ಹೊನ್ನಾಳಿ : ಲೋಕಸಭಾ ಚುನಾವಣೆ ; ಕಡ್ಡಾಯ ಮತದಾನ ಮಾಡಲು ಕರೆ

ಹೊನ್ನಾಳಿ : ಲೋಕಸಭಾ ಚುನಾವಣೆ ; ಕಡ್ಡಾಯ ಮತದಾನ ಮಾಡಲು ಕರೆ

ಹೊನ್ನಾಳಿ, ಮಾ.19- ಒಂದೊಂದು ಮತವೂ ಕೂಡ ಅಮೂಲ್ಯವಾಗಿದ್ದು, ಎಲ್ಲರೂ ತಪ್ಪದೇ ಕಡ್ಡಾಯವಾಗಿ ಮತದಾನ ಪ್ರಕ್ರಿಯೆ ಯಲ್ಲಿ ಪಾಲ್ಗೊಳ್ಳಬೇಕೆಂದು ಸಹಾಯಕ ಚುನಾವಣಾಧಿಕಾರಿ, ಉಪವಿಭಾಗಾಧಿಕಾರಿ ಅಭಿಷೇಕ್  ಕರೆ ನೀಡಿದರು.

ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಅವಳಿ ತಾಲ್ಲೂಕುಗಳ 6 ಕಡೆಗಳಲ್ಲಿ ಚೆಕ್ ಪೋಸ್ಟ್‍ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಮತದಾರರು; 99237 ಪುರುಷ ಮತದಾರರು, 99128 ಮಹಿಳಾ ಮತದಾರರು, ಇತರೆ 5, 85 ವರ್ಷ ದಾಟಿದವರು 1595, ದೈಹಿಕ ಅಂಗವಿಕಲರು 4033 ಮತದಾರರು, ಸೇವೆಯಲ್ಲಿರುವ ಮತದಾರರು 63 ಸೇರಿದಂತೆ ಒಟ್ಟು 198370 ಮತದಾರರಿದ್ದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ 80 ವರ್ಷದವರಿಗೆ ಮನೆಯಲ್ಲಿಯೇ ಮತದಾನ ಮಾಡುವ ವ್ಯವಸ್ಥೆಯಿದ್ದು, ಲೋಕಸಭಾ ಚುನಾವಣೆಯಲ್ಲಿ 85 ವರ್ಷ ದಾಟಿದವರಿಗೆ ಮತ್ತು ದೈಹಿಕ ಅಂಗವಿಕಲರಿಗೆ ಮನೆಯಲ್ಲಿಯೇ ಮತದಾನ ಮಾಡುವ ವ್ಯವಸ್ಥೆ ಮಾಡಲಾಗುವುದು. ಚುನಾವಣಾ ಅಕ್ರಮ ತಡೆಗೆ ಮತ್ತು ಚುನಾವಣಾ ನಿಯಮಗಳನ್ನು ಪಕ್ಷದ ಅಭ್ಯರ್ಥಿಗಳು ಮತ್ತು ಅವರ ಕಡೆಯವರು ಪಾಲಿಸುತ್ತಾರೋ ಇಲ್ಲವೋ ಎಂಬ ಬಗ್ಗೆ  ಫ್ಲೈಯಿಂಗ್ ಮತ್ತು ವಿ.ಎಸ್.ಟಿ. ಯ 6 ತಂಡಗಳು ಕಾರ್ಯ ನಿರ್ವಹಿಸಲಿವೆ ಎಂದು ತಿಳಿಸಿದರು.

ಖರ್ಚು ವೆಚ್ಚ: ಅಭ್ಯರ್ಥಿಗಳಿಗೆ ಚುನಾವಣಾ ಆಯೋಗವು 95 ಲಕ್ಷ ಹಣವನ್ನು ಮಾತ್ರವೇ ಖರ್ಚು ಮಾಡಲು ಅವಕಾಶ ನೀಡಿದ್ದು, ಇದರ ಬಗ್ಗೆ ಜಿಲ್ಲಾಧಿಕಾರಿ  ದರ ಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಿದ್ದು, ಒಂದು ವೇಳೆ ಅಭ್ಯರ್ಥಿ ಗೆದ್ದರೂ ಕೂಡ ಚುನಾವಣಾ ಖರ್ಚು-ವೆಚ್ಚ 95 ಲಕ್ಷ ದಾಟಿದರೆ ಗೆದ್ದ ಅಭ್ಯರ್ಥಿ ಅನರ್ಹನಾಗುತ್ತಾನೆ.

ಅಭ್ಯರ್ಥಿಗಳಿಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲೇ ನಾಮಪತ್ರವನ್ನು ಸಲ್ಲಿಸಲು ಅವಕಾಶ ನೀಡಲಾಗಿದ್ದು, ಅಭ್ಯರ್ಥಿಗಳು ತಮ್ಮ ಪ್ರಚಾರಕ್ಕಾಗಿ ಅನುಮತಿ ಪಡೆಯಲು ಸುವಿಧಾ ಆಪ್‍ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ದೂರು; ಸಿ-ವಿಜಿಲ್ ಆಪ್ ಮುಖಾಂತರ ಸಾರ್ವಜನಿಕರೂ ಸಹ ತಾವು ಇರುವ ಸ್ಥಳಗಳಲ್ಲಿ ರಾಜಕೀಯ ಪಕ್ಷದ ಮುಖಂಡರುಗಳು ಅಕ್ರಮವಾಗಿ ಹಣ, ಸೀರೆ, ಮದ್ಯ ಹಾಗೂ ಇತರೆ ಆಮಿಷಗಳನ್ನು ಒಡ್ಡುತ್ತಿದ್ದರೆ ಶೀಘ್ರವೇ ನೀವಿರುವ ಸ್ಥಳದಿಂದಲೇ  ದೂರು ಸಲ್ಲಿಸಬಹುದು ಎಂದು ತಿಳಿಸಿದರು.

ಮತಗಟ್ಟೆಗಳು; ಅವಳಿ ತಾಲ್ಲೂಕಿನಲ್ಲಿ 245 ಮತಗಟ್ಟೆಗಳಿದ್ದು ಅವುಗಳಲ್ಲಿ 55 ಸೂಕ್ಷ್ಮ ಮತಗಟ್ಟೆಗಳಿವೆ.  ತಾಲ್ಲೂಕಿನ ಮತಗಟ್ಟೆಗಳಲ್ಲಿ ಸಖಿ ಮತಗಟ್ಟೆ ಹಾಗೂ ವಿಕಲಚೇತನ ಮತಗಟ್ಟೆಗಳನ್ನು ಗುರುತಿಸಿವೆ ಅಲ್ಲಿನ ಮತಗಟ್ಟೆಗಳಿಗೆ ವಿಶೇಷ ಅಲಂಕಾರ ಮಾಡಲಾಗುವುದು ಎಂದು ವಿವರಿಸಿದರು.

ಇಒ ಎಚ್.ವಿ. ರಾಘವೇಂದ್ರ ಮಾತನಾಡಿ, ಕಳೆದ ಲೋಕಸಭಾ ಚುನಾವಣೆಯಲ್ಲಿ 76% ಮತದಾನವಾಗಿದ್ದು, ಅತೀ ಕಡಿಮೆ ಮತದಾನವಾಗಿದ್ದ 10 ಬೂತ್‍ಗಳಲ್ಲಿ  ಈ ಬಾರಿ ಜಾಸ್ತಿ ಮತದಾನವಾಗುವ ನಿಟ್ಟಿನಲ್ಲಿ ಮತದಾನ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.

ಇಒ ಎಚ್.ವಿ. ರಾಘವೇಂದ್ರ, ಇಒ ಸುಮಾ, ಶಿರಸ್ತೇದಾರ್ ರಫೀಕ್, ಗ್ರಾಮ ಆಡಳಿತಾಧಿಕಾರಿ ಅಶೋಕ್ ನಾಯ್ಕ್, ಎಫ್.ಡಿ.ಎ. ರವಿ, ಎಸ್.ಡಿ.ಎ.ರುದ್ರೇಶ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!