ಹೊನ್ನಾಳಿ ಕಾರ್ಯಕ್ರಮದಲ್ಲಿ ಶಾಸಕ ಡಿ.ಜಿ. ಶಾಂತನಗೌಡ
ಹೊನ್ನಾಳಿ, ಮಾ.18- ಪಡಿತರ ವಿತರಕರಿಗೆ ನಮ್ಮ ಸರ್ಕಾರ ಕಮೀಷನ್ ಹಣ ಹೆಚ್ಚು ಮಾಡಿದ್ದು, ಬೇಡಿಕೆಗಳನ್ನು ಆದ್ಯತೆ ಮೇರೆಗೆ ಈಡೇರಿಸುವುದಾಗಿ ಶಾಸಕ ಡಿ.ಜಿ.ಶಾಂತನಗೌಡ ಭರವಸೆ ನೀಡಿದರು.
ಪಟ್ಟಣದ ಮೋಹನ್ ಎನ್ಕ್ಲೇವ್ ಹೋಟೆಲ್ನಲ್ಲಿ ಹೊನ್ನಾಳಿ-ನ್ಯಾಮತಿ ತಾಲ್ಲೂಕುಗಳ ಸರ್ಕಾರಿ ಪಡಿತರ ವಿತರಕರ ಸಂಘದ ವತಿಯಿಂದ ಇಂದು ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂ ದಾದ ಅನ್ನಭಾಗ್ಯ ಯೋಜನೆಗೆ ಅಕ್ಕಿ ಕೇಳಿದರೆ ನಮ್ಮ ಬಳಿ ಅಕ್ಕಿ ಇಲ್ಲವೆಂದು ಹೇಳಿದ್ದ ಕೇಂದ್ರ ಸರ್ಕಾರ, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರ ಪಡೆಯುವ ದುರಾಲೋಚನೆಯಿಂದ ನಾವು ಕೆ.ಜಿ.ಅಕ್ಕಿಗೆ 34 ರೂ. ಕೊಡುತ್ತೇವೆಂದರೂ. ಅಕ್ಕಿ ಇಲ್ಲವೆಂದಿದ್ದವರು ಇದೀಗ 29 ರೂ.ಗೆ `ಭಾರತ್ ರೈಸ್’ ಎಂಬ ಹೆಸರಿನಲ್ಲಿ ಅಕ್ಕಿ ಕೊಡುವ ಮೂಲಕ ಚುನಾವಣಾ ಗಿಮಿಕ್ ಮಾಡುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು. ರಾಜ್ಯ ಸರ್ಕಾರಕ್ಕೆ ಅಕ್ಕಿ ಕೊಡದೇ ಉಕ್ರೇನ್ ದೇಶಕ್ಕೆ 18 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಕಳುಹಿಸಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಗಳನ್ನು ಅನುಷ್ಠಾನ ಮಾಡಿದ ಏಕೈಕ ಸರ್ಕಾರ ನಮ್ಮದು ಎಂದು ಹೇಳಲು ಹೆಮ್ಮೆಯಾಗುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು.
ನಮ್ಮ ಸರ್ಕಾರ ಆಹಾರ ನಿಗಮದ ಹಣ ಬಾಕಿ ಇಟ್ಟುಕೊಳ್ಳದೇ ತಿಂಗಳೊಳಗೆ ಹಣ ಜಮಾ ಮಾಡಿ ಆಹಾರದ ಸಮಸ್ಯೆಯುಂಟಾಗದಂತೆ ನೋಡಿಕೊಂಡಿದೆ ಎಂದು ಮಾಹಿತಿ ನೀಡಿದರು.
ಹೊನ್ನಾಳಿ ತಾಲ್ಲೂಕಿನ 66 ಮತ್ತು ನ್ಯಾಮತಿ ತಾಲ್ಲೂಕಿನ 36 ಒಟ್ಟು 102 ಸೊಸೈಟಿಗಳಲ್ಲಿ ಯಾವುದೇ ದೂರಿಲ್ಲದೇ ಸಮರ್ಪಕ ಪಡಿತರ ವಿತರಣೆಯಾಗುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಂದಾಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 14 ನೌಕರರು ಇತರೆ ಜಿಲ್ಲೆಗಳಲ್ಲಿ ನಿಯೋಜನೆ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದು, ಕಂದಾಯ ಸಚಿವ ಕೃಷ್ಣ ಭೈರೇಗೌಡರಿಗೆ ಈ ಬಗ್ಗೆ ಮನವಿ ಸಲ್ಲಿಸಲಾಗಿದೆ. ಅವರೆಲ್ಲರೂ ಮಾತೃ ಇಲಾಖೆಗೆ ಮರಳುತ್ತಾರೆ. ನಂತರ ಇಲಾಖೆಯ ಕೆಲಸಗಳು ಶೀಘ್ರವೇ ನಡೆಯುತ್ತವೆ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ನ್ಯಾಯಬೆಲೆ ಅಂಗಡಿಯ ಅಧ್ಯಕ್ಷ ಅರಬಗಟ್ಟೆ ಮಂಜಪ್ಪ, ನ್ಯಾಮತಿ ತಾಲ್ಲೂಕು ಅಧ್ಯಕ್ಷ ಕೆಂಚಿಕೊಪ್ಪ ಕುಬೇರಪ್ಪ, ಆಹಾರ ನಿರೀಕ್ಷಕ ನಾಗರಾಜ್, ನ್ಯಾಯ ಬೆಲೆ ಅಂಗಡಿಗಳ ಶಶಿಧರ್, ಚೇತನ್, ತುಗ್ಗಲಹಳ್ಳಿ ಬಸವರಾಜಪ್ಪ, ಧರ್ಮಪ್ಪ, ಪುಟ್ಟಪ್ಪ, ಬೆನಕನಹಳ್ಳಿ ಜಯಾನಾಯ್ಕ್, ಶಶಿಧರ್ ಮತ್ತಿತರರು ಉಪಸ್ಥಿತರಿದ್ದರು.