ಉಕ್ಕಡಗಾತ್ರಿ : ಅಜ್ಜಯ್ಯನ ಜಾತ್ರೆಗೆ ಚಾಲನೆ

ಉಕ್ಕಡಗಾತ್ರಿ : ಅಜ್ಜಯ್ಯನ ಜಾತ್ರೆಗೆ ಚಾಲನೆ

ಮಲೇಬೆನ್ನೂರು ಮಾ 10 : ಅಜ್ಜಯ್ಯನ ಕ್ಷೇತ್ರದಲ್ಲಿ ಜಾತಿ, ಭೀತಿ ಇಲ್ಲದೆ ನೆಮ್ಮದಿ ಕಾಣಲು  ಭಕ್ತರು ಅನಾದಿಕಾಲದಿಂದಲೂ ಕ್ಷೇತ್ರಕ್ಕೆ ಆಗಮಿಸುತ್ತಿದ್ದು ಅವರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಟ್ರಸ್ಟ್ ಕಮಿಟಿಯವರು ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದು ನಂದಿಗುಡಿ ವೃಷಭಪುರಿ ಬೃಹನ್ಮಠದ ಶ್ರೀ ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಅವರು ಸುಕ್ಷೇತ್ರ ಉಕ್ಕಡಗಾತ್ರಿ ಯಲ್ಲಿ ಇಂದಿನಿಂದ ಒಂದು ವಾರ ಕಾಲ ಜರುಗುವ ಪವಾಡ ಪುರುಷ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯನ ಮಹಾ ಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ಭಾನುವಾರ ನಂದಿ ಧ್ವಜಾರೋಹಣ ನೆರವೇರಿಸಿ, ವೇದಿಕೆ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಚಾಲನೆ ನೀಡಿ ಮಾತನಾಡಿದರು. ಭಕ್ತಿ ತೋರ್ಪಡಿಸಲು ಭಗವಂತನ ಆರಾಧನೆಯೇ ಸೂಕ್ತವಾಗಿದ್ದು ಭಕ್ತರು ಮೌಢ್ಯತೆಯಿಂದ ಹೊರಬಂದು ಕ್ಷೇತ್ರದಲ್ಲಿ  ಭಕ್ತಿ ಮೂಲಕ ಸಮಾಧಾನ ಕಾಣಬೇಕಿದೆ ಎಂದರು.

ಕ್ಷೇತ್ರದಲ್ಲಿ ಸ್ವಚ್ಛತೆ ಭಕ್ತರ ಆರೋಗ್ಯವನ್ನು ಅವಲಂಬಿಸಿದ್ದು ಅಧ್ಯಾತ್ಮದ ಮನಸ್ಸು ಹೊಂದಿದಲ್ಲಿ ಭಕ್ತರ ಇಷ್ಟಾರ್ಥಗಳನ್ನು ಅಜ್ಜಯ್ಯ ಈಡೇರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ತಮಿಳುನಾಡು, ಆದ್ರ, ತೆಲಂಗಾಣದಿಂದ ಆಗಮಿಸುವ ಲಕ್ಷಾಂತರ ಭಕ್ತರು ತಮ್ಮ ಕಷ್ಟ, ದುಃಖ, ಸಮಸ್ಯೆ ಹೇಳಿಕೊಂಡು ಸಮಾಧಾನ ಹೊಂದಲು ಧಾವಿಸುತ್ತಿದ್ದಾರೆ ಎಂದರು.

ಕರಿಬಸವೇಶ್ವರ ಗದ್ದುಗೆ ಟ್ರಸ್ಟ್ ಕಾರ್ಯದರ್ಶಿ ಎಸ್. ಸುರೇಶ್ ಮಾತನಾಡಿ, ಭಕ್ತರಿಗೆ ವಸತಿ ಸೌಲಭ್ಯ, ಶುದ್ಧ ಕುಡಿಯುವ ನೀರು, ತುಂಗಭದ್ರಾ ನದಿ ದಡದಲ್ಲಿ ಸ್ನಾನದ ಘಟ್ಟ, ಸಾರಿಗೆ ಸೌಕರ್ಯ ಕಲ್ಪಿಸಲಾಗಿದೆ. ಅಜ್ಜಯ್ಯನಿಗೆ ಬೆಳ್ಳಿರಥ ಮತ್ತು ಚಿನ್ನದ ಕಿರೀಟ ನಿರ್ಮಾಣ, ಬಡವರ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ, ಸುಸಜ್ಜಿತ ಕಲ್ಯಾಣ ಮಂಟಪ, ಭಕ್ತರ ಸುರಕ್ಷತೆಗೆ ಸಿಸಿ ಟಿವಿ ಕ್ಯಾಮರ, ಸ್ವಚ್ಛತಾ ಕಾರ್ಯಕ್ಕೆ ಸಿಬ್ಬಂದಿಗಳ ನೇಮಕದ ಬಗ್ಗೆ ತಿಳಿಸಿದರು.

ಟ್ರಸ್ಟ್ ನಿರ್ದೇಶಕರಾದ ಜಿಗಳಿ ಇಂದೂಧರ್, ನಾಗರಾಜ್ ದಿಲ್ಲವಾಲ, ಕಸಾಪ ಕಾರ್ಯದರ್ಶಿ ಎಚ್.ಎಂ.ಸದಾನಂದ, ಶಿಕ್ಷಕ ಮಹಾಂತಯ್ಯ ಮಾತನಾಡಿದರು. ನಿದೇರ್ಶಕ ಗದಿಗೆಪ್ಪ ಹೊಸಳ್ಳಿ, ಗದ್ದಿಗಯ್ಯ ಪಾಟೀಲ್, ವಿವೇಕಾನಂದ ಪಾಟೀಲ್, ಬಸವನಗೌಡ, ಪ್ರಕಾಶ್, ಬಸವರಾಜ್ ಪಾಳೇದ, ವೀರನಗೌಡ ಮುಖಂಡರಾದ ಶಿವಪೂಜಿ ಭರಮಗೌಡ, ವಿಜಯಕುಮಾರ್ ಪಾಳೇದ, ಬೂದೇರ ವೀರನಗೌಡ, ಹೆಚ್. ಚಕ್ರಸಾಲಿ, ಎಸ್.ಹಿತ್ತಲಮನಿ ಮತ್ತಿತರರು ಹಾಜರಿದ್ದರು. ನಾಡಿನ ವಿವಿಧ ಭಾಗಗಳಿಂದ ಭಕ್ತರು ತಂಡೋಪವಾಗಿ ಉಕ್ಕಡಗಾತ್ರಿಗೆ ಆಗಮಿಸುವ ದೃಶ್ಯ ಕಂಡು ಬಂತು. ವಾಹನ ಪಾರ್ಕಿಂಗ್ ಗೆ ಪ್ರತ್ಯೇಕ ಸ್ಥಳ

ನಿಗದಿಮಾಡಲಾಗಿತ್ತು, ಕಲಾವಿದರಾದ ಗದ್ದಿಗೆಪ್ಪ, ಶಂಕರಪ್ಪ ಮಠದ, ಬಸವರಾಜ್ ವಚನಗೀತೆ ಹಾಡಿದರು. ಅರ್ಚಕರಿಂದ ವೇದಘೋಷ ನಡೆಯಿತು. ರಾತ್ರಿ ಜಾಗರಣೆ ನಡೆಯಿತು. ಪಿಎಸ್‍ಐ ಪ್ರಭು ಕೆಳಗಿನಮನಿ ಅವರ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಒದಗಿಸಲಾಗಿದೆ.  ಸೋಮವಾರ ಬೆಳಗ್ಗೆ 8 ಗಂಟೆಗೆ ಅಜ್ಜಯ್ಯನ ರಥೋತ್ಸವ ಜರುಗಲಿದೆ. ನಂದಿಗುಡಿ ಶ್ರೀಗಳು ರಥಕ್ಕೆ ಪೂಜೆ ಸಲ್ಲಿಸಲಿದ್ದಾರೆ.

error: Content is protected !!