ಭೂಮಾಪನಾ ಮತ್ತು ಭೂದಾಖಲೆಗಳ ವಿಸ್ತೃತ ಜ್ಞಾನ ವಕೀಲರು ಮತ್ತು ನ್ಯಾಯಾಧೀಶರಿಗೂ ಅತ್ಯಗತ್ಯ

ಭೂಮಾಪನಾ ಮತ್ತು ಭೂದಾಖಲೆಗಳ ವಿಸ್ತೃತ ಜ್ಞಾನ ವಕೀಲರು ಮತ್ತು ನ್ಯಾಯಾಧೀಶರಿಗೂ ಅತ್ಯಗತ್ಯ

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ರಾಜೇಶ್ವರಿ ಎನ್. ಹೆಗಡೆ

ದಾವಣಗೆರೆ, ಮಾ. 6 – ಜಿಲ್ಲಾ ವಕೀಲರ ಸಂಘದಿಂದ ನಗರದ ವಕೀಲರ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಉಪನ್ಯಾಸ ಮಾಲಿಕೆ -6 `ಭೂಮಾಪನ ಮತ್ತು ಭೂ ದಾಖಲಾತಿಗಳು’ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ರಾಜೇಶ್ವರಿ ಎನ್. ಹೆಗಡೆ ಅವರು ಉದ್ಘಾಟನೆ  ನೆರವೇರಿಸಿ ಮಾತನಾಡಿ, ಅತ್ಯಂತ ಆಸಕ್ತಿಕರವು ಉಪಯುಕ್ತವೂ ಆದ ಭೂಮಾಪನಾ ಮತ್ತು ಭೂದಾಖಲೆಗಳ ವಿಸ್ತೃತ ಜ್ಞಾನ ವಕೀಲರು ಮತ್ತು ನ್ಯಾಯಾಧೀಶರಿಗೂ ಅತ್ಯಗತ್ಯವಾಗಿದೆ. ಈ ಬಗ್ಗೆ ಸಂಪನ್ಮೂಲ ತಜ್ಞರಿಂದ ಏರ್ಪಡಿಸಿರುವ ಉಪನ್ಯಾಸದ ಪೂರ್ಣ ಲಾಭ ಪಡೆಯಬೇಕೆಂದು ಪ್ರತಿಪಾದಿಸಿದರು. 

ಮುಖ್ಯ ಅತಿಥಿಗಳಾಗಿ ಮಾತನಾಡಿದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಆರ್.ಎನ್. ಪ್ರವೀಣ ಕುಮಾರ್ ಅವರು, ಭಾರತದಲ್ಲಿ ಆಡಳಿತ ನಡೆಸಿದ ಬ್ರಿಟಿಷ್ ಸರ್ವೆ ಅಧಿಕಾರಿಗಳು, ಭೂಮಾಪನವನ್ನು ಅತ್ಯಂತ ಶ್ರದ್ಧೆಯಿಂದ ಮಾಡಿರುವುದಕ್ಕೆ ಸರ್ವೆ ಮಾಡಿರುವ ಸ್ಥಳಗಳಲ್ಲಿ 5 ರಿಂದ 6 ಅಡಿ ಎತ್ತರದ ಕಲ್ಲುಗಳನ್ನು ನೆಲದಾಳದಲ್ಲಿ ಹೂಳಿರುವುದೇ ಸಾಕ್ಷಿಯಾಗಿದ್ದು, ಭೂ ವ್ಯಾಜ್ಯ ಪ್ರಕರಣಗಳನ್ನು ಇತ್ಯರ್ಥಪಡಿಸುವಲ್ಲಿ ಭೂಮಾಪನ ಮತ್ತು ಭೂದಾಖಲೆಗಳು ತುಂಬಾ ಉಪಯುಕ್ತ ಎಂದು ತಿಳಿಸಿದರು. 

ಕೌಟುಂಬಿಕ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶರಾದ ಬಿ. ದಶರಥ್ ಮಾತನಾಡಿ, ಭೂಮಾಪನಕ್ಕೆ ಸಂಬಂಧಿಸಿದ ಪಾರಿಭಾಷಿಕ ಶಬ್ದಗಳನ್ನು ಹಾಗೂ ಅಳತೆಯ ತಾಂತ್ರಿಕ ವಿಷಯಗಳನ್ನು ಮನದಟ್ಟು ಮಾಡಿಕೊಂಡಲ್ಲಿ ಪಾಟಿ ಲಿವರ್‌ ಸವಾಲಿನ ಸಂದರ್ಭಗಳಲ್ಲಿ ವಕೀಲರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದರು. 

ದಾವಣಗೆರೆ ಭೂ ಮಾಪನಾ ಇಲಾಖೆ ನಿವೃತ್ತ ಪರ್ಯಾಯ ವೀಕ್ಷಕರಾದ ಡಾ. ಎನ್. ರಂಗನಾಥ್ ಅವರು ಮಾತನಾಡಿ, ಕ್ರಿ.ಶ.1620ರಷ್ಟು ಹಿಂದೆಯೇ ಭೂಮಾಪನ ಪ್ರಕ್ರಿಯೆ ಚಾಲನೆಯಲ್ಲಿದೆ.  ಆಡಳಿತ ನಿಯಂತ್ರಣ, ಭೂಕಂದಾಯ ನಿಗದಿಪಡಿಸಲು ಬೇಕಾಗಿರುವ ನಕ್ಷೆಗಳ ರಚನೆ, ಗಡಿಗಳ ರಕ್ಷಣೆ ಭೂಮಾಪನದ ಪ್ರಮುಖ ಉದ್ದೇಶವಾಗಿದ್ದವು. ಮೂಲಮಾಹಿತಿಗಳು ಅಂದಿನಿಂದ ಇಂದಿನವರೆಗೂ ಉಳಿದುಬಂದಿರುವುದು ಗಮನಾರ್ಹ ಎಂದರು. ಕ್ರಿ.ಶ. 1620ರಲ್ಲಿ ಎಡ್ಮಂಡ್ ಗಂಟೇರ್ ಎಂಬ ಗಣಿತಜ್ಞರು ರೂಪಿಸಿದ್ದ 33 ಅಡಿ ಉದ್ದದ ಕಬ್ಬಿಣದ ಸರಪಳಿ ಒಂದು ಕೌತುಕದ ಸಂಗತಿಯಾಗಿದ್ದು, ನಿರ್ದಿಷ್ಟ ಆಕಾರವಿಲ್ಲದ ಜಮೀನುಗಳನ್ನು ಅಳೆಯಲು ರೂಪಿಸಿದ ತಂತ್ರಗಳು ಅಚ್ಚರಿಯಾಗುವಂತವು ಎಂದು ತಿಳಿಸಿದರು. 

ಪ್ರತಿ 30 ವರ್ಷಗಳಿಗೊಮ್ಮೆ ಪುನರ್ ಸರ್ವೆ ಕೆಲಸ ನಡೆಯಬೇಕೆಂಬುದು ಒಂದು ಪದ್ಧತಿ. ಆದರೆ ಭಾರತದಲ್ಲಿ ಕಳೆದ 150 ವರ್ಷಗಳಿಂದ ಪುನರ್ ಸರ್ವೆಯಾಗದೇ ಇರುವುದರಿಂದ ಭೂಮಾಪನದಲ್ಲಿ ಅನೇಕ ಗೊಂದಲಗಳು ಉಂಟಾಗಿ ವ್ಯಾಜ್ಯ ವಿವಾದಗಳು ಹೆಚ್ಚಾಗುತ್ತಿವೆ ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್. ಅರುಣ್‍ಕುಮಾರ್ ಅವರು, ನ್ಯಾಯವಾದಿಗಳ ವೃತ್ತಿ ಕೌಶಲ್ಯದ ವೃದ್ದಿಗಾಗಿ ಸ್ಥಳೀಯ ಪ್ರತಿಭೆಗಳನ್ನು ಉಪಯೋಗಿಸಿಕೊಂಡು ಹಲವಾರು ಉಪನ್ಯಾಸಗಳನ್ನು ಮುಂದೆಯೂ ಆಯೋಜಿಸುವುದಾಗಿ ತಿಳಿಸಿದರು. 

ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸಿ.ಜೆ.ಎಂ. ಶಿವಪ್ಪ ಗಂಗಪ್ಪ ಸಲಗೆರೆ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಕಾರ್ಯಕ್ರಮದಲ್ಲಿ  ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷರಾದ ಜಿ.ಕೆ.ಬಸವರಾಜ್ ಗೋಪನಾಳ್, ಕಾರ್ಯದರ್ಶಿ ಎಸ್. ಬಸವರಾಜ್, ಸಹ ಕಾರ್ಯದರ್ಶಿ ಎ.ಎಸ್. ಮಂಜುನಾಥ್. ಕಾರ್ಯಕಾರಿ ಸಮಿತಿ ಸದಸ್ಯರಾದ ಎಂ. ಚೌಡಪ್ಪ, ಟಿ.ಹೆಚ್. ಮಧುಸೂದನ್, ಎಲ್. ನಾಗರಾಜ್, ಕೆ.ಎಂ. ನೀಲಕಂಠಯ್ಯ,  ಎಂ. ರಾಘವೇಂದ್ರ, ಜಿ.ಜೆ. ಸಂತೋಷ್ ಕುಮಾರ್, ಶ್ರೀಮತಿ ಭಾಗ್ಯಲಕ್ಷ್ಮಿ, ಬಿ. ಅಜ್ಜಯ್ಯ ಹಾಗೂ ಇತರರು ಹಾಜರಿದ್ದರು.  

error: Content is protected !!