ಮಲೇಬೆನ್ನೂರಿನಲ್ಲಿ ವಿಜೃಂಭಣೆಯ ಗ್ರಾಮದೇವತೆ ಮೆರವಣಿಗೆ

ಮಲೇಬೆನ್ನೂರಿನಲ್ಲಿ ವಿಜೃಂಭಣೆಯ ಗ್ರಾಮದೇವತೆ ಮೆರವಣಿಗೆ

ಮಲೇಬೆನ್ನೂರು, ಮಾ.19-ಪಟ್ಟಣದ ಗ್ರಾಮ ದೇವತೆ ಹಬ್ಬದ ಅಂಗವಾಗಿ ಶ್ರೀ ಏಕನಾಥೇಶ್ವರಿ ದೇವಿಯ ರಥವು ಶ್ರೀ ಕೋಡಿ ಮಾರೇಶ್ವರಿ ದೇವಿ ಜೊತೆಗೂಡಿ ಮಂಗಳವಾರ ರಾತ್ರಿ ಪಟ್ಟಣದ ರಾಜಬೀದಿಗಳಲ್ಲಿ ವಿಜೃಂಭಣೆಯಿಂದ ಜರುಗಿತು.

ರಾತ್ರಿ 11.40ಕ್ಕೆ ಊರ ಒಳಗಿರುವ ದೇವಸ್ಥಾನದಿಂದ ಆರಂಭವಾದ ಮೆರವಣಿಗೆಯು ರಾಜ ಬೀದಿಗಳಲ್ಲಿ ಭರ್ಜರಿಯಾಗಿ ನಡೆಯಿತು.

ಹೂವುಗಳಿಂದ ಅಲಂಕಾರ ಮಾಡಿದ ಟ್ರ್ಯಾಕ್ಟರ್‌ನಲ್ಲಿ ಅಮ್ಮನವರ ಉತ್ಸವಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸಾವಿರಾರು ಜನ ಡಿಜೆ ಸಂಗೀತಕ್ಕೆ ಕುಣಿದು ಸಂಭ್ರಮಿಸಿದರು.

ಮೆರವಣಿಗೆ ನೋಡಲು ಮಹಿಳೆಯರು – ಮಕ್ಕಳು ರಸ್ತೆ ಅಕ್ಕ-ಪಕ್ಕದಲ್ಲಿ ಕಾದು ನಿಂತಿದ್ದರು.

ಡೊಳ್ಳು, ಹಲಗೆ, ವಾದ್ಯ, ಬಾಜಾ-ಭಜಂತ್ರಿ ಹಾಗೂ ಜಾಂಜ್ ಮೇಳಗಳ ಜೊತೆಗೆ ಪಟಾಕಿ ಸಿಡಿತ ಮೆರವಣಿಗೆಗೆ ಮೆರಗು ತಂದವು. ಜಯಘೋಷಗಳು ಮುಗಿಲು ಮುಟ್ಟಿದ್ದವು. ವಿದ್ಯುತ್ ದೀಪಾಲಂಕಾರವೂ ಗಮನ ಸೆಳೆಯಿತು. ಮೆರವಣಿಗೆಯು ಬುಧವಾರ ಬೆಳಗಿನ ಜಾವ ಊರ ಹೊರಗಿನ ದೇವಸ್ಥಾನಕ್ಕೆ ಹೋಗಿ ನೆಲೆಗೊಳ್ಳುವುದು.

ಹಟ್ಟಿ ದುರ್ಗಾಂಬಿಕೆ ದೇವಸ್ಥಾನದಿಂದ ಘಟೆ ಬಂದ ನಂತರ ಹಿಟ್ಟಿನ ಕೋಣನ ಬಲಿ ನೀಡಿ, ದೇವತೆಗೆ ಪೂಜೆ, ಮಹಾಮಂಗಳಾರತಿ ಮಾಡಲಾಗುವುದು. ಇತ್ಯಾದಿ ಹರಕೆ ಸೇವೆಗಳು ಮತ್ತು ದೇವಿಗೆ ಉಡಿ ತುಂಬುವ ಕಾರ್ಯಕ್ರಮಗಳು ಬುಧವಾರ ಸಂಜೆವರೆಗೂ ನಡೆಯಲಿವೆ.

ಚಿನ್ನದ ಕಿರೀಟಧಾರಣೆ : ಶ್ರೀ ಏಕನಾಥೇಶ್ವರಿ ಅಮ್ಮನವರಿಗೆ ವರ್ತಕ ಹಾಗೂ ಚಿಟ್ಟಕ್ಕಿ ಸ್ಕೂಲ್ ಅಧ್ಯಕ್ಷ ಚಿಟ್ಟಕ್ಕಿ ರಮೇಶ್ ಅವರು ಮಂಗಳವಾರ ಸಂಜೆ ಚಿನ್ನದ ಕಿರೀಟಧಾರಣೆ ಮಾಡಿ ಭಕ್ತಿ ಸಮರ್ಪಿಸಿದರು.

error: Content is protected !!