ಸಂಗೀತ, ಸಾಹಿತ್ಯಕ್ಕೆ ಮಾತ್ರ ಮನಸ್ಸು ಬೆಸೆಯುವ ಶಕ್ತಿ : ಮಹಿಮ ಪಟೇಲ್

ಸಂಗೀತ, ಸಾಹಿತ್ಯಕ್ಕೆ ಮಾತ್ರ ಮನಸ್ಸು ಬೆಸೆಯುವ ಶಕ್ತಿ : ಮಹಿಮ ಪಟೇಲ್

ಮನ ಸೆಳೆದ ವಿಶಿಷ್ಟ ಕಾರ್ಯಕ್ರಮ

ಯಾವುದೇ ಅಬ್ಬರದ ಮ್ಯೂಸಿಕ್,  ಲೈಟಿಂಗ್ ಇರಲಿಲ್ಲ. ಸಭಾ ಭವನವನ್ನು ದೀಪಗಳನ್ನು ಆರಿಸಲಾ ಗಿತ್ತು. ನಸುಗತ್ತಲಿನಲ್ಲಿ ಹಣತೆಯ ಮಂದ ಬೆಳಕಿನ  ಮುಂದೆ‌ ನಾದ ಮಣಿ ನಾಲ್ಕೂರು ಸಂಗೀತ ಪ್ರಸ್ತುತ ಪಡಿಸಿದರು. ಏಕತಾರಿಯ ನಾದದೊಂದಿಗೆ ಅನುರಣಿ ಸಿದ ಸಂತ, ಶರಣ, ಸೂಪಿಗಳ ವಿಶಿಷ್ಟ ಗೀತೆಗಳ ಗಾಯನ ನೂರಾರು ಶ್ರೋತೃಗಳಿಗೆ ಮುದ ನೀಡಿದವು.

 ದಾವಣಗೆರೆ, ಮಾ. 6 – ‘ಕದಡಿದ ಮನಸ್ಸುಗಳನ್ನು ಬೆಸೆಯುವ ಶಕ್ತಿ ಸಂಗೀತ ಮತ್ತು ಸಾಹಿತ್ಯಕ್ಕೆ ಮಾತ್ರ ಇದೆ ಎಂದು ಮಾಜಿ ಶಾಸಕ ಮಹಿಮಾ ಜೆ. ಪಟೇಲ್ ಪ್ರತಿಪಾದಿಸಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಸೋಮವಾರ ನಡೆದ ಕತ್ತಲಿನ ಹಾಡು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

‘ಆಧುನಿಕ ಸಮಾಜದಲ್ಲಿ ಮನುಷ್ಯ ದಿನ ನಿತ್ಯ ರಾಜಕಾರಣ, ಹಣದ  ಹಿಂದೆಯೇ ಓಡುತ್ತಿದ್ದಾನೆ. ನಮ್ಮನ್ನು ನಾವು ಉಳಿಸಿಕೊಳ್ಳುವುದೇ ಇವತ್ತಿನ ಬದುಕಿನ ಸವಾಲಾಗಿಸಿದೆ.  ಪರಸ್ಪರ ದ್ವೇಷ, ಅಸೂಯೆ ಹೆಚ್ಚಾಗಿ ಯಾರಲ್ಲೂ ನೆಮ್ಮದಿ ಉಳಿದಿಲ್ಲ. ಇದು ಕೇವಲ ಕರ್ನಾಟಕದ ಭಾರತದ ಸಮಸ್ಯೆಯಲ್ಲ ಇಡೀ ವಿಶ್ವದ ಸಮಸ್ಯೆಯಾಗಿದೆ.  ಸಮಾಜದಲ್ಲಿ ಕೇವಲ ಬದಲಾವಣೆ ಆದರೆ ಸಾಲದು ಪರಿವರ್ತನೆ ಆಗಬೇಕು. ಜಾತಿ, ಸ್ವಾರ್ಥ ರಹಿತವಾಗಿ ಚಿಂತಿಸುವ, ಬದ್ಧತೆ ಹೊಂದಿರುವ ಕೆಲವೇ ಜನ ಪ್ರಾಮಾಣಿಕ ಪ್ರಯತ್ನ ಮಾಡಿದರೆ ಸಮಾಜದಲ್ಲಿ ಪರಿವರ್ತನೆ ತರಬ ಹುದು.  ಸಮಾಜಕ್ಕೆ ಕೊಡುಗೆ ಕೊಡಲು ವಿದ್ಯಾವಂತರು, ಪ್ರಬುದ್ಧರು ಮುಂದಾಗಬೇಕಿದ್ದು, ಈ ನಿಟ್ಟಿನಲ್ಲಿ ಸಮಾನ ಮನಸ್ಕರನ್ನು ಒಗ್ಗೂಡಿಸುವ  ಪ್ರಯತ್ನ ಸಾಗಿದೆ ಎಂದರು.

ಸಮಾಜ ಹೇಗಿದೆಯೋ ಹಾಗೆಯೇ ಸ್ವೀಕರಿಸಿ, ಅದಕ್ಕೆ ನಾವೇನಾದರೂ ಕೊಡುಗೆ ನೀಡುವ ಸಾಧ್ಯತೆ ಕುರಿತು ಚಿಂತಿಸ ಬೇಕಿದೆ. ವಿಶ್ವಾದ್ಯಂತ ಸ್ವಯಂ ಸೇವೆಯ ಭಾವನೆ ಹೊಂದಿ ದವರ ಒಗ್ಗೂಡಿಸುವ ಯತ್ನ ನಡೆಸಲು ಚಿಂತಿಸಲಾಗಿದೆ. ಪ್ರೀತಿ, ಸಂತೋಷಗಳು ಮನುಷ್ಯನ ಮೂಲ ಸ್ವಭಾವ. ದ್ವೇಷ, ಅಸೂಯೆ, ನಿಂದನೆ ಇವು ಶಾಶ್ವತವಲ್ಲ ಎಂದರು.

ಕರುಣಾ ಜೀವ ಟ್ರಸ್ಟ್ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ ಮಾತನಾಡಿ, ಆರೋಗ್ಯ ಮತ್ತು ಆನಂದ ಸಮಾಜದಿಂದ ಕಣ್ಮರೆಯಾಗಿವೆ. ಯುವಕರು ದುಶ್ವಟಕ್ಕೆ ಬಲಿಯಾಗಿ, ಬಹು ಚಿಕ್ಕ ವಯಸ್ಸಿನಲ್ಲಿಯೇ ವಿವಿಧ ರೋಗಗಳಿಂದ ನೆರಳುತಿದ್ದಾರೆ. ಸಜ್ಜನರ ನಿಷ್ಕ್ರಿಯತೆ, ದುರ್ಜನರ ಕ್ರಿಯಾಶೀಲತೆ ಸಮಾಜಕ್ಕೆ ಅಪಾಯಕರ. ಅಸೂಯೆ, ಅಜ್ಞಾನಗಳಿಂದ  ಸಮಾಜ ದುರ್ಬಲವಾಗಿದೆ.  ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ಎಲ್ಲರಿಗೂ ಆರೋಗ್ಯ ಎಲ್ಲರಿಗೂ ಅರಿವು ನಮ್ಮ ಕಾರ್ಯಕ್ರಮವನ್ನು ಹಾಕಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕರುಣಾ ಕಲ್ಯಾಣ ಜೀವ ಟ್ರಸ್ಟ್,  ಜೆ. ಎಚ್.  ಪಟೇಲ್ ಫೌಂಡೇಶನ್‌ಗಳು ಕಾರ್ಯಕ್ರಮ ಪ್ರಾಯೋಜಿಸಿದ್ದವು.

error: Content is protected !!