ಸ್ಲಂ ನಿವಾಸಿಗಳಿಗೆ ವಸತಿ ಹಕ್ಕು-ಸೌಲಭ್ಯ

ಸ್ಲಂ ನಿವಾಸಿಗಳಿಗೆ ವಸತಿ ಹಕ್ಕು-ಸೌಲಭ್ಯ

ನೂತನ ಕಾಯ್ದೆ ಜಾರಿಗೆ ತರಲು ಐಸಾಕ್ ಅಮೃತ್‌ರಾಜ್‌ ಆಗ್ರಹ

ದಾವಣಗೆರೆ, ಮಾ. 4 – ಕೊಳಚೆ ಪ್ರದೇಶದ ನಿವಾಸಿಗಳಿಗೆ ಅವರಿರುವ ಜಾಗದ ಪೂರ್ಣ ಹಕ್ಕು ನೀಡಲು ಹಾಗೂ ಮೂಲಭೂತ ಸೌಲಭ್ಯ ಕಲ್ಪಿಸಲು ನೂತನ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಕಾಯ್ದೆ – 2023 ಜಾರಿಗೆ ತರಬೇಕು ಎಂದು ಸ್ಲಂ ಜನರ ಸಂಘಟನೆಯ ರಾಜ್ಯ ಮುಖಂಡ ಐಸಾಕ್ ಅಮೃತ್‌ರಾಜ್‌ ಒತ್ತಾಯಿಸಿದ್ದಾರೆ.

ನಗರದ ರೋಟರಿ ಬಾಲಭವನದಲ್ಲಿ ಸ್ಲಂ ಜನರ ಸಂಘಟನೆ – ಕರ್ನಾಟಕ ಆಕ್ಷನ್ ಏಡ್ ಅಸೋಸಿಯೇಷನ್, ನೆರಳು ಬೀಡಿ ಕಾರ್ಮಿಕರ ಯೂನಿಯನ್ ಹಾಗೂ ಜಿಲ್ಲಾ ಪ್ರಗತಿಪರ  ಸಂಘಟನೆಗಳ ಒಕ್ಕೂಟಗಳ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಸ್ಲಂ ಕಾಯ್ದೆ ಕುರಿತ ಸಮಾಲೋಚನಾ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಈಗಿರುವ ಕಾಯ್ದೆಗಳಲ್ಲಿ ಸ್ಲಂ ಜನರಿಗೆ ತಾವಿರುವ ಭೂಮಿಯ ಮೇಲೆ ಹಕ್ಕಿಲ್ಲ. ಈ ಹಕ್ಕು ಕೊಡಲು ಇರುವ ತೊಡಕುಗಳನ್ನು ಜಾರಿಗೆ ತರಲು ಹೊಸ ಕಾಯ್ದೆಯ ಅಗತ್ಯವಿದೆ ಎಂದರು.

ಸ್ಲಂಗಳನ್ನು ಗುರುತಿಸುವ ಅರ್ಜಿ ಬಂದ ಆರು ತಿಂಗಳಲ್ಲಿ, ಸ್ಲಂ ಘೋಷಣೆಯಾಗಬೇಕು. ನಂತರ ಅಲ್ಲಿರುವವರಿಗೆ ಗುರುತಿನ ಚೀಟಿ ಕೊಟ್ಟು, ವಸತಿ ಭೂಮಿಯ ಸಂಪೂರ್ಣ ಹಕ್ಕು ನೀಡಬೇಕು. ಇದಕ್ಕಾಗಿ ಹೊಸ ಕಾಯ್ದೆಯ ಅಗತ್ಯವಿದೆ ಎಂದರು.

ಇದರ ಜೊತೆಗೆ ಕೊಳಚೆ ಪ್ರದೇಶಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸುವ ಹೊಣೆಯನ್ನು ಸ್ಥಳೀಯ ಆಡಳಿತ ಹಾಗೂ ಕೊಳಚೆ ಪ್ರದೇಶ ಗಳಿಗೆ ವಹಿಸಬೇಕು. ಕೊಳಚೆ ಪ್ರದೇಶದ ನಿವಾಸಿ ಗಳನ್ನು ಒತ್ತಾಯದಿಂದ ಒಕ್ಕಲೆಬ್ಬಿಸಬಾರದು ಎಂದು ಅಮೃತ್‌ರಾಜ್‌ ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬೆಂಗಳೂರಿನ ಆಕ್ಷನ್ ಏಡ್ ಅಸೋಸಿಯೇ ಷನ್ ಇಂಡಿಯಾದ ನಂದಿನಿ, ಈಗಿರುವ ಕರ್ನಾ ಟಕ ಕೊಳೆಗೇರಿ ಪ್ರದೇಶ (ಸುಧಾರಣೆಗಳು ಮತ್ತು ನಿರ್ಮೂಲನೆ) ಕಾಯ್ದೆಯನ್ನು ಕೊಳಚೆ ನಿವಾಸಿಗಳ ಹಿತಕ್ಕಾಗಿ ರೂಪಿಸಿಲ್ಲ. ಸ್ಲಂ ನಿವಾಸಿ ಗಳನ್ನು ನಗರದ ಹುಣ್ಣಿನಂತೆ ಕಾಣುವ ಹಾಗೂ ಸ್ಲಂಗಳನ್ನು ನಿವಾರಿಸಬೇಕೆಂಬ ಉದ್ದೇಶದಿಂದ ಈ ಕಾಯ್ದೆ ರೂಪಿಸಲಾಗಿದೆ ಎಂದರು.

ಸ್ಲಂ ಜನರನ್ನು ಹುಣ್ಣಿನಂತೆ ಕಾಣುವ ಇಲ್ಲವೇ ಅವರ ಬಗ್ಗೆ ಕರುಣೆ ತೋರುವ ಧೋರಣೆ ಬೇಕಿಲ್ಲ. ಕೊಳಚೆ ನಿವಾಸಿಗಳು ನಗರಗಳನ್ನು ಕಟ್ಟುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಅವರಿಗೆ ಸಂವಿಧಾನಿಕವಾಗಿ ಅವರ ಹಕ್ಕುಗಳನ್ನು ನೀಡುವ ಕಾಯ್ದೆ ಬೇಕಿದೆ ಎಂದು ಹೇಳಿದರು.

ಮುಂದಿನ 10-20 ವರ್ಷಗಳಲ್ಲಿ ಭಾರತ ಜಿ.ಡಿ.ಪಿ.ಯಲ್ಲಿ ವಿಶ್ವದ ಮೂರನೇ ಅತಿ ದೊಡ್ಡ ದೇಶವಾಗಲಿದೆ. ಈ ಪ್ರಗತಿಗೆ ನೆರವಾಗುತ್ತಿರುವ ಸ್ಲಂಗಳಲ್ಲಿರುವ ಶ್ರಮಿಕರನ್ನು ಸರ್ಕಾರಗಳು ಪರಿ ಗಣಿಸುತ್ತಿಲ್ಲ. ಐ.ಟಿ. – ಬಿ.ಟಿ. ಉದ್ಯಮದಲ್ಲಿರುವ ವರನ್ನೇ ತೆರಿಗೆದಾರರು ಎಂದು ಪರಿಗಣಿಸಲಾ ಗುತ್ತಿದೆ ಎಂದು ನಂದಿನಿ ವಿಷಾದಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸ್ಲಂ ಜನರ ಸಂಘಟನೆಯ ಎಂ. ಕರಿಬಸಪ್ಪ, ಇತ್ತೀಚೆ ಗಷ್ಟೇ ರಾಮಕೃಷ್ಣ ಹೆಗಡೆ ನಗರದ ನಿವಾಸಿಗಳನ್ನು ನಗರದಿಂದ 11 ಕಿ.ಮೀ. ದೂರಕ್ಕೆ ಎತ್ತಂಗಡಿ ಮಾಡಲಾಗಿದೆ. 40 ವರ್ಷಗಳಿಗೂ ಹೆಚ್ಚು ಕಾಲ ಹೆಗಡೆ ನಗರದಲ್ಲಿದ್ದವರಿಗೆ ಯಾವುದೇ ಪುನರ್ವ ಸತಿ ಕಲ್ಪಿಸಿಲ್ಲ. ಇದೇ ರೀತಿಯ ಅಪಾಯ ಇತರೆ ಕೆಲ ಸ್ಲಂಗಳಿಗೂ ಇದೆ ಎಂದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್. ಅರುಣ್ ಕುಮಾರ್ ಮಾತನಾಡಿ, ಪ್ರಸ್ತಾಪಿತ ಕಾಯ್ದೆಯು ಜನಮುಖಿಯಾಗಿದೆ. ಸ್ಲಂ ಜನರಿಗೆ ಅನುಕೂಲವಾಗುವ ಈ ಕಾಯ್ದೆಯನ್ನು ಆದಷ್ಟು ಶೀಘ್ರ ಸರ್ಕಾರ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ನೆರಳು ಬೀಡಿ ಕಾರ್ಮಿಕರ ಯೂನಿಯನ್ ಅಧ್ಯಕ್ಷೆ ಜಬೀನಾ ಖಾನಂ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಯಾಗಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು, ಮುಖಂಡರಾದ ಬುಳ್ಳಾಪುರ ಹನುಮಂತಪ್ಪ, ಎಲ್.ಆರ್. ಚಂದ್ರಪ್ಪ, ರೇಷ್ಮಾ ಬಾನು, ಫರೀದಾ ಬಾನು ಮತ್ತಿತರರು ಉಪಸ್ಥಿತರಿದ್ದರು.

error: Content is protected !!