ಭ್ರಷ್ಟಾಚಾರರಹಿತ ಆಡಳಿತಕ್ಕಾಗಿ ಕೆಆರ್‌ಎಸ್‌ ಬೆಂಬಲಿಸಿ

ಭ್ರಷ್ಟಾಚಾರರಹಿತ ಆಡಳಿತಕ್ಕಾಗಿ ಕೆಆರ್‌ಎಸ್‌ ಬೆಂಬಲಿಸಿ

ದಾವಣಗೆರೆ, ಫೆ.29- ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಹಾಗೂ ಕುಟುಂಬ ರಾಜಕಾರಣದ ಮೂಲಕ ಪ್ರಜಾಪ್ರಭುತ್ವದ ಆಶಯಗಳಿಗೆ ಧಕ್ಕೆ ತರುತ್ತಿರುವ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳನ್ನು ತಿರಸ್ಕರಿಸಿ ನ್ಯಾಯ, ನೀತಿ, ಧರ್ಮ ಹೇಳುವ ಕೆಆರ್‌ಎಸ್ ಪಕ್ಷವನ್ನು ಬೆಂಬಲಿಸುವಂತೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (ಕೆಆರ್‌ಎಸ್)ದ ಅಧ್ಯಕ್ಷ ರವಿಕೃಷ್ಣ ರೆಡ್ಡಿ ಕರೆ ನೀಡಿದ್ದಾರೆ.

`ಕರ್ನಾಟಕಕ್ಕಾಗಿ ನಾವು’ ಎನ್ನುವ ಉದ್ದೇಶದಿಂದ ಫೆ.19ರಿಂದ ಹಮ್ಮಿಕೊಂಡಿರುವ 3 ಸಾವಿರ ಕಿ.ಮೀ. ಬೈಕ್‍ ಜಾಥಾ ಗುರುವಾರ ನಗರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ನಗರದ ಜಯದೇವ ವೃತ್ತದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಜಿಲ್ಲೆ ಸೇರಿದಂತೆ, ಇಡೀ ರಾಜ್ಯದಾದ್ಯಂತ ರಾಜಕಾರಣ ಕೆಲವು ಕುಟುಂಬಗಳ ಹಿಡಿತದಲ್ಲಿ ಇದ್ದು, ಭ್ರಷ್ಟಾಚಾರರಹಿತ, ಪಾರದರ್ಶಕ ಆಡಳಿತ ನೀಡಲು  ಕೆಆರ್‌ಎಸ್ ಬೆಂಬಲಿಸಿ. ನಮ್ಮ ಪಕ್ಷವು  ಜನರು ಧೈರ್ಯವಾಗಿ ಜೀವನವನ್ನು ಕಟ್ಟಿಕೊಳ್ಳುವುದನ್ನು ಹೇಳಿಕೊಡುತ್ತದೆ ಎಂದು ಹೇಳಿದರು.

ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಜಾಗೀರದಾರರಾಗಿರುತ್ತಾರೆ. ಆದರೆ ಒಂದು ಕುಟುಂಬಕ್ಕೆ ರಾಜಕೀಯ ಹಾಗೂ ಸಾಮಾಜಿಕ ಹಕ್ಕುಗಳನ್ನು ಅಡವಿಟ್ಟಿದ್ದಾರೆ. ಕಳೆದ ಚುನಾವಣೆ ಗಳಲ್ಲಿ ಗಿಫ್ಟ್‌ ಬಾಕ್ಸ್‌ಗಳನ್ನು ಹಂಚಿದ ಪ್ರಕರಣ ಸಂಬಂಧ ವರ್ಷದ ಹಿಂದೆ ಎಫ್‌ಐಆರ್‌ ಆದರೂ ಇನ್ನೂ ಚಾರ್ಜ್ ಶೀಟ್ ಆಗಿಲ್ಲ. ಆ ಪೊಲೀಸ್ ಠಾಣೆಗಳಿಗೆ ಹೈಕೋರ್ಟ್ ಛೀಮಾರಿ ಹಾಕಿದೆ’ ಎಂದು ಹೇಳಿದರು.

ದಾವಣಗೆರೆ ಈ ಹಿಂದೆ ಕರ್ನಾಟಕದ ಮ್ಯಾಂಚೆಸ್ಟರ್ ಎಂದು ಹೆಸರಾಗಿತ್ತು. ಈಗ ಕಾಲೇಜುಗಳು, ಆಸ್ಪತ್ರೆ, ಮದ್ಯದ ಉದ್ಯಮಗಳು ಎರಡು, ಮೂರು ಕುಟುಂಬಗಳ ಕೈಯಲ್ಲಿವೆ. ಅವಿಭಜಿತ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಇಲ್ಲ. ಖಾಸಗಿ ಆಸ್ಪತ್ರೆಗಳ ಲಾಬಿಯೇ ಇದಕ್ಕೆ ಕಾರಣವಾಗಿದ್ದು, ಜನರು ಚಿಕಿತ್ಸೆಗಾಗಿ ದೂರದ ಮಣಿಪಾಲಕ್ಕೆ ಹೋಗುತ್ತಿದ್ದಾರೆ ಎಂದು ಹೇಳಿದರು.

ರಾಜ್ಯ ಉಪಾಧ್ಯಕ್ಷ ಲಿಂಗೇಗೌಡ ಮಾತನಾಡಿ, ‘ಇಂದು ದಾವಣಗೆರೆ ಜಿಲ್ಲೆಯ ರಾಜಕಾರಣವನ್ನು ಎರಡು ಕುಟುಂಬಗಳು ತಮ್ಮ ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿವೆ. ಇದು ಪ್ರಜಾಪ್ರಭುತ್ವದ ದೇಶ, ಗುಲಾಮರ ದೇಶವಲ್ಲ. ಗುಲಾಮಗಿರಿ ದಾವಣಗೆರೆಯಲ್ಲಿ ಹೋಗಿಲ್ಲ. ಪ್ರಜ್ಞಾವಂತರು ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಕೆಆರ್‌ಎಸ್ ಪಕ್ಷದಿಂದ ಸ್ಪರ್ಧಿಸಿ ಎಂದು ಸಲಹೆ ನೀಡಿದರು.

ಬೈಕ್ ಜಾಥಾದಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಲಿಂಗೇಗೌಡ ಎಸ್. ಎಚ್., ರಾಜ್ಯ ಕಾರ್ಯದರ್ಶಿ ರಘು ಜಾಣಗೆರೆ, ರಾಜ್ಯ ಪ್ರಧಾನ ಕಾರ್ಯದರ್ಶಿ ದೀಪಕ್ ಸಿ. ಎನ್., ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನಯ್ಯ ಬಿ. ಎಸ್., ನರಸಿಂಹ ಮೂರ್ತಿ, ಜಂಟಿ ಕಾರ್ಯದರ್ಶಿ ರಘುಪತಿ ಭಟ್, ಸಂಘಟನಾ ಕಾರ್ಯದರ್ಶಿ ಎಲ್. ಜೀವನ್, ಕೃಷ್ಣ ವಿ. ಬಿ., ಚಂದ್ರಶೇಖರ್ ಮಠದ, ಬಿ. ಜಿ. ಕುಂಬಾರ್, ನಂದ ರೆಡ್ಡಿ, ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್ ಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಿಪ್ಪೇಸ್ವಾಮಿ ಹಾಗೂ ಪದಾಧಿಕಾರಿಗಳು ಇದ್ದರು.

error: Content is protected !!