ಭಾನುವಳ್ಳಿಯಲ್ಲಿ ತೆರವಾಗಿರುವ ಮದಕರಿ ನಾಯಕ ಮಹಾದ್ವಾರ, ನಾಮಫಲಕ ಪುನರ್ ನಿರ್ಮಿಸದಿದ್ದರೆ ಪ್ರತಿಭಟನೆ

ದಾವಣಗೆರೆ, ಮಾ.12- ಹರಿಹರ ತಾಲೂಕಿನ ಭಾನುವಳ್ಳಿಯಲ್ಲಿ ತೆರವುಗೊಳಿಸಿರುವ ರಾಜ ವೀರಮದಕರಿ ನಾಯಕ ಮಹಾದ್ವಾರ ಹಾಗೂ ವಾಲ್ಮೀಕಿ ವೃತ್ತ ನಾಮಫಲಕವನ್ನು ಮೂರ್ನಾಲ್ಕು ದಿನಗಳಲ್ಲಿ ಪುನರ್ ನಿರ್ಮಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಆದಾಗ್ಯೂ   ಕ್ರಮ ಕೈಗೊಳ್ಳಲಿದ್ದರೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನಿವಾಸದ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಯುವ ವಾಲ್ಮೀಕಿ ವೇದಿಕೆ ರಾಜ್ಯಾಧ್ಯಕ್ಷ ಪಿ.ಆರ್. ತುಳಸಿರಾಮ್ ಎಚ್ಚರಿಸಿದ್ದಾರೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸತ್ಯಶೋಧನಾ ಸಮಿತಿ ವರದಿ ಆಧಾರದಲ್ಲಿ ಅನಕೃತವಾಗಿ ಅಳವಡಿಸಿದ್ದ ನಾಮಫಲಕ ತೆರವುಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ಅದೇ ವೃತ್ತದ ಅಭಿವೃದ್ಧಿಗೆ ಸರ್ಕಾರದಿಂದಲೇ ಅನುದಾನ ಮಂಜೂರಾಗಿದೆ. ಈ ಬಗೆಗಿನ ದಾಖಲೆಗಳೂ ಇವೆ ಎಂದರು.

 ಭಾನುವಳ್ಳಿಯಲ್ಲಿ 1999ರಲ್ಲಿ  ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಅನುದಾನದಲ್ಲಿ ನಿರ್ಮಿಸಿದ್ದ ರಾಜ ವೀರಮದಕರಿ ನಾಯಕ ಮಹಾದ್ವಾರವನ್ನು, ಅಂದಿನ ಸಹಕಾರ ಸಚಿವ ಎಚ್. ಶಿವಪ್ಪ ಉದ್ಘಾಟಿಸಿದ್ದರು. ಅಲ್ಲದೆ, ಆ ಜಾಗದಲ್ಲಿರುವ ಮಹರ್ಷಿ ವಾಲ್ಮೀಕಿ ವೃತ್ತದ ಅಭಿವೃದ್ಧಿಗೆ 2021ರಲ್ಲಿ 92 ಸಾವಿರ ರೂ. ಹಾಗೂ ಟಿಎಸ್‌ಪಿ ಯೋಜನೆಯಡಿ 1.30 ಲಕ್ಷ ರೂ. ಅನುದಾನ ನೀಡಲಾಗಿದೆ. 

ವಾಸ್ತವ ಸ್ಥಿತಿ ಹೀಗಿದ್ದರೂ ಜಿಲ್ಲಾಡಳಿತ ಮಹಾದ್ವಾರ ಮತ್ತು ನಾಮಫಲಕ ತೆರವುಗೊಳಿಸಿರುವುದು ಖಂಡನೀಯ ಎಂದು ಕಿಡಿಕಾರಿದರು.

ಈ ಮಹಾದ್ವಾರ ಮತ್ತು ನಾಮಫಲಕ ತೆರವುಗೊಳಿಸಿರುವುದರ ಹಿಂದೆ, ಮುಖ್ಯಮಂತ್ರಿ ಸಿದ್ದರಾಮಯ್ಯರ ಕೈವಾಡವಿದೆ. ಚುನಾವಣೆಯಲ್ಲಿ ಅಹಿಂದ ಜಪ ಮಾಡಿದ ಸಿದ್ದರಾಮಯ್ಯ, ಗೆದ್ದ ಬಳಿಕ ತಮ್ಮ ಸ್ವಜಾತಿಯವರನ್ನು ಮೆಚ್ಚಿಸಲು ಬೇರೆ ಜಾತಿಗಳ ಮೇಲೆ ದಬ್ಬಾಳಿಕೆ ನಡೆಸಲು ಕುಮ್ಮಕ್ಕು ನೀಡುತ್ತಿರುವುದು ಸರಿಯಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ವಾಲ್ಮೀಕಿ ಸಮುದಾಯದ ಮುಖಂಡರಾದ ಜಿಗಳಿ ರಂಗಪ್ಪ, ಮಲ್ಲಾಪುರ ದೇವರಾಜ, ಧನ್ಯಕುಮಾರ್, ಬೇವಿನಹಳ್ಳಿ ಮಹೇಶ್, ಕೆ.ಸಿ. ನಾಗರಾಜ, ಚನ್ನಬಸಪ್ಪ, ರಂಗನಾಥ ನಾಯಕ್. ಎಂ.ನಿಜಲಿಂಗಪ್ಪ ಮತ್ತಿತರರಿದ್ದರು.

error: Content is protected !!