ದಾವಣಗೆರೆ,ಮಾ.20- ನಗರದಲ್ಲಿ ಸುಮಾರು 30 ಸಾವಿರ ಕುಟುಂಬಗಳಿಗೆ ವಾಸಿಸಲು ಸ್ವಂತ ವಸತಿ ಅಥವಾ ನಿವೇಶನಗಳಾಗಲೀ ಇರುವುದಿಲ್ಲ. ಹಲ ವಾರು ವರ್ಷಗಳಿಂದ ಈ ಬೇಡಿಕೆ ಇಟ್ಟಿದ್ದರೂ ಇದು ವರೆಗೆ ಮಂಜೂರು ಮಾಡಿರುವುದಿಲ್ಲ. ದೇಶದಲ್ಲಿ ಮನೆ ಇಲ್ಲದವರಿಗೆ 2022ರ ಒಳಗಾಗಿ ವಸತಿ ಕಲ್ಪಿಸುವುದಾಗಿ ಪ್ರಧಾನಿ ಮೋದಿ ಸಹ ಹೇಳಿದ್ದರು. ಆದರೆ ಇದುವರೆಗೂ ಆ ಕೆಲಸವಾಗಿಲ್ಲ. ಎಂದು ಸಿಪಿಐ (ಎಂ)ಪಕ್ಷದ ನೇತೃತ್ವದ ಜಿಲ್ಲಾ ನಿವೇಶನ ಮತ್ತು ವಸತಿ ರಹಿತರ ಹೋರಾಟ ಸಮಿತಿ ದೂರಿದೆ.
ಈ ಸಂಬಂಧ ಸಂಸದರಿಗೆ ಮನವಿ ಸಲ್ಲಿಸಿರುವ ಸಂಘವು ಅನೇಕ ಮೂಲಭೂತ ಸಮಸ್ಯೆಗಳ ಬಗ್ಗೆ ಗಮನಸೆಳೆದಿದೆ. ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿ ಕಾರ್ಮಿಕರಿದ್ದು ಅವರ ಚಿಕಿತ್ಸೆಗೆಂದೇ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇದ್ದಂತಹ ಸಂಜೆ ಕ್ಲಿನಿಕ್ಗಳನ್ನು ಮುಚ್ಚಲಾಗಿದೆ. ಅವನ್ನು ತಕ್ಷಣ ಪ್ರಾರಂಭಿಸಬೇಕು ಹಾಗೂ ನಗರ ಪ್ರಾಥಮಿಕ ಕೇಂದ್ರಗಳಲ್ಲಿ ಸೌಲಭ್ಯಗಳನ್ನು ಹೆಚ್ಚಿಸಬೇಕು.
ನೀರಿನ ಕಂದಾಯವನ್ನು ಕಡಿಮೆ ಮಾಡಬೇಕು. ನೀರಿನ ಶುದ್ಧಿಕರಣ ಘಟಕಗಳನ್ನು ಪಾಲಿಕೆಯೇ ನಿರ್ವಹಣೆ ಮಾಡಬೇಕು. ಸರ್ಕಾರಿ ಶಾಲೆಗಳನ್ನು ಉನ್ನತೀಕರಿಸುವ ಯೋಜನೆಗಳನ್ನು ರೂಪಿಸಿ ಸಂಪೂರ್ಣ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾ ರಾಗಲು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸುಸಜ್ಜಿತವಾದ ಗ್ರಂಥಾಲಯ ಗಳನ್ನು ಪ್ರತಿ ವಾರ್ಡ್ಗಳಲ್ಲಿ ಸ್ಥಾಪಿಸಬೇಕು.
ನಗರದಲ್ಲಿ ಉದ್ಯಾನವನಕ್ಕೆ ಮೀಸಲಿದ್ದ ಜಾಗವನ್ನು ಒತ್ತುವರಿ ಮಾಡಲಾಗಿದ್ದು, ಅಂತಹ ಜಾಗಗಳನ್ನು ತೆರವುಗೊಳಿಸಿ ಸಂಪೂರ್ಣವಾಗಿ ಉದ್ಯಾನವನಗಳನ್ನು ಅಭಿವೃದ್ಧಿ ಮಾಡಬೇಕು. ಪ್ರತೀ ವಾರ್ಡ್ಗಳಲ್ಲಿ ವ್ಯಾಯಾಮ ಶಾಲೆಗಳನ್ನು ಸ್ಥಾಪಿಸ ಬೇಕು. ಪ್ರತಿಯೊಬ್ಬ ಬೀದಿಬದಿ ವ್ಯಾಪಾರಿಗಳನ್ನು ಗುರುತಿಸಿ ಅವರಿಗೆ ಗುರುತಿನ ಚೀಟಿ ನೀಡಬೇಕು.
ಅಂಗನವಾಡಿಗಳ ಕೊರತೆಯಿದ್ದು, ಅಪೌಷ್ಟಿಕ ತೆಯಿಂದ ಬಳಲುತ್ತಿರುವ ಮಕ್ಕಳ ಮತ್ತು ಮಹಿಳೆ ಯರ ಹಿತದೃಷ್ಠಿಯಿಂದ ಅಂಗನವಾಡಿ ಸಂಖ್ಯೆಗಳನ್ನು, ಜನಸಂಖ್ಯಾ ಆಧಾರದಲ್ಲಿ ಹೆಚ್ಚಿಸಬೇಕು.
ಕೆಲವು ಬಡಾವಣೆಗಳಿಗೆ ಸರ್ಕಾರಿ ನಗರ ಸಾರಿಗೆ ವ್ಯವಸ್ಥೆ ಇರುವುದಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳಿಗೆ, ಹಿರಿಯ ನಾಗರಿಕರಿಗೆ ಮತ್ತು ಅಂಗವಿಕಲರಿಗೆ ತೊಂದರೆಯಾಗಿದ್ದು ಅಂತಹ ಭಾಗಗಳಿಗೆ ಸಾರಿಗೆ ವ್ಯವಸ್ಥೆ ಮಾಡಬೇಕು ಎಂದು ಹೋರಾಟ ಸಮಿತಿ ಕಾರ್ಯದರ್ಶಿ ಕೆ.ಹೆಚ್.ಆನಂದರಾಜು ಒತ್ತಾಯಿಸಿದ್ದಾರೆ.