ಶ್ರೀ ಗುರು ಕೊಟ್ಟೂರೇಶ್ವರ ರಥೋತ್ಸವಕ್ಕೆ ಜನಸಾಗರ

ಶ್ರೀ ಗುರು ಕೊಟ್ಟೂರೇಶ್ವರ ರಥೋತ್ಸವಕ್ಕೆ ಜನಸಾಗರ

ಕೊಟ್ಟೂರು, ಮಾ.4- ಶ್ರೀ ಕ್ಷೇತ್ರ ಕೊಟ್ಟೂರಿನ ಪವಾಡ ಪುರುಷ ಶ್ರೀ ಗುರು ಕೊಟ್ಟೂರೇಶ್ವರ  ಸ್ವಾಮಿ ಮಹಾ ರಥೋತ್ಸವವು ಸೋಮವಾರ ಸಂಭ್ರಮದಿಂದ ನೆರವೇರಿತು. 

ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ನೆರೆಯ ರಾಜ್ಯಗಳಿಂದ  ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಜಾತ್ರೆಗೆ ಆಗಮಿಸಿದ್ದರು. ತಮ್ಮ ಇಷ್ಟಾರ್ಥ ಈಡೇರಿಕೆಗೆ ಭಕ್ತರು ಕಾಲ್ನಡಿಗೆ ಮೂಲಕ ಆಗಮಿಸಿ, ಗುರು ಕೊಟ್ಟೂರೇಶ್ವರನ ಕೃಪೆಗೆ ಪಾತ್ರರಾದರು.

ರಥೋತ್ಸವಕ್ಕೂ ಮೊದಲು ಸ್ವಾಮಿಯ ಮೂರ್ತಿಯನ್ನು ಬೆಳ್ಳಿ ಪಲ್ಲಕ್ಕಿಯಲ್ಲಿ ಕೂರಿಸಿ ಮೆರವಣಿಗೆ ಮಾಡಲಾಗುತ್ತದೆ. ದಿನವಿಡೀ ಉಪವಾಸ ಇರುವ ದಲಿತ ಮಹಿಳೆಯಿಂದ ಪಲ್ಲಕ್ಕಿಯಲ್ಲಿರುವ ಸ್ವಾಮಿಗೆ ಕಳಸದಾರತಿ, ಧೂಪದಾರತಿ ಮಾಡಲಾಗುತ್ತದೆ. ನಂತರ ಪಲ್ಲಕ್ಕಿ ಉತ್ಸವ ತೇರು ಬಜಾರ್ ಮೂಲಕ ಸಾಗಿ ರಥೋತ್ಸವ ಜರುಗುವ ಸ್ಥಳಕ್ಕೆ ಬರುತ್ತದೆ.

ಸಮಾಳ, ನಂದಿಕೋಲು ಸೇರಿದಂತೆ ಮತ್ತಿತರೆ ವಾದ್ಯಗಳು ರಥೋತ್ಸವಕ್ಕೆ ಮೆರಗು ನೀಡಿದವು. ಪಲ್ಲಕ್ಕಿಯನ್ನೂ ರಥದ ಸುತ್ತಲೂ ಐದು ಸುತ್ತು ಪ್ರದಕ್ಷಿಣೆ ಹಾಕಿದ ಬಳಿಕ ರಥದ ಒಳಗೆ ಸ್ವಾಮಿಯನ್ನು ಕೊಂಡೊಯ್ಯಲಾಗುತ್ತದೆ. ನಂತರವೇ ರಥೋತ್ಸವ ಜರುಗುತ್ತದೆ.

ರಥೋತ್ಸವಕ್ಕೆ ಚಾಲನೆ ಸಿಗುತ್ತಿದ್ದಂತೆ ಭಕ್ತರು `ಕೊಟ್ಟೂರು ದೊರೆಯೇ, ನಿನಗಾರು ಸರಿಯೇ, ಸರಿ ಸರಿ ಅಂದವರ ಹಲ್ಲು ಮುರಿವೆ ಬಹುಪರಾಕ್’ ಎಂದು ಘೋಷಣೆ ಮೊಳಗಿಸಿದರು. ಈ ಸಂದರ್ಭದಲ್ಲಿ ಭಕ್ತರು ಬಾಳೆ,ಹಣ್ಣುಗಳನ್ನು ರಥಕ್ಕೆ ಎಸೆದು ಭಕ್ತಿ ಸಮರ್ಪಿಸಿದರು.

error: Content is protected !!