ಮಲೇಬೆನ್ನೂರಿನಲ್ಲಿ ನಾಡಿದ್ದು 108 ಶಿವಲಿಂಗಗಳ ಬೃಹತ್ ಶೋಭಾಯಾತ್ರೆ : ಹೆಲಿಕ್ಯಾಪ್ಟರ್‌ನಿಂದ ಪುಷ್ಪವೃಷ್ಟಿ

ಮಲೇಬೆನ್ನೂರಿನಲ್ಲಿ ನಾಡಿದ್ದು 108 ಶಿವಲಿಂಗಗಳ  ಬೃಹತ್ ಶೋಭಾಯಾತ್ರೆ : ಹೆಲಿಕ್ಯಾಪ್ಟರ್‌ನಿಂದ ಪುಷ್ಪವೃಷ್ಟಿ

ಮಲೇಬೆನ್ನೂರು, ಮಾ. 5- ಇಲ್ಲಿನ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಮಹಾಶಿವರಾತ್ರಿ ಪ್ರಯುಕ್ತ ಇದೇ ದಿನಾಂಕ 8ರ ಶುಕ್ರವಾರ ಮಲೇಬೆನ್ನೂರು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ 108 ಶಿವಲಿಂಗಗಳ ಬೃಹತ್ ಶೋಭಾ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಜಯೋಗಿನಿ ಬ್ರಹ್ಮಾಕುಮಾರಿ ಮಂಜುಳಾಜೀ ತಿಳಿಸಿದರು.

ಮಂಗಳವಾರ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿನಾಂಕ 8ರ ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಮಲೇಬೆನ್ನೂರಿನ ನೀರಾವರಿ ಇಲಾಖೆ ಆವರಣದಿಂದ ಶೋಭಾಯಾತ್ರೆ ಆರಂಭವಾಗಲಿದೆ.

ಅಲ್ಲಿಂದ ಕೊಮಾರನಹಳ್ಳಿ, ಹಾಲಿವಾಣ, ಹರಳಹಳ್ಳಿ, ಯರಲಬನ್ನಿಕೋಡು, ಮಲ್ಲನಾಯ್ಕನಹಳ್ಳಿ, ನೆಹರು ಕ್ಯಾಂಪ್, ಬೂದಿಹಾಳ್, ಕುಣೆಬೆಳಕೆರೆ, ನಿಟ್ಟೂರು, ಕುಂಬಳೂರು ಮಾರ್ಗವಾಗಿ ಮಧ್ಯಾಹ್ನ 1 ಗಂಟೆಗೆ ಮಲೇಬೆನ್ನೂರಿಗೆ ಆಗಮಿಸಲಿರುವ ಶೋಭಾಯಾತ್ರೆಗೆ ಹೆಲಿಕ್ಯಾಪ್ಟರ್ ಮೂಲಕ ಪುಷ್ಪಾರ್ಚನೆ ಮಾಡಲಾಗುವುದು.ಹೆಲಿಕ್ಯಾಪ್ಟರ್ ಮೂಲಕ ಶಿವಸಂದೇಶ ಸಾರುವ ಕರ ಪತ್ರಗಳನ್ನು ಮಲೇಬೆನ್ನೂರು ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಹಾಕುವ ಕಾರ್ಯಕ್ರಮವಿದೆ.

ಮಧ್ಯಾಹ್ನ 3 ಗಂಟೆಗೆ ನಂತರ ಶೋಭಾಯಾತ್ರೆಯು ಮಲೇಬೆನ್ನೂರಿನಿಂದ ಜಿಗಳಿ, ಯಲವಟ್ಟಿ, ಲಕ್ಕಶೆಟ್ಟಿಹಳ್ಳಿ, ಹೊಳೆಸಿರಿಗೆರೆ, ಕೆ.ಎನ್. ಹಳ್ಳಿ, ಕೊಕ್ಕನೂರು, ಹಳ್ಳಿಹಾಳ್, ಜಿ. ಬೇವಿನಹಳ್ಳಿ, ವಡೆಯರ ಬಸಾಪುರ ಗ್ರಾಮಗಳಲ್ಲಿ ಸಂಚರಿಸಿ, ಸಂಜೆ 7 ಗಂಟೆ ಸುಮಾರಿಗೆ  ಮಲೇಬೆನ್ನೂರಿನ ವೀರಭದ್ರೇಶ್ವರ ದೇವಸ್ಥಾನ ತಲುಪಲಿದ್ದು, ಮಾರ್ಚ್ 22ರವರೆಗೆ ಭಕ್ತರ ದರ್ಶನಕ್ಕಾಗಿ 108 ಶಿವಲಿಂಗಗಳನ್ನು ದೇವಸ್ಥಾನದಲ್ಲಿಯೇ ಇಡಲಾಗುವುದೆಂದು ಅವರು ತಿಳಿಸಿದರು.

ಇದೇ ಮೊದಲ ಬಾರಿಗೆ 108 ಶಿವಲಿಂಗಗಳ ಬೃಹತ್ ಶೋಭಾಯಾತ್ರೆಯನ್ನು ಹಮ್ಮಿಕೊಂಡಿದ್ದೇವೆ. ಅಲ್ಲದೇ ಹೆಲಿಕ್ಯಾಪ್ಟರ್ ಮೂಲಕ ಪುಷ್ಪಾರ್ಚನೆಗೆ ವ್ಯವಸ್ಥೆ ಮಾಡಲಾಗಿದೆ ಎಂದು  ಮಂಜುಳಾಜೀ ವಿವರಿಸಿದರು.

ಹಿರಿಯರಾದ ಬಿ. ಪಂಚಪ್ಪ, ಜಿಗಳಿ ಇಂದೂಧರ್, ಬಿ.ಕೆ. ದೊಡ್ಡಬಸಣ್ಣ, ಹೆಚ್.ಎಸ್. ವೀರಭದ್ರಯ್ಯ, ಹೆಚ್.ಎಸ್. ರುದ್ರಯ್ಯ ಸುದ್ದಿಗೋಷ್ಠಿಯಲ್ಲಿದ್ದರು.

error: Content is protected !!