ನಗರದಲ್ಲಿ ಇಂದು ಬ್ರಹ್ಮಾಕುಮಾರೀಸ್ ಸಂಸ್ಥೆಯಿಂದ ವಿಶಿಷ್ಟ ಶಿವರಾತ್ರಿ ಕಾರ್ಯಕ್ರಮ

ನಗರದಲ್ಲಿ ಇಂದು ಬ್ರಹ್ಮಾಕುಮಾರೀಸ್ ಸಂಸ್ಥೆಯಿಂದ ವಿಶಿಷ್ಟ ಶಿವರಾತ್ರಿ ಕಾರ್ಯಕ್ರಮ

ಭಾರತೀಯರು ಆಚರಿಸಲ್ಪಡುವ ಎಲ್ಲಾ ಹಬ್ಬಗಳಿಗಿಂತಲೂ ಸರ್ವ ಶ್ರೇಷ್ಠ ಎನಿಸಿಕೊಂಡಿರುವ ಮಹಾಶಿವರಾತ್ರಿ ವಿಶೇಷ ಮಹತ್ವವನ್ನು ಪಡೆದುಕೊಂಡಿದ್ದು, ಈ ಹಬ್ಬವನ್ನು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ವಿಶಿಷ್ಟವಾಗಿ ಆಚರಿಸುತ್ತಿದೆ.

ಈಶ್ವರೀಯ ವಿಶ್ವವಿದ್ಯಾಲಯವು ದಾವಣಗೆರೆ ಮತ್ತು ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಹೊಂದಿರುವ ಸುಮಾರು 60ಕ್ಕೂ ಹೆಚ್ಚು ಗೀತಾ ಪಾಠಶಾಲೆಗಳಲ್ಲಿ ಪ್ರತೀ ದಿನವೂ ಒಂದೊಂದು ಕಡೆಯಂತೆ ಒಂದೂವರೆ ತಿಂಗಳುಗಳ ಕಾಲ ಶಿವರಾತ್ರಿ ಹಬ್ಬವನ್ನು ನಡೆಸುವುದರ ಮೂಲಕ ಅದರ ಅಧ್ಯಾತ್ಮಿಕ ರಹಸ್ಯವನ್ನು ಸಾರ್ವಜನಿಕರಿಗೆ ತಿಳಿಸುವ ಕಾರ್ಯ ಮಾಡುತ್ತಿದೆ.

ಶಿವಲಿಂಗಗಳೊಂದಿಗೆ ವಿಶ್ವ ಸದ್ಭಾವನಾ ಶಾಂತಿ ಯಾತ್ರೆಯನ್ನು ಇಂದು ಆಯೋಜಿಸಲಾಗಿದ್ದು, ಈ ಸಂದರ್ಭದಲ್ಲಿ ನಗರದೆಲ್ಲೆಡೆ ಹಾರಾಟ ಮಾಡುವ ಹೆಲಿಕ್ಯಾಪ್ಟರ್ ಮೂಲಕ ಶಿವರಾತ್ರಿ ಅರ್ಥಾತ್ ಪರಮಾತ್ಮನ ಸಂದೇಶವಿರುವ ಕರ ಪತ್ರಗಳ ವಿತರಣೆ ಮತ್ತು ಪುಷ್ಪ ವೃಷ್ಟಿ ಮಾಡಲಾಗುತ್ತದೆ. 

 ಇಂದು ಸಂಜೆ 4 ಗಂಟೆಗೆ ಮೋತಿ ವೀರಪ್ಪ ಪದವಿ ಪೂರ್ವ ಸರ್ಕಾರಿ ಕಾಲೇಜಿನ ಮೈದಾನದಿಂದ ಆರಂಭಗೊಳ್ಳುವ ಶಾಂತಿಯಾತ್ರೆಯು ರಾಜಬೀದಿಗಳಲ್ಲಿ ಸಂಚರಿಸಲಿದೆ ಎಂದು ಸಂಸ್ಥೆಯ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

`ಶಿವರಾತ್ರಿ’ ಎಂಬ ಶಬ್ಧದಲ್ಲಿ `ರಾತ್ರಿ’ ಎಂಬ ಪದವು ಅಜ್ಞಾನ, ಅಂಧಕಾರವನ್ನು ಸೂಚಿಸುತ್ತದೆ. ವರ್ತಮಾನ ಸಮಯದಲ್ಲಿ ನೈತಿಕ, ಮಾನವೀಯ ಹಾಗೂ ಅಧ್ಯಾತ್ಮಿಕ ಮೌಲ್ಯಗಳು ಪಾತಾಳಕ್ಕೆ ಕುಸಿದಿವೆ. ಮನಸ್ಸು ವಿಕೃತ ಗುಣಗಳಿಂದ ದೂಷಿತವಾಗಿದೆ. ಶಾಸ್ತ್ರಗಳಲ್ಲಿ ಇದನ್ನೇ `ಧರ್ಮಗ್ಲಾನಿ’ ಅಥವಾ `ಅಜ್ಞಾನದ ರಾತ್ರಿ’ ಎಂದು ವರ್ಣಿಸಲಾಗಿದೆ. ಜಗತ್ತಿನಲ್ಲಿರುವ ದುಃಖ – ಅಶಾಂತಿ ಮತ್ತು ಅಧರ್ಮವನ್ನು ತೊಡೆದು ಹಾಕಿ ಸದ್ಧರ್ಮವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಪರಂಜ್ಯೋತಿ ಸ್ವರೂಪನಾದ ಪರಮಾತ್ಮ ಶಿವತಂದೆ ಪುನಃ ಅವತರಿತ ನಾಗಿದ್ದಾನೆ. ಮನುಷ್ಯಾತ್ಮರೆಲ್ಲರೂ ಪ್ರೀತಿಯಿಂದ ಅವನನ್ನು ನೆನಪು ಮಾಡಿದಾಗಲೇ ಸುಖ-ಶಾಂತಿಯನ್ನು ಅವನಿಂದ ಪಡೆಯಲು ಸಾಧ್ಯ. ಇದೇ ಸಹಜ ರಾಜ ಯೋಗವಾಗಿದೆ. ಈ ಸಂದೇಶವನ್ನು ಸಾರುವ ಸದುದ್ಧೇಶ ದಿಂದ ಬ್ರಹ್ಮಾಕುಮಾರಿ ಸಂಸ್ಥೆಯು ಮಹಾಶಿವರಾತ್ರಿಯನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದೆ ಎಂದು ಹೇಳಿದರು.

ವಿಶ್ವವನ್ನು ಪರಿವರ್ತಿಸುವ ನಿಟ್ಟಿನಲ್ಲಿ 87 ವರ್ಷಗಳ ಹಿಂದೆ ಜ್ಯೋತಿರ್ಬಿಂದು ಸ್ವರೂಪನಾಗಿರುವ ಶಿವಪರಮಾತ್ಮನೇ ಸ್ವಯಂ ಸ್ಥಾಪಿಸಿರುವ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ಜಗತ್ತಿನಾದ್ಯಂತ ಸೇವೆ ಸಲ್ಲಿಸುತ್ತಿದೆ. ಈ ಸಂಸ್ಥೆಯು ದಾವಣಗೆರೆಯಲ್ಲಿ 1974ರಲ್ಲಿ ಸ್ಥಾಪಿತಗೊಂಡಿದ್ದು, ಇದೀಗ 50 ವರ್ಷಗಳ ಸಂಭ್ರಮಾಚರಣೆಯಲ್ಲಿದೆ. ಇದನ್ನು ವಿಶಿಷ್ಟವನ್ನಾಗಿಸುವ ದಿಸೆಯಲ್ಲಿ ಹೆಲಿಕ್ಯಾಪ್ಟರ್ ಮೂಲಕ ಪರಮಾತ್ಮನ ಸಂದೇಶವಿರುವ ಕರಪತ್ರವನ್ನು ಹಂಚಲಾಗುವುದು ಎಂದು ಅವರು ವಿವರಿಸಿದರು.

ಕೈಗಾರಿಕೋದ್ಯಮಿ ಎಸ್.ಎಸ್. ಗಣೇಶ್ ಅವರ ಸಹಕಾರದಿಂದ ಹೆಲಿಕ್ಯಾಪ್ಟರ್ ಸೇವೆ ನಡೆಯುತ್ತಿದೆ ಎಂದು ಲೀಲಾಜಿ ತಿಳಿಸಿದರು.

error: Content is protected !!