ದಾವಣಗೆರೆ, ಮಾ.19- ಪ್ರಸಕ್ತ ಬರಗಾಲದಲ್ಲಿ ರೈತರು ನೀರನ್ನು ಜಾಗ್ರತೆಯಿಂದ ಬಳಸಬೇಕೆಂದು ತೋಟಗಾರಿಕೆ ಉಪನಿರ್ದೇಶಕ ರಾಘವೇಂದ್ರ ಪ್ರಸಾದ್ ಸಲಹೆ ನೀಡಿದರು.
ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ಐಸಿಎಆರ್-ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲ ಬ್ಯೂರೋ ಇವರ ಸಂಯುಕ್ತಾಶ್ರ ಯದಲ್ಲಿ ಪ.ಪಂಗಡ ಉಪಯೋಜನೆಯಡಿ ನಡೆದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ದಿನಗಳಲ್ಲಿ ತೋಟಗಾರಿಕೆ ಬೆಳೆಯಲ್ಲಿ ಕಡ್ಡಾಯವಾಗಿ ಹನಿ ನೀರಾವರಿ ಪದ್ಧತಿ ಅನುಸರಿಸುವುದು ಅನಿವಾರ್ಯ ಮತ್ತು ರೈತರು ಹೊದಿಕೆ ಬೆಳೆಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕೆಂದು ತಿಳಿಸಿದರು.
ಪ್ರಾಸ್ತಾವಿಕ ಮಾತನಾಡಿದ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಎಂ.ಜಿ. ಬಸವನಗೌಡ, ಕೃಷಿ ಮತ್ತು ತೋಟಗಾರಿಕೆ ಬೆಳೆಗೆ ಬಳಸಬಹುದಾದ ಬೆವೇರಿಯಾ, ಐಸೀರಿಯಾ, ಮೆಟರೈಜಿಯಂ ಮತ್ತು ಬ್ಯಾಸಿಲಲ್ ಸೂಕ್ಷ್ಮ ಜೀವಿಗಳನ್ನು ರೈತರಿಗೆ ಪರಿಚಯಿಸುವ ಜತೆಗೆ ಸುಸ್ತಿರ ಸಾವಯವ ಕೃಷಿಯಲ್ಲಿ ಇವುಗಳ ಬಳಕೆ ಅನಿವಾರ್ಯ ಎಂದು ತಿಳಿಸಿದರು.
ಡಾ.ಟಿ.ಎನ್. ದೇವರಾಜ್ ಮಾತನಾಡಿ, ತಂತ್ರಜ್ಞಾನಗಳಾದ ಭೀಮಾ ಸೂಪರ್ ತಳಿ, ತೊಗರಿ ಕುಡಿ ಚಿವುಟುವ ಯಂತ್ರ, ಜೈವಿಕ ಪರಿಕರಗಳ ವಿತರಣೆ, ಸುರಕ್ಷಿತ ಬೀಜ ಸಂರಕ್ಷಣೆಯಂತಹ ಯೋಜನೆಗಳನ್ನು ಪ.ಪಂಗಡದ ರೈತರಿಗೆ ಕಲ್ಪಿಸಿದ್ದು, ಇದರ ಸದುಪಯೋಗ ಪಡೆಯಬೇಕೆಂದು ಕರೆ ನೀಡಿದರು.
ಕೇಂದ್ರದ ವಿಜ್ಞಾನಿಗಳಾದ ಡಾ. ಟಿ.ಜಿ. ಅವಿನಾಶ್, ಎಚ್.ಎಂ. ಸಣ್ಣಗೌಡ್ರ ಇವರು ವಿವಿಧ ತೋಟಗಾರಿಕೆ ಹಾಗೂ ನೂತನ ತಂತ್ರಜ್ಞಾನಗಳ ಬಗ್ಗೆ ಉಪನ್ಯಾಸ ನೀಡಿದರು.
ರೈತರಾದ ಕೃಷ್ಣಮೂರ್ತಿ, ವಸಂತಕುಮಾರ್, ಮುದ್ದಣ್ಣ, ಶರಣಪ್ಪ ಇತರರಿದ್ದರು.