ಒಬಿಸಿ ಮೋರ್ಚಾ ಸಾಮಾಜಿಕ ಸಮಾವೇಶದಲ್ಲಿ ರಘು ಕೌಟಿಲ್ಯ ಕರೆ
ದಾವಣಗೆರೆ, ಮಾ.12- ರಾಜ್ಯ ಕಾಂಗ್ರೆಸ್ ಸರ್ಕಾರ ಭಾಗ್ಯಗಳ ಆಮಿಷ ನೀಡಿ, ಕರೆಂಟ್ ಬಿಲ್ ಹೆಚ್ಚಿಸುವ ಮೂಲಕ ಜನರ ಹಣ ಕಿತ್ತುಕೊ ಳ್ಳುತ್ತಿದೆ. ಆದರೆ ಬಿಜೆಪಿಯು ದೇಶದ ಜನರಿಗೆ ಸೂರು ಕಲ್ಪಿಸಿ ಬದುಕು ಕಟ್ಟಿ ಕೊಟ್ಟಿದೆ ಎಂದು ರಾಜ್ಯ ಓಬಿಸಿ ಮೋರ್ಚಾ ಘಟಕದ ಅಧ್ಯಕ್ಷ ರಘು ಕೌಟಿಲ್ಯ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು.
ನಗರದ ದಾವಣಗೆರೆ-ಹರಿಹರ ಅರ್ಬನ್ ಬ್ಯಾಂಕ್ ಸಮುದಾಯ ಭವನದಲ್ಲಿ ಮಂಗಳ ವಾರ ನಡೆದ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ಸಾಮಾಜಿಕ ಸಮಾವೇಶ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಿಂದುಳಿದ ವರ್ಗಕ್ಕೆ ಸೇರಿದ ಪ್ರಧಾನಿ ನರೇಂದ್ರ ಮೋದಿ ಅವರು ಬಲಿಷ್ಠ ರಾಷ್ಟ್ರ ನಿರ್ಮಿಸುವ ಮೂಲಕ ಪ್ರಪಂಚದ ಚಿತ್ತ ದೇಶ ದೆಡೆಗೆ ತಿರುಗುವಂತೆ ಮಾಡಿದ್ದಾರೆ ಎಂದರು.
ಬಿಜೆಪಿ ಸರ್ಕಾರವು ಸಣ್ಣ-ಸಣ್ಣ ಸಮಾಜಗಳಿಗೆ ಶೈಕ್ಷಣಿಕ, ರಾಜಕೀಯ ಮತ್ತು ಆರ್ಥಿಕವಾಗಿ ಸದೃಢವಾಗುವಂತೆ ಅವಕಾಶ ಕಲ್ಪಿಸಿದೆ. ಸ್ವನಿಧಿ ಯೋಜನೆ, ವಿಶ್ವಕರ್ಮ ಯೋಜನೆಗಳು ಸ್ವಾವಲಂಬಿ ಆಗುವಂತೆ ಮಾಡಿವೆ ಎಂದರು.
ಸ್ವಾವಲಂಬಿ ಭಾರತ ಆಗುವ ನಿಟ್ಟಿನಲ್ಲಿ, ಭಾರತ ಸಂಬಳ ಕೊಡುವ ರಾಷ್ಟ್ರ ಆಗಬೇಕು. ಆದ್ದರಿಂದ ಎಲ್ಲರೂ ಸೇರಿ ಮತ್ತೊಮ್ಮೆ ಮೋದಿ ಅವರನ್ನು ಗೆಲ್ಲಿಸೋಣ ಎಂದು ಹೇಳಿದರು.
ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಓಬಿಸಿಯು 15ಕ್ಕೂ ಅಧಿಕ ಜಾತಿಗಳಿಂದ ಕೂಡಿದ ದೊಡ್ಡ ಸಮಾಜವಾಗಿದೆ. ಆದ್ದರಿಂದ ಓಬಿಸಿ ವರ್ಗವರ ಬಳಿ ಬಿಜೆಪಿ ಗೆಲ್ಲಿಸುವ ಶಕ್ತಿ ಇದೆ ಎಂದು ತಿಳಿಸಿದರು.
10 ವರ್ಷಗಳಲ್ಲಿ ಪ್ರಧಾನಿ ಮೋದಿ ಅವರು ವಿಶ್ವಕ್ಕೆ ಮಾದರಿಯಾಗುವಂತೆ ಕೆಲಸ ಮಾಡಿದ್ದಾರೆ. ಆದ್ದರಿಂದ ಮತ್ತೊಮ್ಮೆ ಮೋದಿ ಅವರನ್ನು ಗೆಲ್ಲಿಸಬೇಕು ಎಂದರು.
ರಾಜ್ಯ ಓಬಿಸಿ ಉಪಾಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಮೋದಿ ಅವರನ್ನು ಸೋಲಿಸಲು ಅಂತರರಾಷ್ಟ್ರಿಯ ಮಟ್ಟದಲ್ಲಿ ಕುತಂತ್ರ ನಡೆದಿದೆ. ಇದ್ಯಾವುದಕ್ಕೂ ಬಗ್ಗದೇ ನಾವುಗಳು ಬಿಜೆಪಿಗೆ ಶಕ್ತಿಯಾಗೋಣ ಎಂದರು.
ಮಾಜಿ ಸಚಿವ, ಎಸ್.ಎ. ರವೀಂದ್ರನಾಥ್, ಮಾಜಿ ಶಾಸಕ ಎಸ್.ವಿ. ರಾಮಚಂದ್ರ, ರಾಜ್ಯ ಓಬಿಸಿ ಉಪಾಧ್ಯಕ್ಷ ಕುಬೇಂದ್ರಪ್ಪ, ಕಾರ್ಯದರ್ಶಿ ರಘುನಂದನ್ ಅಂಬರ್ಕರ್, ಲೋಕಸಭಾ ಓಬಿಸಿ ಪ್ರಭಾರಿ ಬೇತೂರು ಬಸವರಾಜ್, ಸತೀಶ್ ಕೊಳೇನಹಳ್ಳಿ, ಮಾಜಿ ಮೇಯರ್ ಗುರುನಾಥ್, ಪಾಲಿಕೆ ಸದಸ್ಯೆ ಸುರೇಶ್ ಗಂಡುಗಾಳೆ, ರೇಣುಕಾ ಶ್ರೀನಿವಾಸ್, ಯುವ ಮುಖಂಡ ಶ್ಯಾಮ್, ವೈ. ಮಲ್ಲೇಶ್ ಪ್ರಮುಖರು ಇದ್ದರು.