ದಾವಣಗೆರೆ, ಮಾ. 10 – ಮಕ್ಕಳಲ್ಲಿ ಕ್ರಿಯಾಶೀಲತೆ ಮಾಯವಾಗಿ, ಮೊಬೈಲ್ ಮೊರೆ ಹೋಗಿದ್ದಾರೆ. ಇದರಿಂದ ಮಕ್ಕಳನ್ನು ಹೊರ ತರಲು ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಸಹಕಾರಿಯಾಗಿದೆ ಎಂದು ಸಿದ್ಧಗಂಗಾ ವಿದ್ಯಾಸಂಸ್ಥೆ ಮುಖ್ಯಸ್ಥರಾದ ಜಸ್ಟಿನ್ ಡಿಸೋಜಾ ಹೇಳಿದರು.
ನಗರದ ರೋಟರಿ ಬಾಲಭವನದ ಸಿ.ಕೇಶವಮೂರ್ತಿ ಸಭಾಂಗಣದಲ್ಲಿ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಜಿಲ್ಲಾ ಸಂಸ್ಥೆಯಿಂದ ಭಾನುವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ರಾಜ್ಯ ಮಟ್ಟದ ಗೈಡ್ ಆಯುಕ್ತರುಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ಮೊಬೈಲ್ ಗೀಳಿನಿಂದ ಹೊರ ಬರಲು ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆಯಲ್ಲಿ ಹೆಚ್ಚು ಹೆಚ್ಚಾಗಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಮಹಿಳೆ ಸಂವೇದನೆಯ ಪ್ರತೀಕ. ನಿಮ್ಮಲ್ಲಿರುವ ಮನೋಬಲ ಮತ್ತು ಚಾತುರ್ಯವನ್ನು ಯುವಕರಿಗೆ ಧಾರೆ ಎರೆಯಬೇಕು ಎಂದೂ ಅವರು ಸಲಹೆ ನೀಡಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ರಾಜ್ಯ ಆಯುಕ್ತೆ ಗೀತಾ ನಟರಾಜ್ ಮಾತನಾಡಿ, ಮಹಿಳಾ ಹೋರಾಟಗಾರ್ತಿ ಕ್ಲಾರಾ ಜೆಟ್ಕಿನ್, ಜರ್ಮನಿಯಲ್ಲಿ ಸ್ತ್ರೀಯರ ಹಕ್ಕುಗಳಿಗಾಗಿ ಚಳವಳಿ ಹುಟ್ಟುಹಾಕಿದ್ದರ ಫಲವಾಗಿ ವಿಶ್ವ ಮಹಿಳಾ ದಿನಾಚರಣೆ ಅಸ್ತಿತ್ವಕ್ಕೆ ಬಂದಿದೆ ಎಂದರು.
ಸಂಸ್ಥೆಯ ವಯಸ್ಕ ಸಂಪನ್ಮೂಲದ ರಾಜ್ಯ ಆಯುಕ್ತೆ (ಬೈಡ್ಸ್) ಬಿ.ವಿ.ರಾಮಲತಾ ಮಾತನಾಡಿ, ಯುವ ಮುಂದಾಳುಗಳಿಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಸ್ಕೌಟ್ಸ್-ಗೈಡ್ಸ್ ಸಂಸ್ಥೆಯಲ್ಲಿ ಹೆಚ್ಚಿನ ಅವಕಾಶಗಳಿವೆ. ಅಂಥವರಿಗೆ ನಾವು ಪ್ರೇರಣೆ ತುಂಬಬೇಕು ಎಂದು ಹೇಳಿದರು.
ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಮುರುಘರಾಜೇಂದ್ರ ಚಿಗಟೇರಿ ಮಾತನಾಡಿದರು.
ರಾಜ್ಯ ಜಂಟಿ ಕಾರ್ಯದರ್ಶಿ ಡಾ. ಕೃಪಾ ವಿಜಯ್, ಉಪಾಧ್ಯಕ್ಷೆ ಭಾರತಿ ಚಂದ್ರಶೇಖರ್, ಶಾಂತಾ ಯಾವಗಲ್, ರಾಧಾ ವೆಂಕಟೇಶ್, ಸ್ಕೌಟ್ ಆಯುಕ್ತ ಷಡಾಕ್ಷರಪ್ಪ, ಸಹಾಯಕ ಆಯುಕ್ತ ಎನ್.ಕೆ.ಕೊಟ್ರೇಶ್ ಉಪಸ್ಥಿತರಿದ್ದರು.
ಜಿಲ್ಲಾ ಗೈಡ್ ಆಯುಕ್ತೆ ಶಾರದಾ ಮಾಗಾನಹಳ್ಳಿ ಸ್ವಾಗತಿಸಿದರು. ಎಲ್.ಟಿ. ಶಶಿಕಲಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ. ರತ್ನಾ ವಂದಿಸಿದರು. ರೇಂಜರ್ ರಾಕಾ ಕಾರ್ಯಕ್ರಮ ನಿರ್ವಹಿಸಿದರು.