ಕಳಪೆ ಗುಣಮಟ್ಟದ ಪಂಪ್‌ಸೆಟ್ ಮೋಟಾರು, ಉಪಕರಣ ವಾಪಸ್ ಕಳುಹಿಸಿದ ಶಾಸಕ ಬಸವಂತಪ್ಪ

ಕಳಪೆ ಗುಣಮಟ್ಟದ ಪಂಪ್‌ಸೆಟ್ ಮೋಟಾರು, ಉಪಕರಣ ವಾಪಸ್ ಕಳುಹಿಸಿದ ಶಾಸಕ ಬಸವಂತಪ್ಪ
  • 32 ಜನ ರೈತರಿಗೆ ವಿತರಿಸಲು ತಂದಿದ್ದ ಅಧಿಕಾರಿಗಳು
  • ಕಳಪೆ ಉಪಕರಣ ವಿತರಿಸುವ ಬಗ್ಗೆ ಶಾಸಕರಿಗೆ ಮಾಹಿತಿ ನೀಡಿದ ರೈತರು
  • ಕಳಪೆ ಗುಣಮಟ್ಟದ ಉಪಕರಣ  ಕಂಡು ಶಾಸಕರು ತರಾಟೆ

ದಾವಣಗೆರೆ, ಮಾ. 8- ಕಳಪೆ ಗುಣಮಟ್ಟದ ಪಂಪ್‌ಸೆಟ್ ಮೋಟಾರು, ಉಪಕರಣಗಳನ್ನು  ರೈತರಿಗೆ ವಿತರಿಸುವು ದನ್ನು ನಿಲ್ಲಿಸಿ ವಾಪಸ್ ಕಳುಹಿಸಿದ ಮಾಯ ಕೊಂಡ ಶಾಸಕ ಕೆ.ಎಸ್.ಬಸವಂತಪ್ಪ, ಗುಣಮಟ್ಟದ ಪಂಪ್ ಸೆಟ್ ಮೋಟಾರು, ಉಪಕರಣಗಳನ್ನು ವಿತರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಲ್ಲೂಕಿನ  ಆನಗೋಡು ಗ್ರಾಮದ ಮರಳುಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ಮತ್ತು ಆದಿ ಜಾಂಬವ ಅಭಿವೃದ್ಧಿ ನಿಗಮದಡಿ 2020-2022 ನೇ ಸಾಲಿನಲ್ಲಿ ಕೊರೆದಿದ್ದ ಬೋರ್‌ವೆಲ್‌ಗಳ 32 ಫಲಾನುಭವಿ ರೈತರಿಗೆ ಅಧಿಕಾರಿಗಳು ಪಂಪ್ ಸೆಟ್ ಮೋಟಾರು, ಪೈಪ್‌ಗಳು ಮತ್ತು ಉಪಕರಣಗಳನ್ನು ವಿತರಿಸಿದರು. 

ಆದರೆ ಕಳಪೆ ಗುಣಮಟ್ಟದ ಉಪಕರಣಗಳನ್ನು ವಿತರಿಸಿರುವುದನ್ನು ಗಮನಿಸಿದ ರೈತರು ಕೂಡಲೇ ಶಾಸಕರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ವಿತರಣಾ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಕೆ.ಎಸ್.ಬಸವಂತಪ್ಪ, ಪಂಪ್ ಸೆಟ್ ಮೋಟಾರು, ಪೈಪ್ ಗಳು, ಉಪಪಕರಣಗಳನ್ನು ಪರಿಶೀಲನೆ ನಡೆಸಿದರು. ಈ ವೇಳೆ ಬೆಂಗಳೂರಿನ ಯುನೈಟೆಡ್ ಇಂಜಿನಿಯರ್ ಏಜೆನ್ಸಿಯಿಂದ ವಿತರಿಸಲು ತಂದಿದ್ದ ಐಎಸ್‌ಐ ಮಾರ್ಕ್‌ ಇಲ್ಲದ ಪಂಪ್‌ಸೆಟ್ ಮೋಟಾರು, ಪೈಪ್ ಗಳು, ಉಪಕರಣ ಗಳನ್ನು ಕಂಡ ಶಾಸಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಬೋರ್ ವೆಲ್ ಕೊರೆಯುವುದು, ಪಂಪ್‌ಸೆಟ್ ಮೋಟಾರು, ಪೈಪ್, ಉಪಕರಣಗಳ ಒಟ್ಟು ಸೌಲಭ್ಯ ಕಲ್ಪಿಸಲು ಸರ್ಕಾರ ಒಬ್ಬ ರೈತ ಫಲಾನುಭವಿಗೆ  5 ಲಕ್ಷ ರೂ. ಕೊಡುತ್ತದೆ. ಆದರೆ ಇಲ್ಲಿ ಕಳಪೆ ಗುಣಮಟ್ಟದ ಪಂಪ್‌ಸೆಟ್ ಮೋಟಾರು, ಪೈಪ್, ಉಪಕರಣ ವಿತರಿಸುತ್ತಿದ್ದೀರಿ. ಈ ಉಪಕರಣಗಳನ್ನು ಖರೀದಿಸಿದ ಸರಿಯಾದ ಬಿಲ್ ಇಲ್ಲ. ಐಎಸ್ ಐ ಮಾರ್ಕ್ ಇಲ್ಲ.  ಒಬ್ಬ ರೈತನಿಗೆ ಐದು ಪೈಪ್, ಇನ್ನೊಬ್ಬ ರೈತನಿಗೆ ಮೂರು ಪೈಪ್ ಕೊಡುತ್ತಿದ್ದೀರಿ. ರೈತರಿಗೆ ಎಷ್ಟೆಷ್ಟು ಪೈಪ್ ಕೊಡಬೇಕೆಂಬ ಮಾಹಿತಿ ಇಲ್ಲ ಎಂದು ಶಾಸಕರು ಅಧಿಕಾರಿಗಳಿಗೆ ಬೆಂಡೆತ್ತಿದರು.

ಕೂಡಲೇ ಈ ಪಂಪ್‌ಸೆಟ್ ಮೋಟಾರು, ಪೈಪ್ ಮತ್ತು ಉಪಕರಣ ಗಳನ್ನು ವಾಪಸ್ ತೆಗೆದುಕೊಂಡು ಹೋಗಿ ಗುಣಮಟ್ಟದ ಪಂಪ್‌ಸೆಟ್ ಮೋಟಾರು, ಪೈಪ್, ಉಪಕರಣಗಳನ್ನು ವಿತರಿಸಬೇಕು. ಒಂದು ವೇಳೆ ಕಳಪೆ ಗುಣಮಟ್ಟದ ಉಪಕರಣಗಳನ್ನು ವಿತರಿಸಿದರೆ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ರೈತರು ಗುಣಮಟ್ಟದ ಉಪಕರಣಗಳನ್ನು ವಿತರಿಸಿದರೆ ಮಾತ್ರ ಪಡೆಯಬೇಕು. ಇಲ್ಲದಿದ್ದರೆ, ನನ್ನ ಗಮನಕ್ಕೆ ತಂದರೆ, ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತ್ತು ಮಾಡಿಸಲು ಮೇಲಾಧಿಕಾರಿ ಗಳಿಗೆ ಶಿಫಾರಸ್ಸು ಮಾಡುತ್ತೇನೆ.  ಅಲ್ಲದೇ ಅಂಬೇಡ್ಕರ್, ಆದಿ ಜಾಂಬವ, ವೀರಶೈವ ಸೇರಿದಂತೆ ವಿವಿಧ ಅಭಿವೃದ್ಧಿ ನಿಗಮಗಳಡಿ ಈ ಹಿಂದೆ ಇಂತಹ ಕಳಪೆ ಗುಣಮಟ್ಟದ ಉಪಕರಣಗಳನ್ನು ವಿತರಿಸಿರುವ ಬಗ್ಗೆ ನನ್ನ ಗಮನಕ್ಕೆ ತಂದರೆ, ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ರೈತರಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಡಿ.ಎಂ. ಬಸವರಾಜಪ್ಪ, ಫೀಲ್ಡ್ ಆಫೀಸರ್ ಮರಿಸ್ವಾಮಿ, ಕರಿಬಸಪ್ಪ, ಬಸವರಾಜ್, ನಸರುಲ್ಲಾ, ಗ್ರಾಪಂ ಸದಸ್ಯರಾದ ದೇವಣ್ಣ, ಬಸಣ್ಣ, 32 ಫಲಾನುಭವಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.

error: Content is protected !!