ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರೈತ ಸಂಘದ ರಾಜ್ಯ ಅಧ್ಯಕ್ಷ ಹೆಚ್. ಆರ್. ಬಸವರಾಜಪ್ಪ ಅಭಿಮತ
ಹರಿಹರ, ಮಾ.20 – ರೈತ ಧರ್ಮ ಅತ್ಯಂತ ಪ್ರಾಚೀನ ಧರ್ಮವಾಗಿದ್ದು, ರೈತ ಸಂಸ್ಕೃತಿ ಅತ್ಯಂತ ದೊಡ್ಡದು ಎಂದು ರೈತ ಸಂಘದ ರಾಜ್ಯ ಅಧ್ಯಕ್ಷ ಹೆಚ್. ಆರ್. ಬಸವರಾಜಪ್ಪ ತಿಳಿಸಿದರು.
13ನೇ ಜಿಲ್ಲಾ ಸಮ್ಮೇಳನದ ಅಂಗವಾಗಿ ನಗರದ ಸಿದ್ದೇಶ್ವರ್ ಪ್ಯಾಲೇಸ್ ಸಭಾಂಗಣದ ಮಿಠಾಯಿ ಡಿ. ಉಜ್ಜೇಶ್ ಸಭಾಂಗಣದಲ್ಲಿ ನಡೆದ ಇತಿಹಾಸ ಮತ್ತು ಕೃಷಿ, ದಲಿತ, ಚಳವಳಿ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕಷ್ಟ ಎಂದು ಬಂದವರಿಗೆ ನೆರವಾಗುವುದು ಕೃಷಿ ಸಂಸ್ಕೃತಿ. ಯೋಧ ಹಾಗೂ ರೈತರಿಗೆ ಗೌರವಿಸುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು. ರೈತರು ತಮ್ಮ ಕಾಯಕದಿಂದ ಜನತೆಗೆ ಆಹಾರ ನೀಡುತ್ತಿದ್ದಾರೆ ಎಂದರು.
ಡಾ. ಎ.ಬಿ. ರಾಮಚಂದ್ರಪ್ಪ ಮಾತನಾಡಿ, ದಲಿತ ಚಳುವಳಿಗಳು ಇತರೆ ಚಳುವಳಿಗಿಂತ ಭಿನ್ನವಾಗಿವೆ. ಸ್ಥಾಪಿತ ವ್ಯವಸ್ಥೆ ಹೋಗಲಾಡಿಸಿ, ಸಂವಿಧಾನ ಬದ್ಧ ವ್ಯವಸ್ಥೆ ತರಲು ದಲಿತ ಚಳುವಳಿ ಗಳು ನಡೆದಿವೆ. ರಾಜಕೀಯ ಉದ್ದೇಶದಿಂದ ದಲಿತ ಚಳುವಳಿಗಳು ನಡೆದಿಲ್ಲ ಎಂದರು.
ದಲಿತ ನಾಯಕ ಪ್ರೊ. ಕೃಷ್ಣಪ್ಪ ಅವರು ಮದ್ಯ ನಿಷೇಧ, ಹೋಬಳಿಗೊಂದು ಶಾಲೆ ಹಾಗೂ ಹಾಸ್ಟೆಲ್‌ಗಳಿಗಾಗಿ ಹೋರಾಟ ನಡೆಸಿದರು. ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಸರ್ಕಾರ ಹಾಸ್ಟೆಲ್‌ಗಳನ್ನು ತೆರೆದಿದ್ದರಿಂದ ಅಕ್ಷರಸ್ಥರ ಸಂಖ್ಯೆ ಹೆಚ್ಚಾಯಿತು ಎಂದರು.
ಪ್ರೊ. ಕೃಷ್ಣಪ್ಪ ಅವರು ಭೂ ರಹಿತರಿಗೆ ಭೂಮಿ ಒದಗಿಸಲು ಹೋರಾಟ ನಡೆಸಿದರು. ಸಮಾಜದಲ್ಲಿನ ತಾರಮ್ಯ ನಿವಾರಣೆಗೆ ಶ್ರಮಿಸಿ, ಗ್ರಾಮೀಣ ಜನರಿಗೆ ನ್ಯಾಯ ಒದಗಿಸುವ ಕೆಲಸ ಮಾಡಿದರು. ಮೂಢನಂಬಿಕೆಗಳ ವಿರುದ್ಧ ಜಾಗೃತಿ ಮೂಡಿಸಿದರು ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ದಲಿತ ಸಂಘಟನೆಗಳು ಹಲವಾರು ಕಾರಣಗಳಿಂದ ಒಡೆದಿವೆ. ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸುವ ಸಲುವಾಗಿ ಮತ್ತೆ ಕೃಷ್ಣಪ್ಪ ಅವರ ಹೋರಾಟದ ಹಾದಿಯಲ್ಲಿ ಸಾಗಬೇಕಿದೆ ಎಂದರು.
ಹಿರಿಯ ವಿದ್ವಾಂಸ ಹೆಚ್.ಎಸ್. ಹರಿಶಂಕರ್ ಮಾತನಾಡಿ, ಹರಿಹರ ಕ್ಷೇತ್ರಕ್ಕೆ ಅನೇಕ ರಾಜರುಗಳ ಕೊಡುಗೆ ಅಪಾರವಾಗಿದೆ. ಹರಿಹರ ನಗರದ ಬಗ್ಗೆ ಅನೇಕ ಶಾಸನಗಳಲ್ಲಿ ಬರೆದಿದ್ದಾರೆ. ಹರಿಹರ ಸಮನ್ವಯದ ಸಂಕೇತವಾಗಿದೆ. ಎಂದು ಹೇಳಿದರು
ಈ ಸಂದರ್ಭದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಬಿ. ವಾಮದೇವಪ್ಪ, ಸಮ್ಮೇಳನಾಧ್ಯಕ್ಷ ಪ್ರೊ ಸಿ.ವಿ. ಪಾಟೀಲ್, ಎ.ಬಿ. ರಾಮಚಂದ್ರಪ್ಪ, ಅಮರಾವತಿ ಮಹಾದೇವಪ್ಪ ಗೌಡ್ರು, ಜಿಗಳಿ ಆನಂದಪ್ಪ, ಮಂಜುನಾಥ್ ಪಾಟೀಲ್, ಹೆಚ್.ಎಸ್. ಮುರಗೇಂದ್ರಪ್ಪ, ಜಿ. ಎಂ. ಭೈರವೇಶ್ವರ, ದಂಡಿ ತಿಪ್ಪೇಸ್ವಾಮಿ, ಜ್ಯೋತಿ ಉಪಾಧ್ಯಾಯ, ಪಂಕಜಾಕ್ಷಿ ಇತರರು ಉಪಸ್ಥಿತರಿದ್ದರು.