ಜನತೆಗೆ `ಬರ’ದ ತಾಪ ಹೆಚ್ಚದಂತೆ ಮುತುವರ್ಜಿ ವಹಿಸಲು ತಾಕೀತು

ಜನತೆಗೆ `ಬರ’ದ ತಾಪ ಹೆಚ್ಚದಂತೆ ಮುತುವರ್ಜಿ ವಹಿಸಲು ತಾಕೀತು

ಹರಿಹರ ತಾಲ್ಲೂಕು ಪಂಚಾಯ್ತಿ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಶಾಸಕ ಬಿ.ಪಿ. ಹರೀಶ್   

ಹರಿಹರ, ಮಾ, 12- ಬರದಿಂದಾಗಿ ಬೇಸಿಗೆ ತಾಪ ಹೆಚ್ಚಾಗಿ ರೈತರ ಜಮೀನುಗಳಿಗೆ ನೀರಿನ ಕೊರತೆ, ಕುಡಿಯುವ ನೀರಿನ ತೊಂದರೆ, ವಿದ್ಯುತ್ ಸರಬರಾಜು, ಪಶುಗಳಿಗೆ ಮೇವಿನ ಕೊರತೆ   ಉಲ್ಬಣಗೊಳ್ಳು ವುದರಿಂದ, ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಗಳು ಆಗದಂತೆ ಅಧಿಕಾರಿಗಳು ಮುತುವರ್ಜಿಯಿಂದ ಕರ್ತವ್ಯ  ನಿರ್ವಹಿಸಬೇಕು ಎಂದು ಶಾಸಕ ಬಿ.ಪಿ. ಹರೀಶ್ ತಾಕೀತು ಮಾಡಿದರು.

ನಗರದ ತಾಪಂ ಇಲಾಖೆಯ ಸಭಾಂಗಣದಲ್ಲಿ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಮಳೆ ಇಲ್ಲದೆ ಡ್ಯಾಮ್ ಗಳಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದು, ಅಡಿಕೆ ಮತ್ತು ತೋಟಗಾರಿಕೆ ಬೆಳೆಗಳು ಹಾಳಾಗುವ ಸಾಧ್ಯತೆ ಹೆಚ್ಚು ಇರುವುದರಿಂದ, ಕೊನೆಯ ಭಾಗದ ರೈತರ ಪರಿಸ್ಥಿತಿ ಹದೆಗೆಡುವ ಸಾಧ್ಯತೆ ಇರುತ್ತದೆ.  ನೀರು ಬಿಡುವ ಸಮಯದಲ್ಲಿ ರೈತರಿಗೆ ಯಾವುದೇ ರೀತಿಯ ತೊಂದರೆಗಳು ಬರದಂತೆ ಎಚ್ಚರಿಕೆ ವಹಿಸಬೇಕು.   ಗ್ರಾಮಗಳಲ್ಲಿ ಸ್ವಚ್ಚತೆಗೆ ಹೆಚ್ಚು ಆದ್ಯತೆ ನೀಡಬೇಕು. ಆರೋಗ್ಯ ಇಲಾಖೆಯ ಅಧಿಕಾರಿಗಳು, ಸ್ತ್ರೀ ಶಕ್ತಿ ಸಂಘದವರು, ಆಶಾ ಕಾರ್ಯಕರ್ತೆಯರು ಮಕ್ಕಳಿಗೆ ರೋಗಗಳು ಹರಡದಂತೆ ತಡೆಯುವ ನಿಟ್ಟಿನಲ್ಲಿ ಹೆಚ್ಚು ಕಾಳಜಿಯನ್ನು ವಹಿಸಿ, ಮುಂಜಾಗ್ರತಾ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು ಎಂದು ಹೇಳಿದರು.

ಮಲೇಬೆನ್ನೂರು ಗ್ರಾಮದಲ್ಲಿ ಬರುವ ವಾರದಂದು ಹಬ್ಬ ಇರುವುದರಿಂದ ಅಲ್ಲಿನ ಜನತೆಗೆ ಕುಡಿಯುವ ನೀರು, ಸ್ವಚ್ಚತೆ ಸಮಸ್ಯೆಗಳು ಬರದಂತೆ ಹೆಚ್ಚು ಗಮನ ಹರಿಸಬೇಕು ಎಂದು ಹೇಳಿದರು.

ಅತಿ ಶೀಘ್ರದಲ್ಲಿ ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆ ಆಗುವುದರಿಂದ ಅನುದಾನ ಬಿಡುಗಡೆ ಆಗಿರುವ ಕಾಮಗಾರಿಯನ್ನು ಆರಂಭಿಸಿ, ಅನುದಾನ ವಾಪಸ್ ಹೋಗದಂತೆ ನೋಡಿಕೊಳ್ಳಬೇಕು. ತಾಲ್ಲೂಕಿನ ಯಲವಟ್ಟಿ ಗ್ರಾಮದಲ್ಲಿ ಕೇವಲ ನೂರು ಮನೆಗಳಿಗೆ ಮಾತ್ರ ನೀರು ಸರಬರಾಜಾಗುತ್ತಿದೆ   ಎಂದು ದೂರು ಬಂದಿದ್ದು, ಅದನ್ನು ಬೇಗ ಸರಿಪಡಿಸಲು ಮುಂದಾಗುವಂತೆ ಹೇಳಿದರು. 

ಬರುವ 26 ರಿಂದ 6 ರವರೆಗೆ  ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುತ್ತಿದ್ದು, ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ   ಶಿಕ್ಷಣ ಇಲಾಖೆ ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು.

ಕೃಷಿ ಇಲಾಖೆ ಅಧಿಕಾರಿ ನಾರನಗೌಡ ಮಾತನಾಡಿ, ಈ ಬಾರಿ ಮಳೆಯ ಪ್ರಮಾಣ ಬಹಳ ಕಡಿಮೆ ಆಗಿದ್ದರಿಂದ 6127 ಹೆಕ್ಟೇರ್ ಬೆಳೆ ಹಾನಿಯಾಗಿದ್ದು,  ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ 70 ಕೃಷಿ ಹೊಂಡಗಳನ್ನು ತೆರೆಯಲಾಗಿದೆ. ಮಲೇಬೆನ್ನೂರು ಹೋಬಳಿ ಭಾಗದಲ್ಲಿ 688 ಹೆಕ್ಟೇರ್ ಭತ್ತದ ನಾಟಿ ಮಾಡಲಾಗಿದೆ. ರೈತರಿಗೆ ಅನುಕೂಲ ಆಗುವ ದೃಷ್ಟಿಯಿಂದ 10 ಲಕ್ಷದವರೆಗೆ ಸಬ್ಸಿಡಿ ರೂಪದಲ್ಲಿ ಸಾಲವನ್ನು ನೀಡಲಾಗುತ್ತದೆ. ಇಲ್ಲಿಯವರೆಗೆ 950 ಸ್ಪಿಂಕ್ಲರ್ ಯಂತ್ರಗಳನ್ನು ವಿತರಣೆ ಮಾಡಲಾಗಿದೆ. ಬಿತ್ತನೆ ಬೀಜಗಳು ಮತ್ತು ಗೊಬ್ಬರದ ದಾಸ್ತಾನು ಸಾಕಷ್ಟು ಇದ್ದು, ಯಾವುದೇ ರೀತಿಯ ಕೊರತೆ ಇರುವುದಿಲ್ಲ ಎಂದು ಹೇಳಿದರು.

ಕಾರ್ಮಿಕ ಇಲಾಖೆಯ ಅಧಿಕಾರಿ ಕವಿತಾ ಮಾತನಾಡಿ ತಾಲ್ಲೂಕಿನ 23 ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಬರುವ, 4445 ಕಡೆಯಲ್ಲಿ ಎನ್.ಜಿ.ಓ ರವರಿಂದ ಆರೋಗ್ಯ ತಪಾಸಣೆ ಮಾಡಲಾಗಿದೆ. ಅವರ ಕಾರ್ಯಚಟುವಟಿಕೆಗಳ ಬಗ್ಗೆ ಜಿಲ್ಲೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ  ಎಂದು ಹೇಳಿದರು. ‌

ಬಿಇಓ ಹನುಮಂತಪ್ಪ ಮಾತನಾಡಿ, ತಾಲ್ಲೂಕಿನಲ್ಲಿ ಒಟ್ಟು 3268 ವಿದ್ಯಾರ್ಥಿಗಳು ಈ ಬಾರಿ ಎಸ್.ಎಸ್.ಎಲ್‌ಸಿ ಪರೀಕ್ಷೆ ಬರೆಯುತ್ತಾರೆ ಎಂದು ಹೇಳಿದರು. ತಾಲ್ಲೂಕಿನ  89  ಶಾಲೆಗಳಲ್ಲಿ ಶೌಚಾಲಯದ ಕೊರತೆ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. 11 ಶಾಲೆಗಳಲ್ಲಿ ಸರ್ಕಾರದ ಅನುದಾನ ಬಿಡುಗಡೆ ಆಗಿದ್ದು, ಕಾಮಗಾರಿ ಆರಂಭ ಮಾಡಲಾಗಿದೆ ಎಂದು ಹೇಳಿದರು.

ಬೆಸ್ಕಾಂ ಅಧಿಕಾರಿ ರಮೇಶ್ ನಾಯ್ಕ್ ಮಾತನಾಡಿ, ಅಕ್ರಮ ಸಕ್ರಮದ ಅಡಿಯಲ್ಲಿ 1299 ಅರ್ಜಿ ಸಲ್ಲಿಸಲಾಗಿತ್ತು. ಅದರಲ್ಲಿ 428 ಕ್ಕೆ ಅನುದಾನ ಬಂದಿದೆ. ರೈತರಿಗೆ ತೊಂದರೆಗಳು ಆಗದಂತೆ ದಿನಕ್ಕೆ 7  ಗಂಟೆ ವಿದ್ಯುತ್ ಸರಬರಾಜು ಮಾಡಲಾಗಿದೆ. ಅದರಲ್ಲಿ ಪ್ರಮುಖವಾಗಿ ಮನೆಗಳಿಗೆ ಯಾವುದೇ ರೀತಿಯ ತೊಂದರೆ ಬರದಂತೆ ವಿದ್ಯುತ್ ಸರಬರಾಜು ಮಾಡಲಾಗಿದೆ  ಎಂದು ಹೇಳಿದರು.

ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿ ಸುರೇಶ್ ಮಾತನಾಡಿ, ಗ್ರಾಮದಲ್ಲಿ ಹಬ್ಬ ಇದ್ದು, 49 ಕಡೆಗಳಲ್ಲಿ ಬೋರ್‌ವೆಲ್ ಕೊರೆಸಲು ಸರ್ಕಾರಕ್ಕೆ ಪ್ರಸ್ತಾವನೆ  ಸಲ್ಲಿಸಲಾಗಿದೆ, ಸ್ವಚ್ಚತೆಗೆ ತೊಂದರೆಗಳು ಬರದಂತೆ ಹೊನ್ನಾಳಿ ನಗರದಿಂದ 10 ಜನ  ಕಾರ್ಮಿಕರನ್ನು ಕರೆಸಿಕೊಂಡು ಸ್ವಚ್ಚತೆಗೆ ಆದ್ಯತೆ ನೀಡಲಾಗಿದೆ ಎಂದು ಹೇಳಿದರು. 

ಮಲೇಬೆನ್ನೂರು ಪುರಸಭೆ ಮುಖ್ಯ ಅಧಿಕಾರಿ ಗಿರೀಶ್ ಮಾತನಾಡಿ, ತಾಲ್ಲೂಕಿನ  ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಳು ಹೆಚ್ಚು ಇದ್ದು, ಜೊತೆಗೆ ಬೋರ್‌ವೆಲ್‌ನಲ್ಲಿ  ನೀರಿನ ಪ್ರಮಾಣ ಕಡಿಮೆಯಾಗಿದೆ. 18 ಕಡೆಗಳಲ್ಲಿ ಬೋರ್‌ವೆಲ್ ರೀ ಡ್ರಿಲ್ ಮಾಡಲಾಗಿದೆ. ಜೊತೆಗೆ   17 ಕಡೆಗಳಲ್ಲಿ ಹೊಸದಾಗಿ ಬೋರ್‌ವೆಲ್ ಕೊರೆಸಲಾಗಿದೆ. ಕೊಂಡಜ್ಜಿ ಮತ್ತು ದೇವರಬೆಳಕೆರೆ ಸೇರಿದಂತೆ ಹಲವಾರು ಗ್ರಾಮಗಳ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಸಮಸ್ಯೆಗಳು ಇರುವುದರಿಂದ ಜನರ ನಿರೀಕ್ಷೆಗೆ ತಕ್ಕಂತೆ ನೀರು ಸರಬರಾಜು ಮಾಡಲು ಆಗುತ್ತಿಲ್ಲ ಎಂದು ಹೇಳಿದರು.

ಆರೋಗ್ಯ ಇಲಾಖೆಯ ಅಧಿಕಾರಿ ಪ್ರಶಾಂತ್ ಮಾತನಾಡಿ, ಬೇಸಿಗೆ ಕಾಲದಲ್ಲಿ ರೋಗಗಳು ಹರಡುವುದು ಸರ್ವೇ ಸಾಮಾನ್ಯ. ಹಾಗಾಗಿ ಅದನ್ನು ತಡೆಗಟ್ಟಲು ಈಗಾಗಲೇ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಲೇಬೆನ್ನೂರು ಗ್ರಾಮದಲ್ಲಿ ವೈದ್ಯರ ಕೊರತೆ ಇರುವುದರಿಂದ ಸರ್ಕಾರಕ್ಕೆ ಪ್ರಸ್ತಾವನೆ  ಸಲ್ಲಿಸಲಾಗಿದೆ ಎಂದು ಹೇಳಿದರು.

ಈ ವೇಳೆ ಪಿಡಬ್ಲ್ಯೂಡಿ ಇಲಾಖೆಯ ಶಿವಮೂರ್ತಿ, ಸಿಡಿಪಿಓ ಪೂರ್ಣಿಮಾ, ಗ್ರಾಮೀಣ ಕುಡಿಯುವ ನೀರು ಇಲಾಖೆಯ ಗಿರೀಶ್, ಗ್ರೇಡ್-2 ತಹಶೀಲ್ದಾರ್ ಶಶಿಧರಯ್ಯ, ಆರೋಗ್ಯ ಇಲಾಖೆಯ ಡಾ. ಪ್ರಶಾಂತ್, ತೋಟಗಾರಿಕೆ ಇಲಾಖೆಯ ಶಶಿಧರ್ ಸೇರಿದಂತೆ, ಇತರೆ ಇಲಾಖೆಯ ಅಧಿಕಾರಿಗಳು ತಮ್ಮ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. 

ತಹಶೀಲ್ದಾರ್ ಗುರುಬಸವರಾಜ್, ತಾಪಂ ಇಓ ರಮೇಶ್ ಸುಲ್ಪಿ,
ಡಾ. ಹನುಮನಾಯ್ಕ್, ರಾಮಕೃಷ್ಣ, ತಾ.ಪಂ. ಇಓ ಲೆಕ್ಕಾಧಿಕಾರಿ ಲಿಂಗರಾಜ್, ಪೂಜಾ, ರವಿಕಿರಣ್, ನೋಂದಣಿ ಇಲಾಖೆ ಅಧಿಕಾರಿ ನಾಗರಾಜ್, ನಗರಸಭೆ ಎಇಇ ತಿಪ್ಪೇಸ್ವಾಮಿ ಇತರರು ಹಾಜರಿದ್ದರು.   

error: Content is protected !!