೆ. ನಗರಸಭೆಯ ಎಲ್ಲಾ ಸದಸ್ಯರು, ಜಿಲ್ಲಾ ಮಂತ್ರಿಗಳು, ಸಂಸದರು, ಶಾಸಕರು ಸೇರಿದಂತೆ ಸರ್ಕಾರದ ಗಮನಕ್ಕೆ ಹಲವಾರು ಬಾರಿ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಒಂದು ಚಿಕ್ಕ ನೀರಿನ ಶೇಖರಣ ಘಟಕ ಸ್ಥಾಪಿಸಲು ಮುಂದಾಗದೇ ಇರುವುದು ದುರ್ದೈವ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಶಾಸಕ ಬಿ.ಪಿ. ಹರೀಶ್ ಸರ್ಕಾರದ ಮೇಲೆ ಒತ್ತಡ ಹಾಕಿ ನೀರಿನ ಶೇಖರಣೆ ಘಟಕ ಸ್ಥಾಪಿಸಲು ಮುಂದಾಗಬೇಕಿದೆ ಎಂದು ನಗರಸಭೆ ಸದಸ್ಯೆ ಆರ್.ಸಿ ಜಾವೇದ್ ಹೇಳಿದರು.
ನದಿಯಲ್ಲಿ ಮರಳಿನ ಚೀಲ ಹಾಕಿ ನೀರು ತಡೆಯಲು ಕ್ರಮ : ನದಿಯಲ್ಲಿ ಮರಳಿನ ಚೀಲವನ್ನು ಹಾಕಿ ನೀರು ತಡೆಯುವ ಕೆಲಸಕ್ಕೆ ಮುಂದಾಗಲಾಗಿದೆ. ಜೊತೆಗೆ ನದಿಯಲ್ಲಿ ನೀರು ಬಂದು ಜಾಕ್‌ವೆಲ್‌ಗೆ ನೀರು ಸಮರ್ಪಕವಾಗಿ ಹರಿಯುವಂತಾದರೆ ಕೂಡಲೇ ನಗರದ ಜನತೆಗೆ ನೀರು ಸರಬರಾಜು ಮಾಡಲಾಗುತ್ತದೆ ಎಂದು ಜಲಸಿರಿ ಇಲಾಖೆಯ ಅಧಿಕಾರಿ ನವೀನ್ ಕುಮಾರ್ ಹೇಳಿದರು.