ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದಲ್ಲಿ ದಲಿತರ ಸುಧಾರಣೆ ಸಾಧ್ಯ

ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದಲ್ಲಿ ದಲಿತರ ಸುಧಾರಣೆ ಸಾಧ್ಯ

ಮಾದಾರ ಚನ್ನಯ್ಯ ಜಯಂತ್ಯೋತ್ಸವ, ಜನಜಾಗೃತಿ ಸಮಾವೇಶ, ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಶಾಸಕ ಬಿ.ಪಿ. ಹರೀಶ್

ಹರಿಹರ, ಮಾ. 13-  ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ಪ್ರೋತ್ಸಾಹ ನೀಡಿದಾಗ ದಲಿತ ಸಮಾಜ ಸುಧಾರಣೆಯಾಗುತ್ತದೆ ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು. 

ನಗರದ ಸಿದ್ದೇಶ್ವರ ಪ್ಯಾಲೇಸ್ ಸಭಾಂಗಣದಲ್ಲಿ ಮಾದಿಗ ಸಮಾಜದ ವತಿಯಿಂದ ಮಾದಾರ ಚನ್ನಯ್ಯ ಜಯಂತ್ಯೋತ್ಸವದ ಅಂಗವಾಗಿ ಜರುಗಿದ ಜನಜಾಗೃತಿ ಸಮಾವೇಶ ಹಾಗೂ ಸರಳ ಸಾಮೂಹಿಕ ವಿವಾಹ ಮಹೋತ್ಸವ ಸಮಾರಂಭ ದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ದಲಿತ ಸಮಾಜದ ಡಾ. ಬಿ.ಆರ್.ಅಂಬೇಡ್ಕರ್ ಸೇರಿದಂತೆ ಅನೇಕ ಮಹನೀಯರು  ಜ್ಞಾನ ಮತ್ತು ಶಿಕ್ಷಣದಿಂದ  ವಿಶ್ವಮಟ್ಟದಲ್ಲಿ ಹೆಸರು ಗಳಿಸುವುದಕ್ಕೆ,  ಸಮಾಜದಲ್ಲಿ ಮುನ್ನೆಲೆಗೆ ಬರುವುದಕ್ಕೆ ಸಾಧ್ಯವಾಯಿತು. ಹಾಗಾಗಿ ದಲಿತ ಸಮಾಜದ ತಾಯಂದಿರು ತಮ್ಮ ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಕೊಡುವಲ್ಲಿ ಮುಂದಾಗಬೇಕಿದೆ. ಜೊತೆಗೆ ಹಿರಿಯರು ಯುವಕರಿಗೆ ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹ ನೀಡಬೇಕು ಎಂದು ಅವರು ಕರೆ ನೀಡಿದರು.

ಸರ್ಕಾರ ಎಸ್ಸಿ-ಎಸ್ಟಿ ಸಮುದಾಯದ ಜನಕ್ಕೆ ವಿವಿಧ ಬಗೆಯ ಸೌಲಭ್ಯಗಳನ್ನು ನೀಡುತ್ತಿದ್ದು, ಅವುಗಳನ್ನು ಸರಿಯಾದ ರೀತಿಯಲ್ಲಿ ಸದ್ಭಳಕೆ ಮಾಡಿಕೊಂಡು ತಮ್ಮ ಭವಿಷ್ಯವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳುವಂತೆ ಹರೀಶ್ ಕಿವಿಮಾತು ಹೇಳಿದರು.

ಕೋಡಿಹಳ್ಳಿ ಮಠದ ಜಗದ್ಗುರು ಶ್ರೀ ಷಡಕ್ಷರಿ ಮುನಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ದಲಿತ ವರ್ಗದವರು ತಮ್ಮ ಜಾತಿಯವರ ಜೊತೆಗೆ, ಅನ್ಯ ಸಮಾಜದವರ ಜೊತೆಯಲ್ಲಿ ಉತ್ತಮ ರೀತಿಯಲ್ಲಿ ಹೊಂದಾಣಿಕೆ ಮಾಡಿಕೊಂಡು ಹೋದಾಗ ಸಮಾಜವು ಹೆಚ್ಚು ಪ್ರಗತಿ ಹೊಂದುವುದಕ್ಕೆ ಸಾಧ್ಯವಿದೆ. ಸಮಾಜದಲ್ಲಿ ಶಿಸ್ತು, ಸಂಯಮ ತಾಳ್ಮೆ ಹಾಗೂ ನಡೆ ನುಡಿಗಳು ಚೆನ್ನಾಗಿ ಇರಬೇಕು  ಮತ್ತು ಒಗ್ಗಟ್ಟಿನಿಂದ ಇದ್ದರೆ ಸಮಾಜಕ್ಕೆ ಶಕ್ತಿ ಹೆಚ್ಚು ಬರುತ್ತದೆ ಮತ್ತು ಬದುಕಲು ಮತ್ತು ಅನ್ನ ಮಾರ್ಗಕ್ಕೆ ಅಕ್ಷರದ ಅವಶ್ಯಕತೆ ಇರುತ್ತದೆ. ಆದರೆ ಅಕ್ಷರದ ಕೊರತೆ ದಲಿತರಲ್ಲಿ ಹೆಚ್ಚು ಇದ್ದು, ಅದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಚಿಂತನೆ ಮಾಡಬೇಕಾಗಿದೆ ಎಂದು ಹೇಳಿದರು. 

ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್ ಮಾತನಾಡಿ, ಅಜ್ಞಾನದಿಂದ ಜ್ಞಾನದ ಕಡೆಯಲ್ಲಿ ಸಮಾಜ ಸಾಗಿದಾಗ, ಸಮಾಜದಲ್ಲಿ ಜಾಗೃತಿ ಆದಂತೆ ಆಗುತ್ತದೆ. ಸರ್ಕಾರ  ದಲಿತರಿಗೆ, ಅಸ್ಪೃಶ್ಯರಿಗೆ ಹೆಚ್ಚಿನ ಪ್ರಮಾಣದಲ್ಲಿ ಪ್ರೋತ್ಸಾಹ ನೀಡುತ್ತಿದ್ದು, ಅವುಗಳನ್ನು ಸರಿಯಾದ ರೀತಿಯಲ್ಲಿ ಸದ್ಭಳಕೆ ಮಾಡಿಕೊಂಡಾಗ ಸಮಾಜದಲ್ಲಿ ಜ್ಞಾನವಂತರ ಸಂಖ್ಯೆ ಹೆಚ್ಚಾಗುವುದಕ್ಕೆ ದಾರಿಯಾಗುತ್ತದೆ ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಎ. ಗೋವಿಂದ ರೆಡ್ಡಿ ಮಾತನಾಡಿ, ಜಾತಿ ಗಣತಿಯಿಂದ ಸಮಾಜ ಸುಧಾರಣೆ ತರುವುದಕ್ಕೆ ಆಗುವುದಿಲ್ಲ, ಮಕ್ಕಳಿಗೆ ವಿದ್ಯಾಭ್ಯಾಸ ಕೊಟ್ಟಾಗ ಮಾತ್ರ ಸಮಾಜ ಸುಧಾರಣೆಯಾಗುತ್ತದೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ದಲಿತ ಸಮಾಜದ ಅಧ್ಯಕ್ಷ ಎಂ.ಎಸ್. ಆನಂದ್ ಕುಮಾರ್ ವಹಿಸಿದ್ದರು.

ಈ ಸಂದರ್ಭದಲ್ಲಿ ಆರೋಗ್ಯ ಮಾತೆ ಚರ್ಚ್ ಫಾದರ್‌ ಜಾರ್ಜ್, ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸದಸ್ಯರಾದ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ್, ಛಲವಾದಿ ಸಮಾಜದ ಜಿಲ್ಲಾ ಅಧ್ಯಕ್ಷ ಎನ್. ರುದ್ರಮುನಿ, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಎ‌.ಕೆ. ಭೂಮೇಶ್, ಸಿ.ಎನ್. ಹುಲುಗೇಶ್, ಧರ್ಮಸ್ಥಳ ಸಂಘದ ಗಣಪತಿ ಮಾಳಂಜೆ, ಕೆ. ಜಡಿಯಪ್ಪ, ಎಲ್.ಬಿ. ಹನುಮಂತಪ್ಪ, ಹನುಮಂತಪ್ಪ ದೊಡ್ಡಮನೆ, ಶ್ರೀನಿವಾಸ್, ಹೆಚ್. ಶಿವಪ್ಪ, ಪರಶುರಾಮ್ ಧೂಳೆಹೊಳೆ, ಕೊಕ್ಕನೂರು ಬಸವರಾಜಪ್ಪ, ಹನುಮಂತಪ್ಪ ಬನ್ನಿಕೋಡು, ನಾಗೇಂದ್ರಪ್ಪ ನಾಗೇನಹಳ್ಳಿ, ಪ್ರಕಾಶ್, ಚೌಡಪ್ಪ, ಎ.ಕೆ. ದಾನಪ್ಪ, ಆಲೂರು ಶಿವಕುಮಾರ್, ಭಾಗ್ಯದೇವಿ, ಅನಿತಮ್ಮ, ಈರಮ್ಮ, ಲೋಕೇಶ್, ಮಂಜುನಾಥ್, ಹಾಲೇಶಪ್ಪ, ದೀಟೂರು ನಾಗರಾಜ್, ಹಾಲಪ್ಪ ರಾಜನಹಳ್ಳಿ, ಪರಸಪ್ಪ ಗಣೇಶ್, ಹಳ್ಳಳ್ಳಿ ಹಾಲೇಶಪ್ಪ, ಹಳ್ಳಿಹಾಳ ಚಂದ್ರ ಶೇಖರ್, ಗುರುಮೂರ್ತಿ ಉಪಸ್ಥಿತರಿದ್ದರು.

error: Content is protected !!