ಶ್ರೀ ರಾಘವೇಂದ್ರ ಸಪ್ತಾಹ ಮಹೋತ್ಸವದ 4ನೇ ದಿನದ ಸಮಾರಂಭದಲ್ಲಿ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರು
ದಾವಣಗೆರೆ, ಮಾ. 15 – ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಿ ಶತಮಾನಗಳ ಕನಸು ನನಸಾಗಿದೆ. ಇನ್ನು ಮುಂದೆ ನಮ್ಮೆಲ್ಲರ ಹೃದಯದಲ್ಲಿ ರಾಮೋತ್ಸವ ನಡೆಯಬೇಕು ಎಂದು ಉಡುಪಿ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರು ಹೇಳಿದರು.
ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಗುರುವಾರ, ಶ್ರೀ ರಾಘವೇಂದ್ರ ಸಪ್ತಾಹ ಮಹೋತ್ಸವದ 4ನೇ ದಿನದ ಸಮಾರಂಭದಲ್ಲಿ ಅನುಗ್ರಹ ಸಂದೇಶ ನೀಡಿದರು.
ಮಂದಿರ ನಿರ್ಮಾಣವಾಗಿದ್ದು ನಮಗೆಲ್ಲ ಸಂತೋಷ ನೀಡಿದೆ. ಹಬ್ಬದ ರೀತಿಯಲ್ಲಿ ಆಚರಿಸಿದ್ದೇವೆ. ಆದರೆ ಇದು ಒಂದು ದಿನಕ್ಕೆ ಸೀಮಿತವಾಗಬಾರದು, ನಮ್ಮ ಊರು, ಮನೆಗಳಲ್ಲಿ ನಿತ್ಯವೂ ರಾಮನ ಉತ್ಸವ ಆಚರಿಸಬೇಕು ಎಂದು ತಿಳಿಸಿದರು.
`ಯೋಧ್ಯಾ’ ಎಂದರೆ ಯುದ್ಧ, ಸುಲಭವಾಗಿ ಆಕ್ರಮಣಕ್ಕೆ ಒಳಗಾಗುವುದು ಎಂದರ್ಥ. ನಮ್ಮ ಊರು, ಮನೆ `ಅಯೋಧ್ಯೆ’ ಆಗಬೇಕು. ಅದಕ್ಕಾಗಿ ರಾಮೋತ್ಸವ ಆಚರಿಸಬೇಕು. ರಾಮನಿದ್ದಾಗ ರಾಮ ರಾಜ್ಯವಾಗುತ್ತದೆ. ಸರ್ವ ಸಮೃದ್ಧಿಯಾಗುತ್ತದೆ. ನಮ್ಮ ಹೃದಯವೂ ರಾಮ ಮಂದಿರವಾಗಬೇಕು ಎಂದು ಹೇಳಿದರು.
ಉತ್ಸವದಲ್ಲಿ ನಾವು ಮೈ ಮರೆಯಬಾರದು. ರಾಮ ಮಂದಿರ ರಾಮ ಮಂದಿರವಾಗೇ ಉಳಿಯಬೇಕು, ಎಂದೂ ಪರಕೀಯರ ದಾಳಿಗೆ ತುತ್ತಾಗಬಾರದು. ಹಿಂದೂಗಳು ಬಹುಸಂಖ್ಯಾತರಾಗಿ ಉಳಿಯಬೇಕು, ಆಗ ಮಾತ್ರ ಮಂದಿರವೂ ಉಳಿಯುತ್ತದೆ ಎಂದು ಅಭಿಪ್ರಾಯಪಟ್ಟರು.
ನೆರೆಯ ಅಫ್ಘಾನಿಸ್ತಾನದಲ್ಲಿ ಇತ್ತೀಚೆಗೆ ಬುದ್ಧನ ವಿಗ್ರಹ ಛಿದ್ರವಾಯಿತು. ಅಂಥ ಅಪಾಯ ಎಲ್ಲ ಕಡೆಗೂ ಇರುವುದರಿಂದ ನಾವೆಲ್ಲ ಜಾಗೃತರಾಗಿ ಇರಬೇಕು. ಮತ್ತೆ ಅಂಥ ದುರವಸ್ಥೆ ಬರಬಾರದು ಎಂದು ಹೇಳಿದರು.
ರಾಯರ ಹೆಸರು `ರಾಘವೇಂದ್ರ’ ಅದು ರಾಮನ ನಾಮ. ರಘು ಕುಲದವರಿಗೆ ‘ರಾಘವರು’ ಎನ್ನಲಾಗುತ್ತದೆ. ಅವರಲ್ಲಿ ಶ್ರೇಷ್ಠರಾದವರು ರಾಘವೇಂದ್ರರು ಎಂದು ವಿಶ್ಲೇಷಿಸಿದರು. ಉಡುಪಿ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದಂಗಳವರು ಇದ್ದರು.
ನಾಮಕರಣ ಹಂತದಿಂದ ಸಂಸ್ಕೃತಿ ಬೆಳೆಸಿ
ನಾಮಕರಣ ಹಂತದಿಂದಲೇ ಮಕ್ಕಳಲ್ಲಿ ನಮ್ಮ ಸಂಸ್ಕೃತಿಯನ್ನು ಬೆಳೆಸಬೇಕು ಎಂದು ಪೇಜಾವರ ಶ್ರೀಗಳು ನುಡಿದರು.
ಇತ್ತೀಚಿನ ದಿನಗಳಲ್ಲಿ ಮಕ್ಕಳು ಪರಕೀಯ ಸಂಸ್ಕೃತಿಯ ಆಕರ್ಷಣೆಗೆ ಒಳಗಾಗುತ್ತಿದ್ದಾರೆ. ಎರಡಕ್ಷರ, ಮೂರಕ್ಷರದ ಹೆಸರುಗಳನ್ನು ಇಡುತ್ತಿ ದ್ದೇವೆ. ಅದರ ಅರ್ಥ ಗೊತ್ತಿರುವುದಿಲ್ಲ. ನಮ್ಮ ಸಂಸ್ಕೃತಿಯಲ್ಲಿ ಹೆಸರುಗಳಿಗೆ ಕೊರತೆಯಿಲ್ಲ. ದೇವ, ದೇವಿಯರಿಗೆ ಸಹಸ್ರಾರು ಹೆಸರುಗಳಿವೆ. ನಾಲ್ಕು ವೇದ, ಉಪನಿಷತ್ತುಗಳು, ಮಹಾಭಾರತ, ರಾಮಾ ಯಣವಿದೆ. ಇವುಗಳಲ್ಲಿ ಬರುವ ಹೆಸರುಗಳನ್ನು ಇಡಬೇಕು, ಇದರಿಂದ ಮಕ್ಕಳಿಗೆ ನಮ್ಮ ಸಂಸ್ಕೃತಿಯ ಪರಿಚಯವಾಗುತ್ತದೆ ಎಂದು ಹೇಳಿದರು.
ಮಕ್ಕಳಿಗೆ ಒಳ್ಳೆಯ ಹೆಸರಿಡಿ. ನಮ್ಮ ಸಂಸ್ಕೃತಿ ಉಳಿಯಲಿ. ಸಂಸ್ಕೃತಿ ಉಳಿದರೆ ಮಾತ್ರ ಮಂದಿರ ಉಳಿಯುತ್ತದೆ. 500 ವರ್ಷಗಳ ನಮ್ಮ ಹೋರಾಟ ಸಾರ್ಥಕವಾಗುತ್ತದೆ ಎಂದರು.
ಮಕ್ಕಳಿಗೆ ನಮ್ಮ ಸಂಸ್ಕೃತಿಯನ್ನು ನೆನಪಿಸುವ ಹೆಸರುಗಳಿನ್ನಿಡಿ. ಮಕ್ಕಳ ಹೃದಯದಲ್ಲಿ ರಾಮ ತುಂಬಿಕೊಳ್ಳಲಿ. ಆಗ ಮಾತ್ರ ಅವರು ‘ಅಯೋಧ್ಯಾ’ ಆಗುತ್ತಾರೆ. ಮತ್ತೊಬ್ಬರ ಆಕ್ರಮಣಕ್ಕೆ ಅವರು ಒಳಗಾಗುವುದಿಲ್ಲ. ಹಾಗೆ ಮಾಡದಿದ್ದರೆ ನಮ್ಮ ಮಕ್ಕಳು, ಮನೆ ದುರಾಕ್ರಮಣಕ್ಕೆ ಒಳಗಾಗಬೇಕಾಗುತ್ತದೆ, ಸಂಸ್ಕೃತಿ ಅಳಿಯುತ್ತದೆ, ಮಂದಿರ ಉಳಿಯುವುದಿಲ್ಲ ಎಂದರು.