ಪುತ್ರನಿಗೆ ತಪ್ಪಿದ ಟಿಕೆಟ್, ಬಂಡಾಯದ ಸೂಚನೆ ನೀಡಿದ ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ, ಮಾ. 13 – ತಮ್ಮ ಪುತ್ರ ಕಾಂತೇಶ್‌ಗೆ ಲೋಕಸಭಾ ಟಿಕೆಟ್ ತಪ್ಪಿದ ಬೆನ್ನಲ್ಲೇ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಅಸಮಾಧಾನ ಹೊರ ಹಾಕಿದ್ದು, ಪಕ್ಷದ ವಿರುದ್ಧ ಬಂಡಾಯ ಏಳುವ ಸೂಚನೆಯನ್ನೂ ನೀಡಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡಿರುವ ಅವರು, ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ಕಾಂತೇಶ್‌ಗೆ ಹಾವೇರಿ ಕ್ಷೇತ್ರದಿಂದ ಟಿಕೆಟ್ ಕೊಡಿಸುವ ಭರವಸೆ ನೀಡಿದ್ದರು. 

ಈ ಹಿನ್ನೆಲೆಯಲ್ಲಿ ಕಾಂತೇಶ್ ಆ ಭಾಗದಲ್ಲಿ ಓಡಾಡಿದ್ದ, ಜನರ ವಿಶ್ವಾಸ ಗಳಿಸಿದ್ದ. ಈಗ ಯಡಿಯೂರಪ್ಪ ತಮ್ಮ ಮಾತನ್ನು ಉಳಿಸಿಕೊಳ್ಳಲಿಲ್ಲ ಎಂದು ಬೇಸರ ಹೊರ ಹಾಕಿದರು.

ಇದೀಗ ನನ್ನ ಬೆಂಬಲಿಗರು ಶಿವಮೊಗ್ಗ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಒತ್ತಾಯಿಸುತ್ತಿದ್ದಾರೆ. ನನಗೆ ಅನ್ಯಾಯವಾಗಿದೆ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ನಾನು ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಹೇಳಿದರು.

ಮಾರ್ಚ್ 15 ರಂದು ನಾನು ಸಭೆ ಕರೆದಿದ್ದೇನೆ. ಆ ಸಭೆಯ ಅಭಿಪ್ರಾಯ ಆಧರಿಸಿ ಮುಂದುವರಿಯುತ್ತೇನೆ. ತಾಯಿ‌ ಸ್ಥಾನದಲ್ಲಿರುವ ಪಕ್ಷದ ಕತ್ತು ಹಿಸುಕುತ್ತಿದ್ದಾರೆ. ತಾಯಿ ಸ್ಥಾನದಲ್ಲಿರುವ ಪಕ್ಷವನ್ನು ಉಳಿಸುವಂತೆ ಕಾರ್ಯಕರ್ತರು ನನಗೆ ಒತ್ತಾಯಿಸುತ್ತಿದ್ದಾರೆ ಎಂದು ಈಶ್ವರಪ್ಪ ತಿಳಿಸಿದರು.

ನಾನು ಕೇವಲ ಸಂಸದನಾಗುವುದಷ್ಟೇ ಅಲ್ಲದೇ, ಬಿಜೆಪಿಗೂ ಒಳ್ಳೆಯ ಭವಿಷ್ಯ ಸಿಗಬೇಕು. ಈ ನಿಟ್ಟಿನಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದವರು ಹೇಳಿದರು.

error: Content is protected !!