ಏರಿದ ತಾಪ, ಕುಸಿದ ಅಂತರ್ಜಲ

ಏರಿದ ತಾಪ, ಕುಸಿದ ಅಂತರ್ಜಲ

ಬೋರ್‌ವೆಲ್‌  – ಗಾಡಿಗೂ ಪರದಾಟ, ಟ್ಯಾಂಕರ್ ಮೊರೆಹೋದ ಅನ್ನದಾತ 

ಅಡಕೆ ತೋಟ ಉಳಿಸಿಕೊಳ್ಳಲು ರೈತರ ಹೆಣಗಾಟ 

ಜಿ.ಜಗದೀಶ್, ಮಾಯಕೊಂಡ

ಮಾಯಕೊಂಡ, ಮಾ. 10 – ಬೆಳೆದು ನಿಂತ ಅಡಿಕೆ ತೋಟ ಉಳಿಸಿಕೊಳ್ಳಲು ರೈತರ ಪಡಿಪಾಟಲು ಮುಗಿಲು ಮುಟ್ಟಿದೆ. ಇನ್ನೂ ಮೂರು ತಿಂಗಳ ಬೇಸಿಗೆ ಕಳೆಯುವುದು ಬಾಕಿ ಇರುವಂತೆಯೇ ಬೋರ್‌ವೆಲ್‌ಗಳ ನೀರುಗುಳದೇ  ನಿಂತಿರುವುದು ಅನ್ನದಾತರ ನಿದ್ದೆಗೆಡಿಸಿದೆ. 

ಕಳೆದ ವರ್ಷ ಸುರಿದ ಮಳೆ ರೈತರಲ್ಲಿ ಅಡಿಕೆ ತೋಟ ಮಾಡಲು ಉತ್ಸುಕರನ್ನಾಗಿಸಿದ ಪರಿಣಾಮ ಸಾವಿರಾರು ಎಕರೆ ಅಡಿಕೆ ಹೊಸದಾಗಿ ಹಾಕಲಾ ಯಿತು.  ನಿರಂತರ ಮಳೆಗೆ ತಿಂಗಳುಗಟ್ಟಲೆ ಹಳ್ಳಗಳು ಹರಿದಿದ್ದು, ಮೂರ್ನಾಲ್ಕು ವರ್ಷ ತೋಟಗಳಿಗೆ ಧಕ್ಕೆಯಿಲ್ಲ ಎಂಬ ಧೈರ್ಯ ಮೂಡಿಸಿತ್ತು. 

ಇದೇ ಉಮೇದಿನಲ್ಲಿ ಅಡಿಕೆ ಹಾಕಿ  ತರಕಾರಿ, ಜೋಳ ಬೆಳೆಯಲು ಉಳಿಸಿಕೊಂಡ ಅಲ್ಪ‌ಸ್ವಲ್ಪ  ಜಮೀನಿಗೂ ಅಡಿಕೆ ಹಾಕಿದ್ದರು. ಅಡಿಕೆಗೆ ಸಿಗುತ್ತಿರುವ ಉತ್ತಮ ಧಾರಣೆಯಿಂದ, ಲಕ್ಷ, ಲಕ್ಷ ಹಣ ಎಣಿಸುವ ಕನಸು ಕಂಡಿದ್ದರು. ಈ ವರ್ಷದ ಕನಿಷ್ಟ ಮಳೆಗಾಲ ರೈತರ ಕನಸಿಗೆ ಕೊಳ್ಳಿಯಿಟ್ಟಿದೆ. ಈ ವರ್ಷ ಇಡೀ ಒಂದು ತಿಂಗಳು ಮಾತ್ರ ಮಳೆ ಬಿದ್ದಿದ್ದು, ಬಿಟ್ಟರೆ ಉಳಿದಂತೆ ಮಳೆ ತಲೆಹಾಕಲಿಲ್ಲ.

ಏರಿದ ಬಿಸಿಲ ತಾಪ, ಕುಸಿದ ಅಂತರ್ಜಲ, ಬರಿದಾದ ಕೆರೆಗಳು : ಜನವರಿವರೆಗೆ ಹಾಗೂ ಹೀಗೂ ಇದ್ದ ವಾತವರಣ ಬದಲಾಗಿ, ಬಿಸಿಲಿನ ತಾಪಮಾನ 35 ಡಿಗ್ರಿಗೆ ಏರಿದೆ. ಬಿಸಿಲು ಏರಿದಂತೆಯೇ ಕೆರೆಗಳು ಬತ್ತಿವೆ. ಕೊಡಗನೂರು ಕೆರೆಯೂ ಸ್ವಲ್ಪ ದಿನಗಳ ಲ್ಲಿಯೇ ಭಾರಿ ಪ್ರಮಾಣದಲ್ಲಿ  ಬರಿದಾಗುತ್ತಿರುವುದೂ ಆತಂಕ ಮೂಡಿಸಿದೆ. ಅಂತರ್ಜಲ ಕುಸಿತದಿಂದ  ಬೋರ್‌ವೆಲ್‌ಗಳಲ್ಲಿ ನೀರು ದಿನೇ ದಿನೇ ಕಡಿಮೆ ಯಾಗುತ್ತಿದೆ. ನೀರಿಗಾಗಿ ರೈತರು ಕಣ್ಣೀರಿಡು ವಂತಾಗಿದೆ. ಬಿಸಿಲ ಬೇಗೆಗೆ ಅಡಿಕೆ ಮರಗಳು ಹಳದಿಯಾಗುತ್ತಿರುವುದು ರೈತರ ನೆಮ್ಮದಿ ಕೆಡಿಸಿದೆ. 

ಹೊಸ ಬೋರ್‌ವೆಲ್ ಕೊರೆಯಿಸಿದರರೂ ನೀರಿಲ್ಲ! : ತೋಟ ಉಳಿಸಿಕೊಳ್ಳಲು ರೈತರು ಬೋರ್ವೆಲ್‌ ಕೊರೆಸುತ್ತಲೇ ಇದ್ದಾರೆ. ಹಳ್ಳಿಹಳ್ಳಿಗಳಲ್ಲೂ ಬೋರ್ವೆಲ್ ಕೊರೆಯುವ ಲಾರಿಗಳು ಘರ್ಜಿಸುತ್ತಿವೆ. ಸಾವಿರ ಅಡಿ ಕೊರೆದರೂ ನೀರು ಸಿಗದೇ, ಹರಡುತ್ತಿರುವ ಬಿಳಿದೂಳು ರೈತರ ಕಣ್ಣು ಕೆಂಪಾಗಿಸಿದೆ. ಕೆಲವೆಡೆ ಈಚೆಗಷ್ಟೇ ಕೊರೆಯಿಸಿದ ಬೋರ್‌ವೆಲ್‌ಗಳು ಎಂಟತ್ತು ದಿನದಲ್ಲಿಯೇ ಸ್ತಬ್ಧವಾಗಿದ್ದು, ರೈತರ ಧೈರ್ಯಗೆಡಿಸಿದೆ. ಬಾವಿಹಾಳು, ನರಗನಹಳ್ಳಿ ಕಡೆ  ಎಕರೆಗೆ ಹತ್ತು ಬೋರ್‌ವೆಲ್ ಕೊರೆಸಿದರೂ ನೀರು‌ ಸಿಗದೆ ಅನ್ನದಾತರು ಕಂಗಾಲಾಗಿದ್ದಾರೆ.

ಬೋರ್‌ವೆಲ್ ಗಾಡಿಗಳಿಗೂ ಭಾರೀ ಬೇಡಿಕೆ : ಬೋರ್ವೆಲ್ ಕೊರೆಯುವ ಗಾಡಿಗಳಿಗೂ ಬೇಡಿಕೆ ಹೆಚ್ಚಿದೆ. ಬೋರ್ವೆಲ್ ಗಾಡಿಗಾಗಿ ಹದಿನೈದು ದಿನ ಕಾಯಬೇಕಿದೆ.  ಹುಚ್ಚವ್ವನಹಳ್ಳಿ, ವಡ್ಡರಹಟ್ಟಿ, ಸುಲ್ತಾನಿಪುರ, ಕಂದನಕೋವಿ ಮತ್ತಿತರೆ ಕಡೆ ರೈತರು ಬೋರ್ವೆಲ್ ಗಾಡಿಗಾಗಿ ಮೊರೆಯಿಡುವುದು ಸಾಮಾನ್ಯವಾಗಿದೆ. ಎಷ್ಟು ಆಳಕ್ಕೋದರೂ  ಕಾಣದ ನೀರು, ಬೋರ್ವೆಲ್ ಕೊರೆಸಲು ಹೆಚ್ಚಿದ ದರವೂ ರೈತರನ್ನು ಕಂಗೆಡಿಸಿದೆ.

ಟ್ಯಾಂಕರ್‌ಗೆ ಮೊರೆ : ಬೋರ್‌ವೆಲ್ ಕೊರೆಸಿ ಕೈಸುಟ್ಟುಕೊಳ್ಳುವ ಬದಲು ಟ್ಯಾಂಕರ್ ಬಾಡಿಗೆ ಪಡೆದು ಅವುಗಳಿಂದ ನೀರು ತಂದು‌ ತೋಟ ಬದುಕಿಸಿಕೊಳ್ಳುವ ಯತ್ನ ನಡೆಸಿದ್ದಾರೆ. ನೀರಿರುವ ಕಡೆಯಿಂದ ಟ್ಯಾಂಕರ್‌ಗಳಲ್ಲಿ ನೀರು ಖರೀದಿಸಿ, ತಂದು ಅಡಿಕೆ  ಗಿಡ ಬದುಕಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ. 

ಹುಚ್ಚವನಹಳ್ಳಿ, ಬಾವಿಹಾಳ್, ಹುಚ್ಚವನಹಳ್ಳಿ ವಡ್ಡರಹಟ್ಟಿ, ಹೆಬ್ಬಾಳು, ಗುಡಾಳು, ಕಂದನಕೋವಿ,  ಮಾಯಕೊಂಡ ಮತ್ತಿತರ ಕಡೆ ಟ್ಯಾಂಕರ್ ನೀರು ತಂದು ಅಡಿಕೆ ಗಿಡಗಳಿಗೆ ಹಾಕಿಸಲಾಗುತ್ತಿದೆ. ಗುಂಡಿ ತೋಡಿಸಿ, ತಾಡಪಾಲು ಹರಡಿ ಅದರಲ್ಲೂ ಟ್ಯಾಂಕರ್‌ನಿಂದ ತಂದ ನೀರು ಸಂಗ್ರಹಿಸಿ ಅಡಿಕೆ ಮರಗಳಿಗೆ ಹನಿಸಿ, ತೋಟ ಉಳಿಸಿಕೊಳ್ಳಲು ಪ್ರಯತ್ನ ನಡೆಸಿದ್ದೇವೆ ಎನ್ನುತ್ತಾರೆ, ಬಾವಿಹಾಳ್, ನರಗನಹಳ್ಳಿ ರೈತರು.

ಎರಡು ಎಕರೆ ತೋಟ ಉಳಿಸಿಕೊಳ್ಳಲು ಏಳೆಂಟು ಬೋರ್ ಕೊರೆಸಿದರೂ ಒಂದಿಂಚೂ ನೀರು ಸಿಗುತ್ತಿಲ್ಲ. ಬಾವಿಹಾಳ್‌ನಲ್ಲಿ ಬಹುತೇಕ ರೈತರು ಟ್ಯಾಂಕರ್ ಅವಲಂಭಿಸಿದ್ದಾರೆ. ಬೋರ್‌ವೆಲ್ ಕೊರೆಯುವ ಗಾಡಿ ಸಿಗುವುದೂ ಕಷ್ಟ ಎನ್ನುತ್ತಾರೆ. ರೈತರಾದ ಅಣಬೇರು ಕೋಟ್ಯಾಳ್ ರಾಜಣ್ಣ, ಕಮ್ಮಾರಗಟ್ಟೆ ವಾಗೀಶಪ್ಪ, ಲೋಕೇಶಪ್ಪ, ಗ್ರಾ. ಪಂ. ಸದಸ್ಯ  ಅನಿಲ್ ಕುಮಾರ್, ಬಾವಿಹಾಳ್ನ  ಉಜ್ಜವ್ಳರ ಮಹೇಶ್ವರಪ್ಪ, ಜಗದೀಶಪ್ಪ, ಹುಚ್ಚವನಹಳ್ಳಿ ಗಣೇಶ್, ಮಂಜಣ್ಣ.

error: Content is protected !!