ಗ್ರಾಮದೇವತೆ ಹಬ್ಬಕ್ಕೆ ಪ್ರಾಣಿ ಬಲಿಗೆ ಅವಕಾಶವಿಲ್ಲ

ಗ್ರಾಮದೇವತೆ ಹಬ್ಬಕ್ಕೆ ಪ್ರಾಣಿ ಬಲಿಗೆ ಅವಕಾಶವಿಲ್ಲ

ಮಲೇಬೆನ್ನೂರು : ಹಬ್ಬದ ಶಾಂತಿ ಸಭೆಯಲ್ಲಿ ಸಿಪಿಐ ಸುರೇಶ್ ಸಗರಿ 

ಮಲೇಬೆನ್ನೂರು ಮಾ 13 – ಪಟ್ಟಣದಲ್ಲಿ ಇದೇ ದಿನಾಂಕ 19 ರಿಂದ ಹಮ್ಮಿಕೊಂಡಿರುವ ಗ್ರಾಮದೇವತೆಗಳಾದ ಏಕನಾಥೇಶ್ವರಿ – ಕೋಡಿ ಮಾರೇಶ್ವರಿ ಹಾಗೂ ದುರ್ಗಾಂಬಿಕ ಜಾತ್ರೆ ವೇಳೆ ಮೌಢ್ಯಾಚರಣೆಯ ಕೋಣ ಅಥವಾ ಪ್ರಾಣಿ ಬಲಿಗೆ ಅವಕಾಶ ಇರುವುದಿಲ್ಲ ಎಂದು ಹರಿಹರ ಸಿಪಿಐ ಸುರೇಶ್‌ ಸಗರಿ ಎಚ್ಚರಿಕೆ ನೀಡಿದರು.

ಅವರು ಮಂಗಳವಾರ ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಬಸವೇಶ್ವರ ರಥೋತ್ಸವ ಹಾಗೂ ಅಮ್ಮನ ಹಬ್ದದ ಆಚರಣೆ ಪ್ರಯುಕ್ತ ಕರೆದಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹಬ್ಬದ ವೇಳೆ ಸಾವಿರಾರು ಜನ ಭಕ್ತರು ಆಗಮಿಸುತ್ತಿದ್ದು ಆಯೋಜಕರು ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು. ಮೆರವಣಿಗೆ, ಉತ್ಸವದ ವೇಳೆ ಸ್ವಯಂ ಸೇವಕರನ್ನು ನಿಯೋಜಿಸಬೇಕು. 

ಪಟ್ಟಣದಲ್ಲಿ ಕುಡಿಯುವ ನೀರು, ವಿದ್ಯುತ್‌ ವ್ಯವಸ್ಥೆ , ವಾಹನ ನಿಲುಗಡೆ, ವಾಹನ ಸಂಚಾರ ವ್ಯವಸ್ಥೆ ಸಮರ್ಪಕವಾಗಿರಲಿ. ಆರೋಗ್ಯ ಇಲಾಖೆಯವರಿಂದ ಅಗತ್ಯ ಇರುವ ಕಡೆ ಚಿಕಿತ್ಸಾ ಕೇಂದ್ರ ಸ್ಥಾಪಿಸಬೇಕು. ಪರಿಸರ ನೈರ್ಮಲ್ಯ ಕಾಪಾಡಿ.

ದೇವಾಲಯದ ಸುತ್ತ ಬ್ಯಾರಿಕೇಡ್‌ ಅಳವಡಿಸಿ.  ಕಳುವು ಪ್ರಕರಣ ತಡೆಯಲು ಸೂಕ್ತ ಭದ್ರತೆ ಒದಗಿಸಲಾಗುವುದು. ನೀವು ಸಹ ಪೊಲೀಸ್‌ ಇಲಾಖೆಯೊಟ್ಟಿಗೆ ಸಹಕರಿಸಿ ಎಂದರು.

ಧ್ವನಿವರ್ಧಕ, ವಿದ್ಯುತ್‌, ಪ್ಲೆಕ್ಸ್‌ ಅಳವಡಿಸುವ ಮುನ್ನ ಕಡ್ಡಾಯವಾಗಿ ಅನುಮತಿ ಪಡೆಯವುದು ಅಗತ್ಯ. ಒಂದು ವೇಳೆ ಲೋಕಸಭೆ ಚುನಾವಣೆ ಘೋಷಣೆಯಾದಲ್ಲಿ ತೆಗೆದು ಕೊಳ್ಳಬೇಕಾದ ಮುಂಜಾಗ್ರತೆ ಕ್ರಮದ ಕುರಿತು ಜಿಲ್ಲಾಡಳಿತ, ತಹಶೀಲ್ದಾರ್‌ ನೀಡುವ ಸೂಚನೆ ನಿಯಮ ಪಾಲಿಸಬೇಕು. 

ರಂಜಾನ್‌ ಪ್ರಾರ್ಥನಾ ಸಮಯದಲ್ಲಿ ಜಾಮಿಯಾ ಮಸೀದಿ ರಸ್ತೆಯಲ್ಲಿ ವಾಹನ ನಿಲುಗಡೆಗೆ ಪರ್ಯಾಯ ವ್ಯವಸ್ಥೆ ಮಾಡುವಂತೆ ಈ ವೇಳೆ ಸಭೆಯಲ್ಲಿದ್ದವರು ಮನವಿ ಮಾಡಿದರು.

ಚಿಟ್ಟಕ್ಕಿ ನಾಗರಾಜ್‌, ಭಾನುವಳ್ಳಿ ಸುರೇಶ್‌,‌ ಕೆ.ಪಿ. ಗಂಗಾಧರ್‌, ಪುರಸಭೆ ಸದಸ್ಯ ನಯಾಜ್‌, ಗೌಡ್ರ ಮಂಜಣ್ಣ, ಬೆಣ್ಣೆಹಳ್ಳಿ ಸಿದ್ದೇಶ್‌, ಕೆ.ಜಿ. ಪರಮೇಶ್ವರಪ್ಪ ಮಾತನಾಡಿ, ಹಿಟ್ಟಿನ ಕೋಣದ ಬಲಿ ನೀಡಲಾಗುವುದು. ಸರ್ಕಾರದ ನಿಯಮ ಪಾಲಿಸಿ ಶಾಂತಿ ಕಾಪಾಡುವ ಭರವಸೆ ನೀಡಿದರು.

ಪಿಎಸ್‌ಐ ಪ್ರಭು ಕೆಳಗಿನಮನೆ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪುರಸಭೆ ಸದಸ್ಯ ಶಾ ಅಬ್ರಾರ್‌, ಸಾಬೀರ್‌ ಅಲಿ, ಕೆ.ಜಿ. ಲೋಕೇಶ್‌, ಮುಖಂಡರಾದ ಎಸ್.ಬಿ.ಪುಟ್ಟಪ್ಪ, ಎಸ್.‌ ರಂಗನಾಥ್‌, ಎ.ಕೆ. ನರಸಿಂಹಪ್ಪ, ಸಿದ್ದೇಶ್‌ ಮತ್ತಿತರರು ಸಭೆಯಲ್ಲಿದ್ದರು. ಪೊಲೀಸ್ ಬರಹಗಾರ ಶಿವಕುಮಾರ್‌ ವಂದಿಸಿದರು.

error: Content is protected !!