ಭವ್ಯ ಭಾರತ ನಿರ್ಮಾಣದಲ್ಲಿ ಯುವ ವಕೀಲರು ಭಾಗಿಯಾಗಲಿ

ಭವ್ಯ ಭಾರತ ನಿರ್ಮಾಣದಲ್ಲಿ ಯುವ ವಕೀಲರು ಭಾಗಿಯಾಗಲಿ

ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್‌

ದಾವಣಗೆರೆ, ಮಾ. 7 – ಸ್ವಾತಂತ್ರ್ಯ ಹೋರಾಟದಲ್ಲಿ ವಕೀಲರು ಪ್ರಮುಖ ಪಾತ್ರ ವಹಿಸಿದ್ದರು. ಈಗ ಭವ್ಯ ಭಾರತ ನಿರ್ಮಾಣದಲ್ಲಿ ಯುವ ವಕೀಲರು ಕೊಡುಗೆ ನೀಡಬೇಕಿದೆ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಹೇಳಿದರು.

ನಗರದ ಆರ್.ಎಲ್. ಕಾನೂನು ಕಾಲೇಜಿನಲ್ಲಿ ಇಂದು ಏರ್ಪಾಡಾಗಿದ್ದ ಕಾಲೇಜಿನ ಸುವರ್ಣ ಮಹೋತ್ಸವದ ಕಟ್ಟಡ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಈಗಿನ ಯುವ ಪೀಳಿಗೆಗೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವ ಅವಕಾಶ ದೊರೆಯದೇ ಇರಬಹುದು. ಆದರೆ, ಭವ್ಯ ಹಾಗೂ ಸಮೃದ್ಧ ಭಾರತವನ್ನು ನಿರ್ಮಿಸುವ ಅವಕಾಶ ದೊರೆತಿದೆ. ಈ ಸಾಮಾಜಿಕ ಹೊಣೆಗಾರಿಕೆಯಲ್ಲಿ ಭಾಗಿಯಾಗಬೇಕು ಎಂದವರು ಕರೆ ನೀಡಿದರು.

ಯಾವುದೇ ಶಿಕ್ಷಣ ಸಂಸ್ಥೆಯ ಬೆಳವಣಿಗೆಗೆ ಅರ್ಥ ಮಾಡಿಕೊಳ್ಳುವ ಆಡಳಿತ ಮಂಡಳಿ, ಚೈತನ್ಯಶೀಲ ಪ್ರಾಂಶುಪಾಲ, ಶ್ರದ್ಧೆಯುಳ್ಳ ಶಿಕ್ಷಕರು, ಶಿಸ್ತಿನ ವಿದ್ಯಾರ್ಥಿಗಳು ಹಾಗೂ ಸಹಕಾರ ನೀಡುವ  ಪಾಲಕರ ಅಗತ್ಯವಿದೆ ಎಂದು ನ್ಯಾಯಮೂರ್ತಿ ಪಾಟೀಲ್ ಹೇಳಿದರು.

 ಶಿಕ್ಷಕರಿಗೆ ವಿದ್ಯಾರ್ಥಿಗಳಿಂದ ಅಪಾರ ಗೌರವ ಸಿಗುತ್ತದೆ. ಶಿಷ್ಯರು ಎಷ್ಟೇ ದೊಡ್ಡ ಹುದ್ದೆಗೆ ತಲುಪಿದರೂ ತಮ್ಮ ಉತ್ತಮ ಶಿಕ್ಷಕರನ್ನು ಮರೆಯುವುದಿಲ್ಲ ಎಂದವರು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಬಾಪೂಜಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಅಥಣಿ ವೀರಣ್ಣ, ಜಾಗತೀಕರಣದ ನಂತರ ವಕೀಲ ವೃತ್ತಿಗೆ ಸಾಕಷ್ಟು ಬೇಡಿಕೆ ಬಂದಿದೆ. ಹೆಣ್ಣು ಮಕ್ಕಳಿಗೆ ಸಮಾನ ಆಸ್ತಿ ಹಕ್ಕು ನೀಡಿದ ನಂತರವೂ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಇದು ವಕೀಲರ ಬೇಡಿಕೆ ಹೆಚ್ಚಾಗಲು ಕಾರಣ ಎಂದರು.

ಆರ್.ಎಲ್. ಕಾನೂನು ಕಾಲೇಜಿಗೆ ಹೆಚ್ಚು ವಿದ್ಯಾರ್ಥಿಗಳು ಬರುತ್ತಿರುವ ಹಿನ್ನೆಲೆಯಲ್ಲಿ, 6 ಕೊಠಡಿಗಳನ್ನು ನಿರ್ಮಿಸಿರುವುದು ಉಪಯುಕ್ತವಾಗಲಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಸಮಾರಂಭದ
ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯ ಮೇಲೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆಗಿರುವ ಹಿರಿಯ ನ್ಯಾಯಾಧೀಶರಾದ ಮಹಾವೀರ ಕರೆಣ್ಣವರ್, ಬಾಪೂಜಿ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಡಾ.ಎಂ.ಜಿ. ಈಶ್ವರಪ್ಪ, ಆರ್.ಎಲ್. ಕಾನೂನು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಆರ್.ಎಲ್. ಉಮಾ ಶಂಕರ್, ಉದ್ಯಮಿ ಸಮರ್ಥ್ ಶಾಮನೂರು ಮತ್ತಿತರರು ಉಪಸ್ಥಿತರಿದ್ದರು.

ಆರ್.ಎಲ್. ಕಾನೂನು ಕಾಲೇಜಿನ ಪ್ರಾಂಶುಪಾಲ ಜಿ.ಎಸ್. ಯತೀಶ್ ಸ್ವಾಗತಿಸಿದರು.

ಕಿರಣ್ ಪ್ರಾರ್ಥಿಸಿದರೆ, ನಂದಿನಿ ಆರ್. ಪಾಟೀಲ್ ಹಾಗೂ ಕೆ.ಜಿ. ರೇವತಿ ನಿರೂಪಿಸಿದರು.

error: Content is protected !!